ADVERTISEMENT

ಶಿವಮೊಗ್ಗ | ಸದ್ಯಕ್ಕಿಲ್ಲ ನೀರಿನ ಸಮಸ್ಯೆ; ಮುಂದೆ ಸಾಧ್ಯತೆ

ನಾಗರಾಜ ಹುಲಿಮನೆ
ಎಚ್.ಎಸ್.ರಘು
ಕುಮಾರ್ ಅಗಸನಹಳ್ಳಿ
ಎಂ.ರಾಘವೇಂದ್ರ
Published 27 ನವೆಂಬರ್ 2023, 6:33 IST
Last Updated 27 ನವೆಂಬರ್ 2023, 6:33 IST
ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಂಜನಾಪುರ ಜಲಾಶಯ ದೃಶ್ಯ.
ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಅಂಜನಾಪುರ ಜಲಾಶಯ ದೃಶ್ಯ.   

ಶಿವಮೊಗ್ಗ: ಜಿಲ್ಲೆಯಾದ್ಯಂತ ಜೂನ್ ತಿಂಗಳ ವಾಡಿಕೆ ಮಳೆಯ ಕೊರತೆಯಿಂದ ನೀರಿನ ಅಭಾವ ತಲೆದೋರಿತ್ತು. ಆದರೆ, ಹಿಂಗಾರು ಮಳೆ ಸುರಿದ ಕಾರಣ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗೆ ಸದ್ಯಕ್ಕೆ ಸಮಸ್ಯೆ ಇಲ್ಲ. ಆದರೆ ಜನವರಿ ವೇಳೆಗೆ ಆತಂಕ ಎದುರಾಗುವ ಸಾಧ್ಯತೆ ಇದೆ. ಕೆಲವೆಡೆ ಈಗಲೇ ಸಮಸ್ಯೆ ಎದುರಾಗಿದೆ.

ಹೊಳೆಹೊನ್ನೂರು ಭಾಗದಲ್ಲಿ ಭದ್ರಾ ಡ್ಯಾಂನಿಂದ ನಾಲೆಗಳಿಗೆ ಹರಿಸುತ್ತಿದ್ದ ನೀರು ಬಂದ್ ಆಗಿದ್ದು, ಬೆಳೆಗಳಿಗೆ ನೀರಿನ ಸಮಸ್ಯೆ ಉಂಟಾಗಿದೆ. ಸಾಗರ ತಾಲ್ಲೂಕು ಭಾಗದಲ್ಲಿ ಸದ್ಯ ನೀರಿನ ಸಮಸ್ಯೆ ಇಲ್ಲ. ಆದರೆ ಜನವರಿ ವೇಳೆಗೆ ನೀರಿನ ಸಮಸ್ಯೆ ಉಲ್ಬಣವಾಗುವ ಸಾಧ್ಯತೆ ಇದೆ.

ಪಟ್ಟಣದ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಪ್ಯಾಪ್ತಿಯ ಕೋಟೆ ಗಂಗೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಮೂರ್ನಾಲ್ಕು ದಿನಕ್ಕೆ ಒಂದು ಬಾರಿ ಮಾತ್ರ ನೀರು ಹರಿಸಲಾಗುತ್ತಿದೆ.

ADVERTISEMENT

ತುಂಗಾ ಜಲಾಶಯಕ್ಕೆ ಸದ್ಯ ಒಳಹರಿವು 1,000 ಕ್ಯುಸೆಕ್ ಇದೆ. ಜಲಾಶಯದ ಎಡ ಹಾಗೂ ಬಲ ನಾಲೆಗಳಿಗೆ 183 ಕ್ಯುಸೆಕ್ ನೀರು ಹರಿಸಲಾಗುತ್ತಿದೆ. ಜಲಾಶಯ ಮಟ್ಟ 588.24ಮೀ ಇದ್ದು, 468 ಕ್ಯುಸೆಕ್ ಹೊರ ಹರಿಸಲಾಗುತ್ತಿದೆ ಎಂದು ಜಲಾಶಯದ ಕಾರ್ಯನಿರ್ವಾಕ ಎಂಜಿನಿಯರ್ ತಿಪ್ಪನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಗ್ಗು ಪ್ರದೇಶಗಳ ಕೃಷಿ ಚಟುವಟಿಕೆಗೆ ಸದ್ಯಕ್ಕೆ ಯಾವುದೇ ಸಮಸ್ಯೆ ತಲೆದೋರಿಲ್ಲ. ಆದರೆ, ಸದ್ಯ ಹಿಂಗಾರು ಹಿನ್ನಡೆಯಾಗಿದೆ. ಇದರಿಂದ ಬೇಸಿಗೆ ಕೃಷಿಗೆ ನೀರು ಒದಗಿಸಲು ನವೆಂಬರ್‌ 28ರಂದು ನಾಲೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗುವುದು. ನಂತರ ಜನವರಿ 10ಕ್ಕೆ ನಾಲೆಗಳಿಗೆ ನೀರು ಹರಿಸಲಾಗುವುದು. ತುಂಗಾ ಜಲಾಶಯ ಅಚ್ಚುಕಟ್ಟು ಪ್ರದೇಶಗಳಿಗೆ ತಿಂಗಳಿಗೆ 9 ದಿನ ಮಾತ್ರ ನೀರು ಹರಿಸಲು ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

‘ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಇಲ್ಲ. ನಗರ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಪ್ರತಿದಿನ 35 ಕ್ಯುಸೆಕ್ ಬಳಸಲಾಗುತ್ತಿದೆ. ಈಗಿರುವ ಜಲಾಶಯ ಮಟ್ಟ ಹಾಗೂ ಒಳಹರಿವಿನಿಂದ 2024ರ ಫೆಬ್ರುವರಿವರೆಗೆ ಪ್ರತಿದಿನ ನೀರು ಹರಿಸಬಹುದು. ಆದರೆ, ಮಳೆಕೊರತೆ ಮುಂದುವರಿದರೆ ಬೇಸಿಗೆಯಲ್ಲಿ ಸಮಸ್ಯೆ ಆಗಬಹುದು. ಜನರು ನೀರನ್ನು ಮಿತವಾಗಿ ಬಳಸಬೇಕು’ ಎಂದು ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಸಿದ್ದಣ್ಣ ತಿಳಿಸಿದರು.

ನೀರಿನ ಕೊರತೆ:

ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಪ್ಯಾಪ್ತಿಯ ಕೋಟೆಗಂಗೂರಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಮೂರ್ನಾಲ್ಕು ದಿನಕ್ಕೆ ಒಂದು ಬಾರಿ ಮಾತ್ರ ನೀರು ಹರಿಸಲಾಗುತ್ತಿದೆ. ಇಲ್ಲಿಯ ಕೆರೆಗಳು ಮಳೆ ಇಲ್ಲದೆ ಬತ್ತಿವೆ.  ಜಾನುವಾರುಗಳಿಗೆ ಬಾಯಾರಿಕೆ ತಣಿಸುವುದು ಕಷ್ಟವಾಗಿದೆ ಎಂದು ಸ್ಥಳೀಯ ನಿವಾಸಿ ಕುಮಾರ್ ವಾಸ್ತವ ತೆರೆದಿಟ್ಟರು.

ಜಲಜೀವನ ಯೋಜನೆ:

ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕವಾಗಿ ಜಲ ಜೀವನ ಯೋಜನೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಸನ್ನಿವಾಸ ಗ್ರಾಮದಲ್ಲಿ 80ಕ್ಕೂ ಹೆಚ್ಚು ಮನೆಗಳಿವೆ. ಆದರೆ, ಈ ಯೋಜನೆಯಿಂದ ತಗ್ಗು ಪ್ರದೇಶಗಳಿಗೆ ಮಾತ್ರ ನೀರು ತಲುಪುತ್ತಿದೆ. ಮೇಲ್ಭಾಗದ ಮನೆಗಳಿಗೆ ನೀರು ತಲುಪುತ್ತಿಲ್ಲ. ಅದೇ ರೀತಿ ನೀರು ಸರಬರಾಜು ಮಾಡುವ ನೀರು ಗಂಟಿ ನೇಮಕ ಮಾಡಿಲ್ಲ ಎಂದು ಸ್ಥಳೀಯರಾದ ಪದ್ಮನಾಭ ದೂರಿದರು.

ಭರತ್
ಅಂಜನಾಪುರ ಜಲಾಶಯದಲ್ಲಿ ಪ್ರಸ್ತುತ 14 ಅಡಿ ನೀರು ಸಂಗ್ರಹವಾಗಿದೆ. ಮುಂದಿನ ವರ್ಷ ಮಳೆಗಾಲದವರೆಗೂ ಈ ನೀರನ್ನು ಶಿಕಾರಿಪುರ ಹಾಗೂ ಶಿರಾಳಕೊಪ್ಪ ಜನರಿಗೆ ಕುಡಿಯಲು ನೀಡಬಹುದಾಗಿದೆ.
-ಭರತ್, ಮುಖ್ಯಾಧಿಕಾರಿ ಪುರಸಭೆ
ಲಭ್ಯವಿರುವ ಭತ್ತದ ಹುಲ್ಲು ಪೂರ್ಣವಾಗಿ ಜಾನುವಾರುಗಳ ಮೇವಿಗೆ ಬಳಕೆಯಾದರೆ ಮೇವಿನ ಕೊರತೆ ಆಗುವುದಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಹುಲ್ಲು ಶುಂಠಿ ಬೆಳೆ ರಕ್ಷಣೆಗೆ ಒಳಸಿದರೆ ಸಮಸ್ಯೆ ಉಂಟಾಗುತ್ತದೆ. ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಶಿವಪ್ರಕಾಶ್ ಕೃಷಿ ತಾಂತ್ರಿಕ ಅಧಿಕಾರಿ ಸಾಗರ

ಅಂಜನಾಪುರ ಜಲಾಶಯ ಭರ್ತಿ: ಸದ್ಯಕ್ಕಿಲ್ಲ ಆತಂಕ

ಶಿಕಾರಿಪುರ: ಪ್ರಸ್ತುತ ಮಳೆಗಾಲದಲ್ಲಿ ಅಂಜನಾಪುರ ಜಲಾಶಯ ಭರ್ತಿಯಾದ ಕಾರಣ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣದ ಜನರಿಗೆ ಕುಡಿಯುವ ನೀರಿನ ಅಭಾವ ಕಂಡುಬಂದಿಲ್ಲ. ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪಟ್ಟಣಕ್ಕೆ ಜಲಾಶಯದಿಂದ ಪೈಪ್‌ಲೈನ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಜಲಾಶಯ ಭರ್ತಿಯಾಗುವಷ್ಟು ಮಳೆಯಾದ ಕಾರಣ ಹೆಚ್ಚಿನ ಸಮಸ್ಯೆ ಕಂಡುಬಂದಿಲ್ಲ. ತುಂಗಾ ನದಿಯಿಂದ ಏತ ನೀರಾವರಿ ಮೂಲಕ ಜಲಾಶಯಕ್ಕೆ ನೀರು ಹರಿಸಿದ ಕಾರಣ ಜಲಾಶಯ ಭರ್ತಿಯಾಗಿದೆ. ಈ ಕಾರಣ ತಾಲ್ಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾಗಿಲ್ಲ. ಆದರೆ ಸಮರ್ಪಕ ಮಳೆಯಾಗದೇ ಬರಗಾಲ ಆವರಿಸಿದ್ದರಿಂದ ಅಡಿಕೆ ತೋಟದ ಮಾಲೀಕರು ಆತಂಕದಲ್ಲಿದ್ದಾರೆ. ಮೆಕ್ಕೆಜೋಳ ಬೆಳೆದ ರೈತರು ಇಳುವರಿ ಬಾರದೇ ನಷ್ಟ ಅನುಭವಿಸಿದ್ದರು. ಆದರೆ ಅಂಜನಾಪುರ ಜಲಾಶಯ ಹಾಗೂ ಅಂಬ್ಲಿಗೊಳ್ಳ ಜಲಾಯಶಗಳು ಭರ್ತಿಯಾದ ಕಾರಣ ಭತ್ತ ಬೆಳೆದ ರೈತರು ಕೊಂಚ ನಿಟ್ಟಿಸಿರುಬಿಟ್ಟಿದ್ದರು. ಎರಡು ದಿನಗಳ ಹಿಂದೆ ಮಳೆಯಾದ್ದರಿಂದ ತೋಟದ ಮಾಲೀಕರು ನಿಟ್ಟುಸಿರುಬಿಟ್ಟಿದ್ದರು. ಆದರೆ ಪ್ರಸ್ತುತ ಬಿಸಿಲಿನ ಬೇಗೆ ಹೆಚ್ಚುತ್ತಿದ್ದು ಅಂತರ್ಜಲ ಮಟ್ಟ ಕಡಿಮೆಯಾಗುತ್ತಿರುವುದು ರೈತ ಸಮುದಾಯದಲ್ಲಿ ಆತಂಕ ಮೂಡಿಸಿದೆ.

ಭದ್ರಾ ನಾಲೆಯ ನೀರು ಬಂದ್

ಕುಮಾರ್ ಅಗಸನಹಳ್ಳಿ ಹೊಳೆಹೊನ್ನೂರು: ಈ ಬಾರಿ ಮಳೆಗಾಲ ಕಡಿಮೆಯಾಗಿದ್ದರಿಂದ ಪಟ್ಟಣದ ಸುತ್ತಲಿನ ಗ್ರಾಮಗಳಲ್ಲಿ ಬರಗಾಲದ ಛಾಯೆ ಆವರಿಸಿದೆ. ಭದ್ರಾ ಡ್ಯಾಂನಿಂದ ನಾಲೆಗಳಿಗೆ ಹರಿಸುತ್ತಿದ್ದ ನೀರು ಬಂದ್ ಆಗಿದ್ದು ದಿನದಿಂದ ದಿನಕ್ಕೆ ಕುಡಿಯುವ ನೀರು ಹಾಗೂ ಬೆಳೆಗಳಿಗೆ ನೀರಿನ ಸಮಸ್ಯೆ ಉಲ್ಬಣವಾಗುತ್ತಿದೆ. ‘ಕಾಡಾ’ ಸಭೆ ನಡೆಸದೇ ಭದ್ರಾ ನಾಲಾಗಳಿಗೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಮುಂದಿನ ಯಾವ ದಿನಾಂಕಕ್ಕೆ ನೀರು ಹರಿಸಲಾಗುವುದು ಎಂದು ನಿಗದಿ ಕೂಡ ಮಾಡಿಲ್ಲ. ದಾವಣಗೆರೆ ರೈತರದೇ ಒಂದು ನಿಲವುವಾದರೇ ಭದ್ರಾವತಿ ತಾಲ್ಲೂಕಿನ ರೈತರ ನಿಲುವು ಇನ್ನೊಂದು.  ಇದರಿಂದ ಅಡಿಕೆ ತೋಟಗಳು ಒಣಗುತ್ತಿವೆ ಎಂಬುದು ಈ ಭಾಗದ ರೈತರ ಆತಂಕ. ಕೆಲವು ಗ್ರಾಮಗಳಲ್ಲಿ ನಾಲೆಯ ನೀರು ಇದ್ದಾಗಲೇ ವಿದ್ಯುತ್ ಸಮಸ್ಯೆಯಿಂದಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿತ್ತು. ಇನ್ನು ನಾಲೆಯ ನೀರು ಬಂದ್ ಆದ ಕಾರಣ ಏನು ಮಾಡುವುದು ಎಂಬುದು ರೈತರ ಆತಂಕ. ಪ್ರತಿನಿತ್ಯ 7 ಗಂಟೆ ನೀಡುತ್ತಿದ್ದ 3 ಪೇಸ್ ವಿದ್ಯುತ್ ಅನ್ನು ಸರ್ಕಾರ ಕೇವಲ 5 ಗಂಟೆಗೆ ಇಳಿಸಿದೆ. ಈ ನಿರ್ಧಾರದಿಂದಾಗಿ ನೀರು ಸಂಗ್ರಹ ಮಾಡಲೂ ಆಗುತ್ತಿಲ್ಲ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಜನವರಿ ಅಂತ್ಯಕ್ಕೆ ನೀರಿನ ಕೊರತೆಯ ಆತಂಕ

ಸಾಗರ: ಈ ವರ್ಷ ತಾಲ್ಲೂಕಿನಲ್ಲಿ ವಾಡಿಕೆಗಿಂತ ಗಣನೀಯ ಪ್ರಮಾಣದಲ್ಲಿ ಮಳೆ ಕಡಿಮೆ ಆಗಿರುವುದರಿಂದ ಮಲೆನಾಡಿನ ಭಾಗದಲ್ಲೂ ಬರದ ಛಾಯೆ ಆವರಿಸಿದೆ. ತಾಲ್ಲೂಕು ಆಡಳಿತದ ಮೂಲಗಳ ಪ್ರಕಾರ ಜನವರಿ ಅಂತ್ಯದವರೆಗೂ ಕುಡಿಯುವ ನೀರಿನ ಪೂರೈಕೆಗೆ ತೊಂದರೆ ಇಲ್ಲ. ಆದರೆ ನಂತರದ ದಿನಗಳಲ್ಲಿ ಸಮಸ್ಯೆ ಗಂಭೀರವಾಗುವ ಆತಂಕ ಎದುರಾಗಿದೆ. ಕಳೆದ ವಾರ ನಡೆದ ಟಾಸ್ಕ್‌ಪೋರ್ಸ್ ಸಮಿತಿಯ ಸಭೆಯಲ್ಲಿ ಪ್ರತಿ ಪಂಚಾಯಿತಿಯಿಂದ ಲಭ್ಯವಿರುವ ಜಲಮೂಲಗಳ ಮಾಹಿತಿ ಪಡೆಯಲಾಗಿದೆ. ಈ ಮೂಲಗಳು ಬತ್ತಿ ಹೋದರೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ವರದಿ ಪಡೆಯಲಾಗಿದೆ. ತಾಲ್ಲೂಕಿನ 34 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ತೀವ್ರವಾಗಿ ಕಾಡಬಹುದು ಎಂದು ಆಡಳಿತಕ್ಕೆ ಮಾಹಿತಿ ಲಭ್ಯವಾಗಿದೆ. ಜಲಜೀವನ್ ಮಿಷನ್ ಯೋಜನೆಯಡಿ ಈ ಗ್ರಾಮಗಳಲ್ಲಿ ಕೊಳವೆಬಾವಿ ಕೊರೆಯಿಸಲು ಸಿದ್ದತೆ ನಡೆದಿವೆ. ಭತ್ತದ ಬೆಳೆಗೆ ಈ ವರ್ಷ ಉತ್ತಮ ಬೆಲೆ ಕಂಡ ಕಾರಣ ಭತ್ತ ಬೆಳೆದವರು ಮಳೆಯ ಕೊರತೆಯ ನಡುವೆಯೂ ಕೊಳವೆಬಾವಿ ಮತ್ತಿತರ ಮೂಲಗಳನ್ನು ಬಳಸಿಕೊಂಡು ಬೆಳೆಯನ್ನು ಕಷ್ಟಪಟ್ಟು ಉಳಿಸಿಕೊಂಡಿದ್ದಾರೆ. ಈಗ ಭತ್ತದ ಕೊಯ್ಲು ನಡೆಯುತ್ತಿದ್ದು ತಾಲ್ಲೂಕಿನಲ್ಲಿ 50000 ಟನ್ ಭತ್ತದ ಹುಲ್ಲಿನ ಮೇವು ಸಂಗ್ರಹವಾಗುವ ನಿರೀಕ್ಷೆ ಕೃಷಿ ಇಲಾಖೆಯದ್ದು. ಈ ಭಾಗದಲ್ಲಿ ಶುಂಠಿ ಬೆಳೆಗೆ ಭತ್ತದ ಹುಲ್ಲನ್ನು ಮುಚ್ಚಿ ಅದನ್ನು ರಕ್ಷಿಸುವ ವಿಧಾನವಿದೆ. ಹೆಚ್ಚು ಹುಲ್ಲು ಶುಂಠಿ ರಕ್ಷಣೆಗೆ ಹೋದರೆ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವ ಅಪಾಯವಿದೆ. ರಾಜ್ಯದ ಕೆಲವು ಪ್ರದೇಶಗಳಲ್ಲಿ ಜೋಳದ ಹುಲ್ಲನ್ನೂ ಮೇವಿನ ರೂಪದಲ್ಲಿ ಬಳಸಲಾಗುತ್ತಿದೆ. ಮಲೆನಾಡಿನಲ್ಲೂ ಇದರ ಸಾಧ್ಯತೆಗಳ ಕುರಿತು ಕೃಷಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. ಜನವರಿ ನಂತರ ಉಂಟಾಗಬಹುದಾದ ನೀರಿನ ಕೊರತೆ ನಿಭಾಯಿಸಲು ಯೋಜನಾ ವರದಿ ಸಿದ್ಧಪಡಿಸಿ ಕಾರ್ಯಪ್ರವೃತ್ತರಾಗಲು ಇಲಾಖೆ ಸಜ್ಜಾಗಿದೆ. ಸಕಾಲದಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ಭರವಸೆ ಇದೆ ಎಂದು ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್ ಗುರುಕೃಷ್ಣ ಶೆಣೈ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.