ADVERTISEMENT

ಜೋಗ ಜಲಪಾತಕ್ಕೆ ಪ್ರವಾಸೋದ್ಯಮ ಸ್ಪರ್ಶ: ಶಾಸಕ ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2023, 16:01 IST
Last Updated 26 ಡಿಸೆಂಬರ್ 2023, 16:01 IST
ಕಾರ್ಗಲ್‌ ಸಮೀಪದ ಜೋಗ ಜಲಪಾತದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲಿಸಿದರು
ಕಾರ್ಗಲ್‌ ಸಮೀಪದ ಜೋಗ ಜಲಪಾತದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿವಿಧ ಯೋಜನೆಗಳ ಕಾಮಗಾರಿಗಳನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಪರಿಶೀಲಿಸಿದರು   

ಕಾರ್ಗಲ್: ವಿಶ್ವ ವಿಖ್ಯಾತ ಜೋಗ ಜಲಪಾತದ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಜಲಪಾತ ಪ್ರದೇಶಕ್ಕೆ ಅಂತರರಾಷ್ಟ್ರೀಯ ಶ್ರೇಣಿಯ ಪ್ರವಾಸೋದ್ಯಮ ಸ್ಪರ್ಶವನ್ನು ನೀಡಲು ಮುಖ್ಯಮಂತ್ರಿ ಮತ್ತು ಪ್ರವಾಸೋದ್ಯಮ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಸಮೀಪದ ಜೋಗ ಜಲಪಾತ ಪ್ರದೇಶದ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.

ಮೂಲ ಯೋಜನೆಯಲ್ಲಿ ಅನಗತ್ಯವಾಗಿರುವ ಕಾಮಗಾರಿಗಳನ್ನು ಕೈಬಿಡಲು ಸಂಬಂಧಪಟ್ಟ ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಯಾವುದೇ ಯೋಜನೆಗಳು ವೈಯುಕ್ತಿಕವಾಗಿ ಕೇಂದ್ರೀಕೃತವಾಗದೇ ಸಾಮುದಾಯಿಕವಾಗಿ ಉಪಯೋಗವಾಗಬೇಕು. ಜೋಗಕ್ಕೆ ಆಗಮಿಸುವ ಪ್ರವಾಸಿಗರು ಒಂದೆರಡು ತಾಸುಗಳಲ್ಲಿ ಇಲ್ಲಿಂದ ನಿರ್ಗಮಿಸುತ್ತಿದ್ದರು. ಪ್ರಸಕ್ತ ಯೋಜನೆ ಅಡಿ ಇಲ್ಲಿಗೆ ಆಗಮಿಸುವ ಪ್ರವಾಸಿಗರು ಕನಿಷ್ಠ 24 ತಾಸುಗಳನ್ನು ಕಳೆಯುವಂತಾಗಲಿದೆ ಎಂದು ಹೇಳಿದರು.

ADVERTISEMENT

ಜೋಗ ಜಲಪಾತ ಪ್ರದೇಶದ ಸಮಗ್ರ ಅಭಿವೃದ್ಧಿಯಿಂದ ಸರ್ವ ಋತು ಪ್ರವಾಸಿತಾಣವಾಗಿಸುವ ಜೊತೆಗೆ ಸ್ಥಳೀಯ ಯುವಸಮೂಹಕ್ಕೆ ವಿಫುಲ ಉದ್ಯೋಗಾವಕಾಶ ಸೃಷ್ಠಿ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಕೆಪಿಸಿ ಅಧಿಕಾರಿಗಳಿಗೆ, ಜೋಗ ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.

ಇಲ್ಲಿನ ಕೆಪಿಸಿ ಪವರ್ ಚಾನಲ್ ಮೇಲ್ಭಾಗದಲ್ಲಿ ಜಾಲಿ ಗದ್ದೆ ಗಿಳಾಲಗುಂಡಿ ಸಂಪರ್ಕ ಸೇತುವೆ ಬಿದ್ದು ಹೋಗಿದ್ದು, ಗ್ರಾಮೀಣ ಭಾಗದವರ ಸಂಚಾರಕ್ಕೆ ಆಗುತ್ತಿರುವ ತೊಂದರೆಯನ್ನು ಸ್ಥಳೀಯರು ಶಾಸಕರ ಗಮನಕ್ಕೆ ತಂದರು.

ಕೂಡಲೇ ಜಾಲಿಗದ್ದೆ ಪ್ರದೇಶಕ್ಕೆ ಭೇಟಿ ನೀಡಿದ ಶಾಸಕರು, ‘ಕೆಪಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಶೀಘ್ರದಲ್ಲಿ ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.