ADVERTISEMENT

ಮಲೆನಾಡು: ಈಗ ಹುಲಿ ವೇಷಧಾರಿಗಳದ್ದೆ ಸದ್ದು!

ನವರಾತ್ರಿ, ದೀಪಾವಳಿ, ಮೊಹರಂ ಸಂಭ್ರಮಕ್ಕೆ ಸಾಥ್

ನಿರಂಜನ ವಿ.
Published 9 ಅಕ್ಟೋಬರ್ 2024, 7:33 IST
Last Updated 9 ಅಕ್ಟೋಬರ್ 2024, 7:33 IST
ತೀರ್ಥಹಳ್ಳಿಯಲ್ಲಿ 2023ರ ರಾಮೇಶ್ವರ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹುಲಿವೇಷಧಾರಿಗಳಾದ ಧನು ಮಿಲ್ಕೇರಿ ಮತ್ತು ಶ್ರೀನಿವಾಸ್‌ ಮಿಲ್ಕೇರಿ
ತೀರ್ಥಹಳ್ಳಿಯಲ್ಲಿ 2023ರ ರಾಮೇಶ್ವರ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹುಲಿವೇಷಧಾರಿಗಳಾದ ಧನು ಮಿಲ್ಕೇರಿ ಮತ್ತು ಶ್ರೀನಿವಾಸ್‌ ಮಿಲ್ಕೇರಿ   

ತೀರ್ಥಹಳ್ಳಿ: ಮಲೆನಾಡ ಗತವೈಭವ ನೆನಪಿಸುವ ದೇಸಿ ಹುಲಿವೇಷ ಗಲ್ಲಿಗಳಲ್ಲಿ ಸದ್ದು ಮಾಡುತ್ತಿದೆ. ಕುಣಿತ ಸಾಂಪ್ರದಾಯಿಕ ಹುಲಿ ಬೇಟೆಯ ರೂಪಕವಾಗಿದೆ. ಇಷ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಜೀವನಕ್ಕೆ ಮತ್ತು ಸಾಕು ಪ್ರಾಣಿಗಳಿಗೆ ತೊಂದರೆ ಆಗದಂತೆ ಹರಕೆ ರೂಪದಲ್ಲಿ ವೇಷ ಧರಿಸಲಾಗುತ್ತದೆ.

ಹುಲಿಯಂತೆ ಬೇಟೆ ಹುಡುಕುವುದು, ಹೊಂಚು ಹಾಕುವುದು, ಬೇಟೆ ಕಂಡೊಡನೆ ಖುಷಿ ಪಡುವುದು ವಿಶೇಷ. ಹುಲಿ ಕುಣಿತದ ತಾಸೆ ಸದ್ದು ಕಿವಿಗಳಿಗೆ ನಾಟುತ್ತಿದ್ದಂತೆ ಹಿರಿಯರು, ಮಕ್ಕಳು, ಯುವಕ-ಯುವತಿಯರು ಹೆಜ್ಜೆ ಹಾಕಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಹುಲಿವೇಷ ದಸರಾ ಹಬ್ಬದ ಸಡಗರ ಹೆಚ್ಚಿಸಿದೆ.

ನವರಾತ್ರಿ, ದೀಪಾವಳಿ, ಮೊಹರಂ ಸಂದರ್ಭ ಹುಲಿವೇಷ ಧರಿಸುವುದು ವಾಡಿಕೆ. ಸೌಹಾರ್ದಯುತವಾಗಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್‌ ಸಮುದಾಯದವರು ಬಣ್ಣ ಹಾಕುತ್ತಾರೆ. ಬಣ್ಣ ಹಚ್ಚಿದ ಕಲಾವಿದರು ತಮ್ಮ ಆತ್ಮೀಯರ ಮನೆಗಳಿಗೆ ತೆರಳಿ ಪ್ರದರ್ಶನ ನೀಡುತ್ತಾರೆ. ಕುಣಿತಕ್ಕೆ ಪ್ರತಿಫಲವಾಗಿ ಅಕ್ಕಿ, ಬೆಲ್ಲ, ಧಾನ್ಯ, ಹಣ ಸ್ವೀಕರಿಸುತ್ತಾರೆ.

ADVERTISEMENT

ತೀರ್ಥಹಳ್ಳಿ ಭಾಗದಲ್ಲಿ ಹುಲಿಕುಣಿತ ಕಲಾವಿದರು ತಂಡಗಳಾಗಿ ಪ್ರದರ್ಶನ ನೀಡುವುದಿಲ್ಲ. ಒಬ್ಬ ಕಲಾವಿದ ಮಾತ್ರ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ಜೊತೆಗೆ ಕೋವಿಧಾರಿ ನೋಡಬಹುದಾಗಿದೆ.

ಪರಿಸರ ಸ್ನೇಹಿ ಬಣ್ಣ: ಹುಲಿ ವೇಷಕ್ಕೆ ಹಳದಿ, ಕಪ್ಪು, ಬಿಳಿ, ಕೆಂಪು, ಹಸಿರು ಬಣ್ಣ ಬಳಕೆ ಮಾಡಲಾಗುತ್ತದೆ. ಅಡುಗೆ ಅರಿಶಿನ, ಕೆಂಪು ಕಲ್ಲು, ಹಸಿರೆಲೆ, ಅಕ್ಕಿ, ದೀಪದ ಕರಿ ಬಳಸುತ್ತಾರೆ. ಅದನ್ನು ಆರ್ದಲ ಎನ್ನಲಾಗುತ್ತದೆ. 15 ದಿನ ಮುಂಚಿತವಾಗಿ ಬಣ್ಣ ಮಿಶ್ರಣ ಮಾಡಿ ಅದಕ್ಕೆ ಮೊಟ್ಟೆ, ಎಣ್ಣೆ ಬೆರೆಸಿ ಅಂಟು ಮಾಡಲಾಗುತ್ತದೆ. ಬಣ್ಣದಿಂದ ಪಟ್ಟೆ, ಚಿಟ್ಟೆ, ಚುಕ್ಕಿ, ಬಬ್ರಿಹುಲಿ ವೇಷ ವಿನ್ಯಾಸಗೊಳಿಸಿ ನಂತರ ಅದರ ಮೇಲೆ ಹೊಳೆಯುವ ಸುನೇರಿ ಪುಡಿ ಹಾಕುತ್ತೇವೆ ಎಂದು ಕಲಾವಿದ ಯಡೇಹಳ್ಳಿಕೆರೆ ರಮೇಶ್‌ ಹೇಳುತ್ತಾರೆ.

ಚರ್ಮ ವಾದ್ಯದ ಸದ್ದು: ಕುಣಿತಕ್ಕೆ ಪ್ರಧಾನ ಆಕರ್ಷಣೆ ನೀಡುವ ತಾಸೆ ಅಥವಾ ಚರ್ಮವಾದ್ಯ. ಕುಣಿತಕ್ಕೆ ತಕ್ಕಂತೆ 3, 6, 12 ಪೆಟ್ಟುಗಳನ್ನು ಬಾರಿಸಲಾಗುತ್ತದೆ. ತಾಸೆ ತಾಳಕ್ಕೆ ಜೊತೆಯಾಗಿ ಡೋಲು, ಕ್ವಾರ್ನೆಟ್‌, ಕ್ಲಾರ್ನೆಟ್‌, ಟ್ರಂಫೆಟ್‌ ಬಳಕೆ ಮಾಡಲಾಗುತ್ತದೆ. ಈಚೆಗೆ ಮಳೆಯಲ್ಲಿ ತೊಯ್ದು ಚರ್ಮ ವಾದ್ಯ ಹಾಳಾಗುವುದರಿಂದ ಫೈಬರ್‌ ಶೀಟ್‌ ಬಳಕೆಯಲ್ಲಿದೆ.

ಚಕ್ರಾಸನ ಭಂಗಿಯಲ್ಲಿ ನೆಲದ ಮೇಲೆ ಇಟ್ಟ ಹಣ ಬಾಯಿಯಿಂದ ಕಚ್ಚಿ ಮೇಲೆತ್ತುವುದು. ವ್ಯಾಘ್ರಾಸನ ಭಂಗಿಯಲ್ಲಿ ನಿಂಬೆಹಣ್ಣು ಒಡೆಯುವುದು. ಚೇಳುಗಳಂತೆ ನೆಲದಲ್ಲಿ ಬಗ್ಗಿ ನಿಂಬೆಹಣ್ಣು ಕಚ್ಚುವ ವಿಧಾನ ಹುಲಿಕುಣಿತದ ಜೀವಾಳ.

ತೀರ್ಥಹಳ್ಳಿಯ ರಾಮೇಶ್ವರ ದಸರಾ ಮೆರವಣಿಗೆಯಲ್ಲಿ ಕೋವಿಧಾರಿಯೊಬ್ಬರು ಹುಲಿಬೇಟೆ ಚಿತ್ರಣ ಸೃಷ್ಟಿಸಿರುವುದು
ತೀರ್ಥಹಳ್ಳಿಯ ರಾಮೇಶ್ವರ ದಸರಾ ಮೆರವಣಿಗೆಯಲ್ಲಿ ಕೋವಿಧಾರಿಯೊಬ್ಬರು ಹುಲಿಬೇಟೆ ಚಿತ್ರಣ ಸೃಷ್ಟಿಸಿರುವುದು
ತೀರ್ಥಹಳ್ಳಿಯ ಗಣೇಶೋತ್ಸವ ಮೆರವಣಿಗೆಗಾಗಿ ಬಣ್ಣ ಹಚ್ಚಿರುವ (ಎಡದಿಂದ ಬಲಕ್ಕೆ) ಪ್ರತೀಕ ಬೆಟ್ಟಮಕ್ಕಿ ರವಿ ಜಿಗಳಗೋಡು ಧನು ಮಿಲ್ಕೇರಿ ನಿಶಾಂತ್‌ ಬುಲ್ಲಿ 
ಹುಲಿವೇಷ ಸ್ಪರ್ಧೆಯಲ್ಲಿ 1965ರಿಂದ ಭಾಗವಹಿಸುತ್ತಿದ್ದೇನೆ. ಯುವ ಕಲಾವಿದರು ಕಲೆ ಉಳಿಸಿ ಬೆಳೆಸುತ್ತಿರುವುದು ಸಂತಸ ತಂದಿದೆ.
–ಎಚ್.ಆರ್. ಮಹಾಬಲ, ಹಿರಿಯ ವೇಷಧಾರಿ
ಕುರಿ ಚರ್ಮ ಬಳಸಿ ತಾಸೆ ಮಾಡುತ್ತಿದ್ದುದ್ದರಿಂದ ಭಾರೀ ಸದ್ದು ಬರುತ್ತಿತ್ತು. ಮಳೆ ಚಳಿಯ ಕಾರಣಕ್ಕೆ ಈಗ ಫೈಬರ್‌ ಬಳಸುತ್ತಿದ್ದೇವೆ. 40 ವರ್ಷಗಳಿಂದ ತಾಸೆ ಬಾರಿಸುತ್ತಿದ್ದೇನೆ.
–ಟಿ.ಎಸ್.‌ ಸದಾಶಿವ ದೇವಾಡಿಗ, ತಾಸೆ ವಾದಕ
ಬಣ್ಣ ಬಳಿದ ನಂತರ ಹೊಟ್ಟೆ ಬೆನ್ನಿನ ಭಾಗದಲ್ಲಿ ಹುಲಿವೇಷ ಪಾತ್ರಧಾರಿಗಳು ಕೇಳುವ ರೀತಿಯ ಚಿತ್ರಗಳನ್ನು ಬಿಡಿಸಿಕೊಡುತ್ತೇನೆ.
–ಎಸ್.ಜಿ.ಮೊಹಮ್ಮದ್‌ ಜಬಿವುಲ್ಲಾ, ಕುಂಚ ಕಲಾವಿದ

ರೋಚಕ ಕುರಿ ಬೇಟೆ..

ಹುಲಿವೇಷ ಸ್ಪರ್ಧೆ ಭಾಗವಾಗಿ ಕುರಿ ಬೇಟೆಯ ಸನ್ನಿವೇಶವನ್ನು ಕುಣಿತದ ಮೂಲಕ ಸೃಷ್ಟಿಸಲಾಗುತ್ತದೆ. ಹುಲಿ ವೇಷಧಾರಿ ಕೈಗಳನ್ನು ಬೆನ್ನಹಿಂದೆ ಕಟ್ಟಿ ಮುಂದೆ ಬಾಗಿ ಎದುರು ನಿಂತ ಕುರಿಯನ್ನು ಬಾಯಿಯಿಂದ ಎತ್ತಿ ಹಿಂಭಾಗಕ್ಕೆ ಎಸೆಯುತ್ತಾನೆ. ಆರಂಭದಲ್ಲಿ 6 ರಿಂದ 7 ಕೆ.ಜಿ. ತೂಕದ ಕುರಿ ಎತ್ತುತ್ತಿದ್ದೆನು. ಕಳೆದ ವರ್ಷ 35 ಕೆ.ಜಿ ತೂಕದ ಕುರಿ ಎತ್ತಿದ್ದೇನೆ ಎಂದು ತೀರ್ಥಹಳ್ಳಿಯ ಸಿದ್ದೇಶ್ವರ ಬಡಾವಣೆಯ ಹುಲಿವೇಷ ಪಾತ್ರಧಾರಿ ವಸಂತ ಬೀಗಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.