ಹೊಸನಗರ: ನಿಸರ್ಗ ರಮಣೀಯ ಪ್ರದೇಶವಾದ ಕೊಡಚಾದ್ರಿ ಗಿರಿ ಶಿಖರ ಮತ್ತು ಹಿಂಡ್ಲುಮನೆ ಜಲಪಾತದ ಚಾರಣವನ್ನು ರದ್ದುಗೊಳಿಸಿ ಇಲ್ಲಿನ ಕೊಲ್ಲೂರು ವನ್ಯಜೀವಿ ವಲಯ ಆದೇಶ ನೀಡಿದೆ.
ಇಲ್ಲಿನ ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಗಿರಿಶಿಖರ ಕೊಡಚಾದ್ರಿ ಮತ್ತು ಹಿಂಡ್ಲುಮನೆ ಜಲಪಾತ ಪ್ರವಾಸಿ ತಾಣಗಳಿಗೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮಾರ್ಚ್ 17ರಿಂದ ಜಾರಿಗೆ ಬರುವಂತೆ ಚಾರಣ ಮತ್ತು ಪ್ರವಾಸ ರದ್ದುಗೊಳಿಸಿ ಆದೇಶ ನೀಡಲಾಗಿದೆ. ಇಲಾಖೆಯಿಂದ ಮುಂದಿನ ಆದೇಶ ಬರುವವರೆಗೆ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಕೊಲ್ಲೂರು ವನ್ಯ ಜೀವಿ ವಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರವಾಸಿಗರ ಸಂಖ್ಯೆ ಇಳಿಕೆ: ಬೇಸಿಗೆ ಆರಂಭದ ಈ ದಿನಗಳಲ್ಲಿ ಕೊಡಚಾದ್ರಿ ಮತ್ತು ಹಿಂಡ್ಲುಮನೆ ಪ್ರವಾಸಿ ತಾಣಗಳ ಚಾರಣ ಹಾಗೂ ಸಿಗಂದೂರು ಚೌಡೇಶ್ವರಿ ದೇವಸ್ಥಾನ ಪ್ರದೇಶಗಳಿಗೆ ಪ್ರವಾಸ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಆದರೆ ಕೊರೊನಾ ವೈರಸ್ ಭೀತಿಯಿಂದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ. ಅದರಲ್ಲೂ ಬೆಂಗಳೂರು–ಮೈಸೂರು ಕಡೆಗಳಿಂದ ಬರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.