ADVERTISEMENT

ತಾಳಗುಂದ ಸ್ತಂಭ ಶಾಸನದಲ್ಲಿದೆ ‘ಮಯೂರ’ ಸಿನಿಮಾ ಕಥೆ

ಎಂ.ನವೀನ್ ಕುಮಾರ್
Published 18 ನವೆಂಬರ್ 2022, 4:59 IST
Last Updated 18 ನವೆಂಬರ್ 2022, 4:59 IST
ಶಿರಾಳಕೊಪ್ಪ ಹತ್ತಿರದ ತಾಳಗುಂದದಲ್ಲಿ ಕ್ರಿ.ಶ. 450ರಲ್ಲಿ ಪ್ರತಿಷ್ಠಾಪಿಸಲಾಗಿರುವ ಸ್ತಂಭ ಶಾಸನ
ಶಿರಾಳಕೊಪ್ಪ ಹತ್ತಿರದ ತಾಳಗುಂದದಲ್ಲಿ ಕ್ರಿ.ಶ. 450ರಲ್ಲಿ ಪ್ರತಿಷ್ಠಾಪಿಸಲಾಗಿರುವ ಸ್ತಂಭ ಶಾಸನ   

ಶಿರಾಳಕೊಪ್ಪ: ತಾಳಗುಂದದ ಪ್ರಣವೇಶ್ವರನ ಸನ್ನಿಧಾನದಲ್ಲಿರುವ ಸ್ತಂಭ ಶಾಸನವೇ ನಾಡಿಗೆ ಮೊದಲು ತಾಳಗುಂದ ಗ್ರಾಮವನ್ನು ಪರಿಚಯಿಸಿದ್ದು. ಈ ಶಾಸನದ ಆಧಾರದ ಮೇಲೆ ಈ ಪ್ರದೇಶಕ್ಕೆ 2,000 ವರ್ಷಗಳ ಇತಿಹಾಸ ಇದೆ ಎಂದೂ ತಿಳಿದು ಬರುತ್ತದೆ.

ಈ ಶಾಸನದ ಪ್ರಕಾರ ಪ್ರಣವೇಶ್ವರ ದೇವರನ್ನು ಕದಂಬರಿಗಿಂತ ಪೂರ್ವದಲ್ಲಿ ದಕ್ಷಿಣ ಭಾರತವನ್ನು ಆಳಿದ ಸಾತಕರ್ಣಿಯ ದೊರೆಗಳು (ಶಾತವಾಹನರು) ಪೂಜಿಸುತ್ತಿದ್ದರು ಎನ್ನುವುದು ಅರಿವಿಗೆ ಬರುತ್ತದೆ. ಈ ಶಾಸನದ ಆಧಾರದಲ್ಲಿಯೇ ದೇವುಡು ನರಸಿಂಹ ಶಾಸ್ತ್ರಿಗಳು ಐತಿಹಾಸಿಕ ‘ಮಯೂರ’ ಕಾದಂಬರಿಯನ್ನು 1950ರಲ್ಲಿ ಬರೆದು ಪ್ರಕಟಿಸಿದ್ದರು. ಈ ಕಾದಂಬರಿಯು ಡಾ.ರಾಜ್‌ಕುಮಾರ್ ಅವರಿಗೆ ಚೆನ್ನೈನ ಹಳೆ ಪುಸ್ತಕದ ಅಂಗಡಿಯಲ್ಲಿ ಲಭಿಸುತ್ತದೆ. ‘ಮಯೂರ’ ಕಾದಂಬರಿ ಓದಿ ಪುಳಕಿತರಾದ ಡಾ.ರಾಜ್‌ಕುಮಾರ್ ಅದನ್ನು ಹಠಕ್ಕೆ ಬಿದ್ದು ಸಿನಿಮಾ ಮಾಡುತ್ತಾರೆ. ಈ ವಿಷಯವನ್ನು ಸಾಕಷ್ಟು ಬಾರಿ ಸಂದರ್ಶನದಲ್ಲಿ ರಾಜ್‌ಕುಮಾರ ಅವರೇ ಹೇಳಿದ್ದಾರೆ.

ಈ ಶಾಸನವನ್ನು ಕ್ರಿ.ಶ. 450ರಲ್ಲಿ ಪ್ರತಿಷ್ಠಾಪಿಸಲಾಗಿದೆ. ಅದನ್ನು ‘ಕಾಕುತ್ಸವರ್ಮ’ ಮತ್ತು ‘ಶಾಂತಿವರ್ಮನ’ ಶಾಸನ ಎಂದೂ ಕರೆಯುತ್ತಾರೆ. ಮಯೂರ ವರ್ಮ ಹಾಗೂ ಕದಂಬ ಸಾಮ್ರಾಜ್ಯದ ಬಗ್ಗೆ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟ ಮೊದಲ ಶಾಸನವಿದು. ಈ ಶಾಸನವನ್ನು ಕುಬ್ಜ ಎನ್ನುವ ಕವಿ ಕೆತ್ತನೆ ಮಾಡಿದ್ದಾರೆ. ಇದು ಸಂಸ್ಕೃತ ಭಾಷೆಯಲಿದ್ದು, ಬ್ರಾಹ್ಮಿ ಲಿಪಿಯಲ್ಲಿ ಬರೆಯಲಾಗಿದೆ. ಪೇಟಿಕಾ ಶಿರ ಮಾದರಿಯಲ್ಲಿ ಈ ಶಾಸನವನ್ನು ಕೆತ್ತನೆ ಮಾಡಲಾಗಿದ್ದು, ಯಂತ್ರದಲ್ಲಿ ಪ್ರಿಂಟ್ ತೆಗೆದ ಹಾಗೆ ಅಕ್ಷರಗಳನ್ನು ಕಾಣಬಹುದು.

ADVERTISEMENT

ಶಾಸನ ಲಿಪಿಯ ರಚನೆಯಲ್ಲೂ ತಾಳಗುಂದದ ಶಿಕ್ಷಣ ವ್ಯವಸ್ಥೆ ಇಡೀ ದಕ್ಷಿಣ ಭಾರತದಲ್ಲೇ ಉತ್ತಮೊತ್ತಮ
ವಾಗಿತ್ತೆಂದು ಹೇಳಬಹುದು. ‘ದಕ್ಷಿಣ
ಭಾರತದ ಇತಿಹಾಸದಲ್ಲಿ ಕ್ರಿ.ಶ. 450ರ
ವೇಳೆಗೆ ತಾಳಗುಂದ ಸ್ತಂಭ ಶಾಸನದ
ಅಕ್ಷರಗಳ ಕ್ರಮಬದ್ಧತೆ, ಶಿಸ್ತು, ವಿನ್ಯಾಸ
ಜೊತೆಗೆ ಅಕ್ಷರಗಳ ಸೌಂದರ್ಯದಲ್ಲಿ ಕಂಡುಬರುವ ಶಿಷ್ಟತೆ ಆ ವೇಳೆಯ
ಯಾವ ಶಿಲಾ ಶಾಸನದಲ್ಲೂ ಕಾಣಸಿಗುವುದಿಲ್ಲ’
ಎಂದು ಇತಿಹಾಸ ಸಂಶೋಧಕ ದಿವಂಗತ ಷಾ.ಶೆಟ್ಟರ್ ತಮ್ಮ ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ ಪುಸ್ತಕದಲ್ಲಿ (ಪುಟ ಸಂಖ್ಯೆ–29) ತಿಳಿಸಿದ್ದಾರೆ.

ಶಾಸನದ ಸಾರಾಂಶ:

‘ಒಮ್ಮೆ ಮಯೂರ ಶರ್ಮನು ತನ್ನ ಅಜ್ಜ
ವೀರಶರ್ಮನ ಜೊತೆ ಪಲ್ಲವರ ರಾಜಧಾನಿಯಾಗಿದ್ದ ಕಂಚಿಯ ಘಟಿಕಾಸ್ಥಾನಕ್ಕೆ ತೆರಳಿದ್ದ’ ಎಂದು ತಾಳಗುಂದ ಶಾಸನದ ನಾಲ್ಕನೇ ಸಾಲಿನ 9ನೇ ಶ್ಲೋಕದಿಂದ ತಿಳಿದುಬರುತ್ತದೆ. ಪಲ್ಲವ ರಾಜ ಶಿವಸ್ಕಂದವರ್ಮನು ಸುಮಾರು ಕ್ರಿ.ಶ. 345ರಿಂದ 355ರ ಸಮಯದಲ್ಲಿ ಅಶ್ವಮೇಧಯಾಗವನ್ನು ನಡೆಸುತ್ತಾನೆ. ಆ ಯಾಗಕ್ಕೆ ವೇದಾಧ್ಯಯನ ಕಲಿತು ವೇದ ವೇದಾಂಗ ಶೋಭಿತನಾಗಿದ್ದ ಮಯೂರಶರ್ಮನು ಹೋಗುತ್ತಾನೆ.
ಆ ಸಂದರ್ಭದಲ್ಲಿ ನಡೆದ ಜಗಳ
ಒಂದರಲ್ಲಿ ಶಿವಸ್ಕಂದವರ್ಮನ ಸೈನಿಕರಿಂದ ಮಯೂರ ಅಪಮಾನಿತನಾಗುತ್ತಾನೆ.
ತಕ್ಷಣವೇ ಮಯೂರ ಅಲ್ಲಿನ ಆಳರಸರಲ್ಲಿ ದೂರನ್ನು ನಿವೇದಿಸಿಕೊಂಡರೂ ಅಲ್ಲಿ ಸರಿಯಾದ ಸ್ಪಂದನೆ ಸಿಗದೇ ಪುನಃ ಅವರಿಂದಲೂ ಅವಮಾನವನ್ನು ಅನುಭವಿಸುತ್ತಾನೆ.

ಇದರಿಂದ ಸಹಜವಾಗಿಯೇ ಆತ ಸಿಟ್ಟಿಗೆದ್ದು, ಕಂಚಿಯ ಪಲ್ಲವರ ಮೇಲೆ ಸೇಡು ತೀರಿಸಿಕೊಳ್ಳುವುದಕ್ಕಾಗಿಯೇ ವೇದಾಧ್ಯಯನವನ್ನು ನಿಲ್ಲಿಸಿ, ಶಸ್ತ್ರ
ವಿದ್ಯೆಯನ್ನು ಕಲಿಯಲು ಆರಂಭಿಸುತ್ತಾನೆ. ಅದನ್ನೇ ತಾಳಗುಂದ ಶಾಸನದ ನಾಲ್ಕನೇ ಸಾಲಿನ 11ನೇ ಶ್ಲೋಕದಲ್ಲಿ
ಈ ರೀತಿಯಾಗಿ ಉಲ್ಲೇಖಿಸಲಾಗಿದೆ.

‘ತತ್ರ ಪಲ್ಲವಾಶ್ವ ಸಂಸ್ಥೇನ ಕಲಹೇನ ತೀವ್ರೇಣ ರೋಷಿತಃ|
ಕಲಿಯುಗೇಸ್ಮಿನ್ನಹೋಬತ ಕ್ಷತ್ರಾತ್ಪರಿಪೇಲವಾವಿಪ್ರತಃ |’
ಅಲ್ಲಿಗೆ ಆತ ಕಂಚಿಯನ್ನು ತೊರೆದು ದರ್ಭೆ ಹಿಡಿದು ಯಜ್ಞ ಯಾಗಗಳನ್ನು ಮಾಡಬೇಕಾದವನು ತನ್ನ ‘ಶರ್ಮ’ ಅಭಿದಾನವನ್ನು ತೊರೆದು ಕ್ಷತ್ರಿಯೋಚಿತವಾದ ಯುದ್ಧ ವಿದ್ಯೆಗಳನ್ನು ಕಲಿತು ಕ್ಷತ್ರಿಯ ವರ್ಣ ಸೂಚಕ ಅಭಿದಾನವಾದ ‘ವರ್ಮ’ನಾಗಿ ಬದಲಾವಣೆಗೊಂಡ ಎಂದು ತಿಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.