ನಿರಂಜನ ವಿ.
ವರ್ಷದಿಂದ ನಿರ್ವಹಣೆ ಇಲ್ಲದೆ ಬಾಳೇಬೈಲು ವೆಂಕಟರಮಣ ದೇವಸ್ಥಾನ ಮುಂಭಾಗದ ಉದ್ಯಾನವು ಸೊರಗಿತ್ತು. ಉದ್ಯಾನವು ಪಟ್ಟಣ ಪಂಚಾಯಿತಿಗೆ ಸೇರಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿತ್ತು. ಇದನ್ನು ನೋಡಿ ಮರುಗಿದ ಕಡಿದಾಳು ದಯಾನಂದ ಅವರು ಉದ್ಯಾನ ಪುನರುಜ್ಜೀವನದ ಸಂಕಲ್ಪ ಮಾಡಿದರು.
ತೀರ್ಥಹಳ್ಳಿ: ನಿರ್ವಹಣೆ ಇಲ್ಲದೆ ಸೊರಗಿದ್ದ ಇಲ್ಲಿನ ಬಾಳೇಬೈಲು ವೆಂಕಟರಮಣ ದೇವಸ್ಥಾನ ಮುಂಭಾಗದ ಉದ್ಯಾನಕ್ಕೆ ಕಾಯಕಲ್ಪ ನೀಡಲಾಗಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ.
ಮಲೆನಾಡು ಕ್ಲಬ್ ಸ್ಥಾಪಕ ಅಧ್ಯಕ್ಷ ಕಡಿದಾಳು ದಯಾನಂದ ಮತ್ತು ಸ್ನೇಹಿತರು ಉದ್ಯಾನಕ್ಕೆ ಹೊಸ ರೂಪ ನೀಡಿದ್ದು, ‘ಸಂಜೆ ಸಮಯ ಕಳೆಯಲು ಒಳ್ಳೆಯ ಉದ್ಯಾನ ಇಲ್ಲ. ಮಕ್ಕಳ ಜೊತೆ ತಿರುಗಾಡಲು ಪ್ರಶಾಂತವಾದ ವಾತಾವರಣವಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಿದ್ದವರಿಗೆ ಸಂತಸ ತಂದಿದೆ.
ಉದ್ಯಾನವು ವರ್ಷದಿಂದ ನಿರ್ವಹಣೆ ಇಲ್ಲದೆ ಸೊರಗಿತ್ತು. ಮಕ್ಕಳ ಆಟಿಕೆ, ಕುರ್ಚಿಗಳು ಸೇರಿ ಪರಿಕರಗಳು ಹಾಳಾಗಿದ್ದವು. ಉದ್ಯಾನವು ಪಟ್ಟಣ ಪಂಚಾಯಿತಿಗೆ ಸೇರಿದ್ದು, ಅನೈತಿಕ ಚಟುವಟಿಕೆ ತಾಣವಾಗಿ ಮಾರ್ಪಟ್ಟಿತ್ತು. ಇದನ್ನು ನೋಡಿ ಮರುಗಿದ ಕಡಿದಾಳು ದಯಾನಂದ ಅವರು ಉದ್ಯಾನ ಪುನರುಜ್ಜೀವನದ ಸಂಕಲ್ಪ ಮಾಡಿದರು. ನರ್ಸರಿಯನ್ನು ಕಟ್ಟಿ ಬೆಳೆಸಿದ ಅನುಭವ ಹೊಂದಿರುವ ಅವರು, ಆಲಂಕಾರಿಕ ಗಿಡಗಳನ್ನು ಬೆಳೆಸಲು ನಿರ್ಧರಿಸಿದರು. ಇದು ಕೊಂಚ ದುಬಾರಿ ಮತ್ತು ಹೆಚ್ಚು ಸಮಯ ಹಿಡಿಯುವುದರಿಂದ ತಮ್ಮೊಂದಿಗೆ ಹಲವು ಸಮಾನ ಮನಸ್ಕ ಸ್ನೇಹಿತರನ್ನು ಜತೆಗೆ ಸೇರಿಸಿಕೊಂಡು ಉದ್ಯಾನಕ್ಕೆ ಮರು ಜೀವ ನೀಡಿದ್ದಾರೆ.
ಉದ್ಯಾನದಲ್ಲಿ ಹಲವು ಬಗೆಗಳಿವೆ. ಸ್ಥಳೀಯ ಪರಿಸರ ಮತ್ತು ಜನರ ಆದ್ಯತೆಗೆ ತಕ್ಕಂತೆ ವಿನ್ಯಾಸಗೊಳಿಸುವುದು ಮುಖ್ಯ. ಭೂಮಿಯ ವಿಸ್ತೀರ್ಣ, ಗಾರ್ಡನ್ ಮಾದರಿ, ಸಸ್ಯ, ಮರಗಳ ಬೆಳವಣಿಗೆ, ಕೆರೆ, ಕಾರಂಜಿ, ಬೆಂಚ್, ನಡಿಗೆ ದಾರಿ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣೆ ಮಾಡಬೇಕು.ಕಡಿದಾಳು ದಯಾನಂದ
ಮಲೆನಾಡು ಕ್ಲಬ್ ಆಡಳಿತ ಮಂಡಳಿ, ಭದ್ರಾವತಿಯಲ್ಲಿ ನರ್ಸಿಂಗ್ ಹೋಂ ನಡೆಸುತ್ತಿರುವ ಡಾ.ನಾರಾಯಣ ಭಟ್, ಶಿವಮೊಗ್ಗದ ಅನ್ನಪೂರ್ಣ ನರ್ಸರಿ ಮುಂತಾದ ಆಸಕ್ತರನ್ನು ಸಂಪರ್ಕಿಸಿ ಆರ್ಥಿಕ ಸಹಕಾರ ಪಡೆದು ವಿಶೇಷ ಪ್ರಬೇಧದ ಸಸ್ಯಗಳನ್ನು ಪಡೆದುಕೊಂಡಿದ್ದರು. ಅಂದಾಜು ₹ 2.50 ಲಕ್ಷ ವೆಚ್ಚದಲ್ಲಿ ಉದ್ಯಾನ ಮರು ನಿರ್ಮಾಣದ ಕಾರ್ಯವನ್ನು ಕಳೆದ ವರ್ಷದ ಮಳೆಗಾಲದಲ್ಲಿ ನಡೆಸಿದ್ದರು. ಇದೀಗ ಸಸ್ಯಗಳು ಚಿಗುರೊಡೆದಿದ್ದು ಮಲೆನಾಡಿನ ಸ್ವಚ್ಛಂದ ಪರಿಸರ ಕಾಣಸಿಗುತ್ತದೆ. ತಂಗಾಳಿ, ಪಕ್ಷಿಗಳ ಕಲರವ, ನೈಸರ್ಗಿಕ ಗಿಡಮರ, ಕಲಾತ್ಮಕ ಸಸ್ಯರಾಶಿ, ತುಂಬಿ ಹರಿಯುವ ತುಂಗೆಯ ವಿಹಂಗಮ ನೋಟದೊಂದಿಗೆ ಆಕರ್ಷಣೀಯ ಕೇಂದ್ರವಾಗಿ ಬದಲಾಗಿದೆ.
‘ಉದ್ಯಾನದಲ್ಲಿ ಹಲವು ಬಗೆಗಳಿವೆ. ಸ್ಥಳೀಯ ಪರಿಸರ ಮತ್ತು ಜನರ ಆದ್ಯತೆಗೆ ತಕ್ಕಂತೆ ವಿನ್ಯಾಸಗೊಳಿಸುವುದು ಮುಖ್ಯ. ಭೂಮಿಯ ವಿಸ್ತೀರ್ಣ, ಗಾರ್ಡನ್ ಮಾದರಿ, ಸಸ್ಯ, ಮರಗಳ ಬೆಳವಣಿಗೆ, ಕೆರೆ, ಕಾರಂಜಿ, ಬೆಂಚ್, ನಡಿಗೆ ದಾರಿ ಮುಂತಾದವುಗಳನ್ನು ಗಮನದಲ್ಲಿಟ್ಟುಕೊಂಡು ನಿರ್ವಹಣೆ ಮಾಡಬೇಕು. ಜಾನುವಾರಿಗೆ ತುತ್ತಾಗದಂತೆ ಬೇಲಿ ನಿರ್ಮಾಣ, ನೀರು ಸರಿಯಾಗಿ ಲಭಿಸಿದರೆ ಗಿಡಗಳ ರಕ್ಷಣೆಗೆ ಅನುಕೂಲವಾಗುತ್ತದೆ. ಬೃಹತ್ ಮರಗಳು ಇದ್ದರೆ ಕಾಲಕ್ಕೆ ತಕ್ಕಂತೆ ರೆಂಬೆಗಳನ್ನು ಕಟಾವು ಮಾಡಬೇಕಾಗುತ್ತದೆ’ ಎಂದು ಕಡಿದಾಳು ದಯಾನಂದ ಅವರು ತಿಳಿಸಿದರು.
ಟ್ರಯಂಗಲರಿ ಫಾರ್ಮ್ಸ್, ನೀಲಿ ನೆತ್ತಿರ್ಕಿ, ಡೆಲಸ್ಟೋಮಿಯಾ, ಪ್ಯಾಂಡನಸ್, ವಾಟರ್ ಬ್ರೆಷ್, ಸೈಕ್ಯಾಸ್, ಹೊಸದಾಸವಾಳ, ರಾಯಲ್ ಫಾರ್ಮ್ಸ್, ಅಜೇಲಿಯಾ ಮುಂತಾದ ದುಬಾರಿ ಆಲಂಕಾರಿಕ ಸಸ್ಯಗಳು ಉದ್ಯಾನದಲ್ಲಿವೆ. ಕಷ್ಟಪಟ್ಟು ಬೆಳೆಸಿದ ಗಿಡಗಳನ್ನು ಕೆಲವರು ಕಿತ್ತೊಯ್ದಿದ್ದು, ಹೀಗೆ ಮಾಡಬಾರದು. ಉದ್ಯಾನವನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಎಲ್ಲರೂ ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.