ADVERTISEMENT

ತೀರ್ಥಹಳ್ಳಿ | ಬಿಜೆಪಿ ದಸರಾ ಉತ್ಸವ.. ಕಾಂಗ್ರೆಸ್‌ ಹುಲಿವೇಷ ಸ್ಪರ್ಧೆ...

ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾವೇರಿದ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 15:25 IST
Last Updated 7 ನವೆಂಬರ್ 2024, 15:25 IST
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗುರುವಾರ ಬಿರುಸಿನ ವಾಗ್ವಾದ ನಡೆಯಿತು.
ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗುರುವಾರ ಬಿರುಸಿನ ವಾಗ್ವಾದ ನಡೆಯಿತು.   

ತೀರ್ಥಹಳ್ಳಿ: ‘ಪಟ್ಟಣ ಪಂಚಾಯಿತಿ ದೇಣಿಗೆಯಿಂದ ವಿಜಯದಶಮಿ ಸಂದರ್ಭ ಏರ್ಪಡಿಸಿದ್ದ ದಸರಾ ಉತ್ಸವ ಮತ್ತು ಹುಲಿವೇಷ ಸ್ಪರ್ಧೆ ರಾಜಕೀಯ ಪಕ್ಷದ ಕಾರ್ಯಕ್ರಮವಾಗಿದೆ’ ಎಂದು ಗುರುವಾರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ರಹಮತ್‌ ಉಲ್ಲಾ ಅಸಾದಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ನಡುವೆ ಪರಸ್ಪರ ತೀವ್ರ ವಾಗ್ವಾದ ಸೃಷ್ಟಿಸಿತು.

‘ರಾಜ್ಯಮಟ್ಟದ ಹುಲಿವೇಷ ಸ್ಪರ್ಧೆಗೆ ಪಟ್ಟಣ ಪಂಚಾಯಿತಿಯಿಂದ ₹ 50,000 ದೇಣಿಗೆ ನೀಡಲಾಗಿದೆ. ಅದು ಸಾರ್ವಜನಿಕ ಹುಲಿವೇಷ ಸ್ಪರ್ಧೆಯಾಗದೆ ಕಾಂಗ್ರೆಸ್‌ ಪಕ್ಷದ ವೇದಿಕೆಯಾಗಿ ಮಾರ್ಪಟ್ಟಿತ್ತು. ಅನುದಾನ ನೀಡುವಾಗ ಜಿಲ್ಲಾಧಿಕಾರಿ ಅನುಮೋದನೆ ಅಗತ್ಯ ಇದೆ. ಕಾನೂನು ಉಲ್ಲಂಘನೆ ಮಾಡಿದ್ದೀರ’ ಎಂದು ಬಿಜೆಪಿ ಸದಸ್ಯ ಸಂದೇಶ ಜವಳಿ ತಕರಾರು ಎತ್ತಿದರು.

ಇದನ್ನು ತೀವ್ರವಾಗಿ ಖಂಡಿಸಿದ ಕಾಂಗ್ರೆಸ್‌ ಸದಸ್ಯ ಬಿ.ಆರ್.ರಾಘವೇಂದ್ರ ಶೆಟ್ಟಿ, ‘ಸಾರ್ವಜನಿಕ ಕಾರ್ಯಕ್ರಮಕ್ಕೆ ₹ 50,000 ದೇಣಿಗೆ ನೀಡುವ ವಿಶೇಷ ಅಧಿಕಾರ 1967 ಕಲಂ 43/2 ಪ್ರಕಾರ ಕಾನೂನು ದತ್ತವಾಗಿ ಅಧ್ಯಕ್ಷರಿಗೆ ಇದೆ. ಅದನ್ನು ಪ್ರಶ್ನಿಸುವ ಮೊದಲು ನಿಯಮಾವಳಿ ಚೆನ್ನಾಗಿ ಓದಿಕೊಂಡು ಬನ್ನಿ. ಅಷ್ಟಕ್ಕೂ ಭಾಗವಹಿಸಿದ ಕಲಾವಿದರು ಹಿಂದುಳಿದ ವರ್ಗದವರು. ಇದನ್ನು ಸಹಿಸಲು ನಿಮಗೆ ಆಗುವುದಿಲ್ಲವೇ’ ಎಂದು ಕುಟುಕಿದರು.

ADVERTISEMENT

‘ನೀವು ದಸರಾ ಉತ್ಸವ ಆಚರಣೆಗೆ ₹ 2.5 ಲಕ್ಷ ಅನುದಾನ ಪಡೆದುಕೊಂಡಿದ್ದೀರಿ. ಆದರೆ ಸೌಜನ್ಯಕ್ಕೂ ಪಟ್ಟಣ ಪಂಚಾಯಿತಿ ಅಧ್ಯಕ್ಷರನ್ನು ಆಹ್ವಾನ ಪತ್ರಿಕೆ ಮುದ್ರಿಸುವ ವೇಳೆ ಗಣನೆಗೆ ತೆಗೆದುಕೊಂಡಿಲ್ಲ. ಅಲ್ಲದೆ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರನ್ನು ವೇದಿಕೆಗೆ ಪರಿಗಣಿಸಿ ಕಾಂಗ್ರೆಸ್– ಜೆಡಿಎಸ್‌ ಅಧ್ಯಕ್ಷರನ್ನು ಕಡೆಗಣಿಸಿದ್ದೀರಿ. ಅದು ಬಿಜೆಪಿ ಕಾರ್ಯಕ್ರಮ ಅಲ್ಲವೇ’ ಎಂದು ತಿರುಗೇಟು ನೀಡಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ಧ್ವನಿಗೂಡಿಸಿದರು.

‘ಅವೈಜ್ಞಾನಿಕವಾಗಿ ಸಾರ್ವಜನಿಕ ಶೌಚಾಲಯ ಗುಂಡಿ ನಿರ್ಮಿಸಲಾಗಿದೆ. ಅದನ್ನು ದುರಸ್ತಿಗೊಳಿಸಬೇಕು. ಪಟ್ಟಣದಲ್ಲಿ ಸುಸಜ್ಜಿತ ನಾಮಫಲಕ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾ ಇಲ್ಲದೆ ತೊಂದರೆ ಆಗುತ್ತಿದೆ. ಸಿ.ಸಿ.ಟಿ.ವಿ. ಕ್ಯಾಮೆರಾ ವ್ಯವಸ್ಥೆ ಸೇರಿ ವಿವಿಧ ಕಾಮಗಾರಿಗೆ ಅನುಮೋದನೆ ನೀಡಬೇಕು ಎಂದು ಟಿ.ರಹಮತ್‌ ಉಲ್ಲಾ ಅಸಾದಿ ಸಭೆಯ ಗಮನ ಸೆಳೆದರು.

ಉಪಾಧ್ಯಕ್ಷೆ ಗೀತಾ ರಮೇಶ್, ಮುಖ್ಯಾಧಿಕಾರಿ ಡಿ.ನಾಗರಾಜ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.