ಶಿವಮೊಗ್ಗ: ಕುಷ್ಟರೋಗಿಗಳ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಲು,ಕುಷ್ಟರೋಗ ಕುರಿತು ಜಾಗೃತಿ ಮೂಡಿಸಲು ಜ.31ರಿಂದ ಫೆ.13ರವರೆಗೆ ಸ್ಪರ್ಶ್ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸ್ಪರ್ಶ್ ಕುಷ್ಟರೋಗ ಜಾಗೃತಿ ಆಂದೋಲನದ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.
ಕುಷ್ಟ ರೋಗಿಗಳ ಕಾರ್ಯಚಟುವಟಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ಕುಷ್ಟರೋಗಕ್ಕೆ ಅಂಟಿಕೊಂಡಿರುವ ಕಳಂಕ, ತಾರತಮ್ಯ ಹೋಗಲಾಡಿಸಲು ಅಧಿಕಾರಿಗಳು ಶ್ರಮಿಸಬೇಕು. ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಕುಷ್ಟರೋಗ ಗುಣಪಡಿಸಬಹುದಾದ ರೋಗ. ಗಾಂಧೀಜಿ ಅವರ ಆಶಯದಂತೆ ಕುಷ್ಟರೋಗ ಮುಕ್ತ ಭಾರತ ನಿರ್ಮಿಸುವ ಅಗತ್ಯವಿದೆ. ಸುತ್ತಮುತ್ತಲ ಪರಿಸರ, ನೆರೆ-ಹೊರೆ ಹಾಗೂ ಸಮುದಾಯದಲ್ಲಿ ಕುಷ್ಟರೋಗಿಗಳು ಕಂಡುಬಂದರೆ ಆರೋಗ್ಯ ಇಲಾಖೆ ಮಾಹಿತಿ ನೀಡಬೇಕು. ಉಚಿತ ಚಿಕಿತ್ಸೆ ಕೊಡಿಸಬೇಕು ಎಂದರು.
ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ.ಶಮಾ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ರಘುನಂದನ್, ಡಾ.ನಾಗರಾಜ್, ಡಾ.ಶಂಕರಪ್ಪ, ಡಾ.ಶ್ರೀಧರ್, ಡಾ.ಶ್ರೀನಿವಾಸ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.