ADVERTISEMENT

ಕನ್ನಡ ಅಭಿವೃದ್ಧಿಗೆ ಕಾನೂನಿನ ಬಲ: ನಾಗಾಭರಣ

ಮುಂಬರುವ ಅಧಿವೇಶನದಲ್ಲಿ ವಿಧೇಯಕ ಮಂಡನೆ ಸಾಧ್ಯತೆ: ಸಂವಾದದಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2022, 2:49 IST
Last Updated 9 ಸೆಪ್ಟೆಂಬರ್ 2022, 2:49 IST
ಶಿವಮೊಗ್ಗದಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿದರು. ಪತ್ರಕರ್ತರಾದ ವಿ.ಟಿ.ಅರುಣ್, ಕೆ.ವಿ.ಶಿವಕುಮಾರ್, ರವಿಕುಮಾರ್ ಇದ್ದರು.
ಶಿವಮೊಗ್ಗದಲ್ಲಿ ಗುರುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಮಾತನಾಡಿದರು. ಪತ್ರಕರ್ತರಾದ ವಿ.ಟಿ.ಅರುಣ್, ಕೆ.ವಿ.ಶಿವಕುಮಾರ್, ರವಿಕುಮಾರ್ ಇದ್ದರು.   

ಶಿವಮೊಗ್ಗ: ‘ಕನ್ನಡದ ಬೆಳವಣಿಗೆಗೆಕಾನೂನಿನ ಬಲವೂ ಜತೆಯಾಗಬೇಕು ಎಂದು ಸಮಗ್ರ ಅಭಿವೃದ್ಧಿ ವಿಧೇಯಕ ಜಾರಿಗೆ ತರಲು ಒತ್ತಾಯಿಸಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷಟಿ.ಎಸ್. ನಾಗಾಭರಣ ಹೇಳಿದರು.

ಕಾರ್ಯನಿರತ ಪತ್ರಕರ್ತರಸಂಘದ ಜಿಲ್ಲಾ ಶಾಖೆ ಗುರುವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಇದುವರೆಗೆ ಕನ್ನಡಕ್ಕೆ ತನ್ನದೇ ಆದ ಸ್ಥಾನಮಾನ ಸಿಕ್ಕಿಲ್ಲ. ಸರ್ಕಾರ, ಅಧಿಕಾರಿಗಳು ಮತ್ತು ಶಿಕ್ಷಣ ವ್ಯವಸ್ಥೆ ನಡುವೆ ಕನ್ನಡ ಸಿಲುಕಿದೆ. ಕನ್ನಡ ಅನ್ನ ಕೊಡುವ ಭಾಷೆಯಾಗಿಸಲು ಪ್ರಾಧಿಕಾರ ಕಾರ್ಯಕ್ರಮ ಆಯೋಜಿಸಿದೆ ಎಂದರು.

ADVERTISEMENT

ಮುಂದಿನ ಅಧಿವೇಶನದಲ್ಲೇ ವಿಧೇಯಕ ಜಾರಿಗೆ ಬರುವ ಸಾಧ್ಯತೆ ಇದೆ. ಕನ್ನಡ ಕಲಿಕಾ ಅಧಿನಿಯಮ ಜಾರಿಗೆ ಬಂದಿದ್ದರೂ ಪಾಲನೆಯಾಗುತ್ತಿಲ್ಲ. ನಿಯಮಗಳು ಆದೇಶ ಆದರೆ ಸಾಲದು, ಅದು ಕಾನೂನು ಆದಾಗ ಬೆಲೆ ಬರುತ್ತದೆ ಎಂದರು.

ಕೋವಿಡ್ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣ ಬಳಸಿಕೊಂಡು ವಿಶ್ವದಾದ್ಯಂತ ಕನ್ನಡ ಕಲಿಕಾ ಕಾರ್ಯಾಗಾರ ಯಶಸ್ವಿಯಾಗಿ ನಿರ್ವಹಿಸಲಾಗಿತ್ತು. ಜಗತ್ತಿನ 68 ದೇಶಗಳ ಅನಿವಾಸಿ ಕನ್ನಡಿಗರು, ಶಿಕ್ಷಕರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. 13 ದೇಶಗಳು ಸೇರುತ್ತಿದ್ದವು ಎಂದು ಪ್ರಶ್ನೆಯೊಂದಕ್ಕೆ ಉ‌ತ್ತರಿಸಿದರು.

ಕನ್ನಡ ಪ್ರೀತಿಸುವ ಅಧಿಕಾರಿಗಳಿದ್ದರೆ ಮಾತ್ರ ಆಡಳಿತ ಭಾಷೆಯಾಗಿ ಅಭಿವೃದ್ಧಿಯಾಗಲು ಸಾಧ್ಯ. ಕನ್ನಡ ಭಾಷೆ ಕಲಿತವರು ಮಾತ್ರ ರಾಜ್ಯದಲ್ಲಿ ಐಎಎಸ್ ಅಧಿಕಾರಿಯಾಗಿ ಮುಂದುವರಿಯಬೇಕು ಎಂಬ ನಿಯಮವಿದ್ದರೂ ಅಧಿಕಾರಿಗಳು ಪಾಲಿಸುತ್ತಿಲ್ಲ. ಅವರಿಗೆ ಕನ್ನಡ ಅನಿವಾರ್ಯ ಆಗಿಲ್ಲ ಎಂದರು.

ಸಂಘದ ಜಿಲ್ಲಾ ಶಾಖೆ ಅಧ್ಯಕ್ಷ ಕೆ.ವಿ. ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಸಂಘದ ನಿರ್ದೇಶಕ ಎನ್. ರವಿಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.