ADVERTISEMENT

ಶಿವಮೊಗ್ಗ: ಅಪಾಯ ಮಟ್ಟದಲ್ಲಿ ತುಂಗೆಯ ಹರಿವು

ಮಾಸ್ತಿಕಟ್ಟೆ 30 ಸೆಂ.ಮೀ ಮಳೆ ದಾಖಲು: ಲಿಂಗನಮಕ್ಕಿ ಜಲಾಶಯಕ್ಕೆ ಒಂದೇ ದಿನ 5 ಅಡಿ ನೀರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 15:25 IST
Last Updated 4 ಜುಲೈ 2024, 15:25 IST
ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಗುರುವಾರ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ
ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಗುರುವಾರ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ   

ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ಈ ಮುಂಗಾರು ಹಂಗಾಮಿನ ದಾಖಲೆ ಪ್ರಮಾಣದ 30 ಸೆಂ.ಮೀ ಮಳೆ ಸುರಿದ ವರದಿಯಾಗಿದೆ.

ಮಾಣಿಯಲ್ಲಿ 29 ಸೆಂ.ಮೀ, ಬಿದನೂರು–ನಗರ 27.3, ಹುಲಿಕಲ್‌ನಲ್ಲಿ 26.7, ಯಡೂರು 20.6, ಸೋನಲೆಯಲ್ಲಿ 20.5 ಸೆಂ.ಮೀ, ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆಯಲ್ಲಿ 25.04 ಹಾಗೂ ಸಾಗರ ತಾಲ್ಲೂಕಿನ ಕಾರ್ಗಲ್‌ನಲ್ಲಿ 19.2 ಸೆಂ.ಮೀ ಮಳೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 55.80 ಸೆಂ.ಮೀ ಮಳೆ ಸುರಿದಿದೆ.

ಜಲಾನಯನ ಪ್ರದೇಶದಲ್ಲಿ ಕುಂಭದ್ರೋಣ ಮಳೆ ಸುರಿಯುತ್ತಿರುವುದರಿಂದ ತುಂಗಾ, ಲಿಂಗನಮಕ್ಕಿ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ಒಳಹರಿವು ಹೆಚ್ಚಳಗೊಂಡಿದೆ. ಭದ್ರಾ ಜಲಾಶಯದ ಒಳಹರಿವು ಕೊಂಚ ತಗ್ಗಿದೆ.

ADVERTISEMENT

ತುಂಗೆಗೆ ಭಾರಿ ನೀರು:

ತೀರ್ಥಹಳ್ಳಿ ತಾಲ್ಲೂಕಿನ ತುಂಗಾ ಜಲಾನಯನ ಪ್ರದೇಶದ ಆಗುಂಬೆ, ಹೊನ್ನೆತಾಳು (18.3 ಸೆಂ.ಮೀ), ಬಿದರಗೋಡು (17.25), ಹಾದಿಗಲ್ಲು, ತೀರ್ಥಮತ್ತೂರು (14.2), ಮೇಗರವಳ್ಳಿ (13.75) ಭಾಗದಲ್ಲಿ ಭರ್ಜರಿ ಮಳೆಯಾಗುತ್ತಿದೆ. ಇದರಿಂದ ತುಂಗೆ ಮೈದುಂಬಿದ್ದಾಳೆ.

ಗಾಜನೂರಿನ ತುಂಗಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಗುರುವಾರ ಸಂಜೆ 43,000 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಬುಧವಾರ ಒಳಹರಿವು 19,098 ಕ್ಯೂಸೆಕ್‌ ಇತ್ತು. 24 ಗಂಟೆಗಳಲ್ಲಿ ನೀರಿನ ಪ್ರಮಾಣ 24,000 ಕ್ಯುಸೆಕ್‌ನಷ್ಟು ಏರಿಕೆಯಾಗಿದೆ. ಜಲಾಶಯದ 22 ಕ್ರೆಸ್ಟ್‌ಗೇಟ್‌ಗಳ ಪೈಕಿ 21 ಗೇಟ್ ತೆರೆದು ನದಿಗೆ ನೀರು ಹರಿಸಲಾಗುತ್ತಿದೆ.

ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ನದಿ ದಂಡೆಯ ಬಳಿಯ ಮಂಟಪ ಮುಳುಗಡೆ ಹಂತಕ್ಕೆ ತಲುಪಿದೆ.

ಲಿಂಗನಮಕ್ಕಿಗೆ ಒಂದೇ ದಿನ 5 ಅಡಿ ನೀರು :

ಲಿಂಗನಮಕ್ಕಿ ಜಲಾಶಯಕ್ಕೆ ಗುರುವಾರ ಒಳಹರಿವು 60,238 ಕ್ಯೂಸೆಕ್‌ಗೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 5 ಅಡಿಯಷ್ಟು ನೀರಿನ ಪ್ರಮಾಣ ಏರಿಕೆಯಾಗಿದೆ. ಬುಧವಾರ 19,950 ಕ್ಯೂಸೆಕ್‌ ಒಳ ಹರಿವು ಇದ್ದು, 1,754.95 ಅಡಿ ನೀರಿನ ಸಂಗ್ರಹ ಇತ್ತು. ಸದ್ಯ 1,760.10 ಅಡಿಗೆ ಏರಿಕೆಯಾಗಿದೆ. ಜಲಾಶಯದ ಗರಿಷ್ಠ ಮಟ್ಟ 1,819 ಅಡಿ. ಕಳೆದ ವರ್ಷ ಇದೇ ಅವಧಿಯಲ್ಲಿ 1,741.70 ಅಡಿ ನೀರಿನ ಸಂಗ್ರಹ ಇತ್ತು.

ಭದ್ರಾ ಒಳಹರಿವು ಕೊಂಚ ಇಳಿಕೆ:

ಭದ್ರಾ ಜಲಾಶಯದಲ್ಲಿ 4,908 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಬುಧವಾರ ಒಳಹರಿವು 5,324 ಕ್ಯೂಸೆಕ್‌ ಇದ್ದು, ಸದ್ಯ ಜಲಾಶಯದ ನೀರಿನ ಮಟ್ಟ 127 ಅಡಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 136.10 ಅಡಿ ನೀರಿನ ಸಂಗ್ರಹ ಇತ್ತು.

ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟ್ ರಸ್ತೆಯಲ್ಲಿ ಮಳೆಯಿಂದ ಅನಾವರಣಗೊಂಡ ಝರಿಗಳ ವೈಯಾರ (ಚಿತ್ರ: ಸಜೇಶ್ ಮಾಸ್ತಿಕಟ್ಟೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.