ತೀರ್ಥಹಳ್ಳಿ: ತಾಲ್ಲೂಕಿನಾದ್ಯಂತ ಮಂಗನ ಕಾಯಿಲೆ ಉಲ್ಬಣಿಸುತ್ತಿದ್ದು, ಶುಕ್ರವಾರ ತಾಲ್ಲೂಕಿನ ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡುಗದ್ದೆ ಗ್ರಾಮದ ಮಹಿಳೆಯೊಬ್ಬರಲ್ಲಿ ಕೆಎಫ್‌ಡಿ ವೈರಾಣು ಇರುವುದು ದೃಢಪಟ್ಟಿದೆ.
‘ತಾಲ್ಲೂಕಿನಲ್ಲಿ ಇದುವರೆಗೆ ಮಂಗನ ಕಾಯಿಲೆಯ 104 ಪ್ರಕರಣ ಪತ್ತೆಯಾದಂತಾಗಿದೆ. ಇವರಲ್ಲಿ ಮೂರು ಮಂದಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬ ಮಹಿಳೆ ಪಟ್ಟಣದ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 98 ಮಂದಿ ಗುಣಮುಖಗಿದ್ದಾರೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಅಶೋಕ್ ತಿಳಿಸಿದ್ದಾರೆ.
‘ಮಂಗನ ಕಾಯಿಲೆಯಿಂದ ತಾಲ್ಲೂಕಿನಲ್ಲಿ ಈ ಬಾರಿ ಇಬ್ಬರು ಮೃತಪಟ್ಟಿದ್ದಾರೆ. ತಾಲ್ಲೂಕಿನ ತನಿಕಲ್, ಕೋಣಂದೂರು, ಕಾನಳ್ಳಿ ಭಾಗದಲ್ಲಿ ರೋಗ ತೀವ್ರವಾಗಿ ಬಾಧಿಸುತ್ತಿದೆ. ಮಂಗನ ಕಾಯಿಲೆ ಕುರಿತು ಈ ಭಾಗದಲ್ಲಿ ತೀವ್ರ ನಿಗಾ ವಹಿಸುವಂತೆ ನೋಡೆಲ್ ಅಧಿಕಾರಿಯನ್ನಾಗಿ ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸುರೇಶ್ ಅವರನ್ನು ನಿಯೋಜನೆಗೊಳಿಸಲಾಗಿದೆ. ಮಣಿಪಾಲದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಅಗತ್ಯಗಳಿಗೆ ಸಂಬಂಧಿಸಿದಂತೆ ನೋಡೆಲ್ ಅಧಿಕಾರಿಯನ್ನಾಗಿ ಆಗುಂಬೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅನಿಕೇತ್ ಅವರನ್ನು ನಿಯೋಜಿಸಲಾಗಿದೆ’ ಎಂದು ಡಾ.ಅಶೋಕ್ ತಿಳಿಸಿದ್ದಾರೆ.
‘ರೋಗ ಪೀಡಿತ ಪ್ರದೇಶಗಳಲ್ಲಿ ಕಾಡಿಗೆ ತೆರಳದಂತೆ ಜನರಲ್ಲಿ ಮನವಿ ಮಾಡಿದರೂ ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಕಾಡಿನಿಂದ ದರಗು (ಒಣಗಿದ ಎಲೆ) ಸಂಗ್ರಹಿಸಲು ಜನರು ಕಾಡಿಗೆ ಹೋಗುತ್ತಲೇ ಇದ್ದಾರೆ. ಇದರಿಂದಾಗಿ ರೋಗ ಹೆಚ್ಚು ವ್ಯಾಪಿಸುವ ಸಾಧ್ಯತೆ ಇದೆ. ನಿತ್ಯದ ಜೀವನ ಕ್ರಮ ಬದಲಾಯಿಸಿಕೊಳ್ಳಲು ಜನರು ಮುಂದಾಗಬೇಕು’ ಎಂದು ತಿಳಿಸಿದ್ದಾರೆ.
ಆರಗದಲ್ಲಿ ಸಮಾಲೋಚನಾ ಸಭೆ: ಮಂಗನ ಕಾಯಿಲೆ, ಕೊರೊನಾ ಕುರಿತು ಶಾಸಕ ಆರಗ ಜ್ಞಾನೇಂದ್ರ ಶುಕ್ರವಾರ ಆರಗದಲ್ಲಿ ಸಮಾಲೋಚನಾ ಸಭೆ ನಡೆಸಿದರು.
‘ಮಂಗನ ಕಾಯಿಲೆ, ಕೊರೊನಾ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಸೂಚಿಸುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು. ಕಾಡಿನಿಂದ ದರಗು ತರುವುದನ್ನು ರೈತರು ನಿಲ್ಲಿಸಬೇಕು. ಕಾಡಿಗೆ ತೆರಳುವವರು ತಪ್ಪದೇ ಡಿಎಂಪಿ ತೈಲವನ್ನು ಹಚ್ಚಿಕೊಳ್ಳಬೇಕು’ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅಪೂರ್ವ ಶರಧಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಂದವಳ್ಳಿ ಸೋಮಶೇಖರ್, ಪ್ರಶಾಂತ್ ಕುಕ್ಕೆ, ಆರಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್ ಇದ್ದರು.
ಮೃತರ ಮನೆಗೆ ಶಾಸಕ ಆರಗ ಭೇಟಿ: ಮಂಗನ ಕಾಯಿಲೆಯಿಂದ ಮೃತಪಟ್ಟ ಬೆಜ್ಜವಳ್ಳಿ ಗ್ರಾಮ ಪಂಚಾಯಿತಿ ಚೀರನಕೊಡಿಗೆ ಗ್ರಾಮದ ಗುಲಾಬಿ ಹಾಗೂ ಬಾಂಡ್ಯಕುಕ್ಕೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಬೀಡು ಗ್ರಾಮದ ದೇವದಾಸ್ ಅವರ ಮನೆಗೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಸಾಂತ್ವನ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.