ADVERTISEMENT

ಭದ್ರೆಯತ್ತ ತುಂಗೆಯ ‘ಓಟ’

ಅಂತಿಮ ಹಂತದಲ್ಲಿ ಕಾಮಗಾರಿ: ಭದ್ರಾ ಮೇಲ್ದಂಡೆ ಯೋಜನೆ ಸಾಕಾರಕ್ಕೆ ಸಿದ್ಧತೆ

ವೆಂಕಟೇಶ ಜಿ.ಎಚ್.
Published 25 ಜುಲೈ 2024, 20:42 IST
Last Updated 25 ಜುಲೈ 2024, 20:42 IST
ತುಂಗಾ ಜಲಾಶಯದ ಹಿನ್ನೀರಿನಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಲು ಮುತ್ತಿನಕೊಪ್ಪ ಬಳಿ ಸಿದ್ಧವಾಗುತ್ತಿರುವ ಸಬ್‌ ಸ್ಟೇಷನ್‌
ತುಂಗಾ ಜಲಾಶಯದ ಹಿನ್ನೀರಿನಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸಲು ಮುತ್ತಿನಕೊಪ್ಪ ಬಳಿ ಸಿದ್ಧವಾಗುತ್ತಿರುವ ಸಬ್‌ ಸ್ಟೇಷನ್‌   

ಶಿವಮೊಗ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಸಮೀಪದ ಗಾಜನೂರು ಬಳಿಯ ತುಂಗಾ ಜಲಾಶಯದ ಹಿನ್ನೀರಿನಿಂದ 17.4 ಟಿಎಂಸಿ ಅಡಿ ನೀರು ಹರಿಸುವ ಯೋಜನೆಯ ಕಾಮಗಾರಿ ಅಂತಿಮ ಹಂತ ತಲುಪಿದೆ. ನವೆಂಬರ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲು (ಟ್ರಯಲ್‌ ರನ್) ವಿಶ್ವೇಶರಯ್ಯ ಜಲನಿಗಮ ನಿಯಮಿತ (ವಿಜೆಎನ್‌ಎಲ್‌) ಸಿದ್ಧತೆ ನಡೆಸಿದೆ.

ಮಲೆನಾಡು ಮತ್ತು ಮಧ್ಯ ಕರ್ನಾಟಕದ 4 ಜಿಲ್ಲೆಗಳ (ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ತುಮಕೂರು) 2,25,515 ಹೆಕ್ಟೇರ್‌ ಪ್ರದೇಶಕ್ಕೆ ನೀರೊದಗಿಸುವ ಗುರಿಯನ್ನು ಭದ್ರಾ ಮೇಲ್ದಂಡೆ ಯೋಜನೆ ಹೊಂದಿದೆ. ಅದಕ್ಕಾಗಿ ಕಾಲುವೆ, ಹನಿ ನೀರಾವರಿ ಮೂಲಕ ಭದ್ರಾ ಜಲಾಶಯದಿಂದ 29.9 ಟಿಎಂಸಿ ಅಡಿ ನೀರು ಹರಿಸಲು ಯೋಜನೆ ರೂಪಿಸಲಾಗಿದೆ. ಭದ್ರಾ ನದಿಯಿಂದ 12.5 ಟಿಎಂಸಿ ಅಡಿ ಹಾಗೂ ತುಂಗಾದಿಂದ 17.4 ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದೆ.

ಕಾಲುವೆ ಮೂಲಕ ನೀರು: 

ADVERTISEMENT

ಗಾಜನೂರಿನ ತುಂಗಾ ಜಲಾಶಯದ ಸಮೀಪದ ಮುತ್ತಿನಕೊಪ್ಪ ಬಳಿ ಹಿನ್ನೀರಿನಿಂದ ಕಾಲುವೆಗೆ ನೀರು ಪಂಪ್‌ ಮಾಡಿ ಅಲ್ಲಿಂದ 11.2 ಕಿ.ಮೀ ದೂರದ ನೆಲಗದ್ದೆ ಬಳಿ ನೀರು ಎತ್ತಿ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಇದಕ್ಕಾಗಿ ಶಿವಮೊಗ್ಗ–ಚಿಕ್ಕಮಗಳೂರು ಜಿಲ್ಲೆ ಗಡಿಯ ಎನ್‌.ಆರ್‌.ಪುರ ತಾಲ್ಲೂಕಿನ ಕೆ.ಕಣಬೂರು, ಸಾತಕುಳಿ ಬಳಿ ತಲಾ 5 ಪಂಪ್‌ಗಳನ್ನು ಒಳಗೊಂಡ ಎರಡು ಪಂಪ್‌ಹೌಸ್‌ಗಳ ನಿರ್ಮಿಸಲಾಗಿದೆ.

‘ಕಣಬೂರು ಪಂಪ್‌ಹೌಸ್ ಪೂರ್ಣಗೊಂಡಿದೆ. ಸಾತಕುಳಿ ಪಂಪ್‌ ಹೌಸ್‌ನಲ್ಲಿ ಸಬ್‌ಸ್ಟೇಷನ್ ನಿರ್ಮಾಣ, ಮೋಟಾರು ಅಳವಡಿಕೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾತ್ರ ಬಾಕಿ ಇದೆ. ಕಾಲುವೆ ನಿರ್ಮಾಣ ಕಾರ್ಯವೂ ಅಂತಿಮ ಹಂತದಲ್ಲಿದೆ. ಅರ್ಧ ಕಿ.ಮೀ.ನಷ್ಟು ಲೈನಿಂಗ್ ಹಾಗೂ ಉತ್ಖನನ ಮಾತ್ರ ಬಾಕಿ ಉಳಿದಿದೆ’ ಎಂದು ವಿಜೆಎನ್‌ಎಲ್‌ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್‌.ಎನ್‌.ಗೋವರ್ಧನ್ ’ಪ್ರಜಾವಾಣಿ‘ಗೆ ತಿಳಿಸಿದರು.

ತುಂಗೆಯ ಪಾಲೇ ಅಧಿಕ:

ಹೆಸರು ಭದ್ರಾ ಮೇಲ್ದಂಡೆ ಆದರೂ ಯೋಜನೆಗೆ ತುಂಗಾ ನೀರಿನ ಪಾಲೇ ಹೆಚ್ಚಿದೆ. ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯ ಎಲ್ಲ ಆರು ತಾಲ್ಲೂಕುಗಳು ನೀರಾವರಿ ಸೌಲಭ್ಯ ಪಡೆಯಲಿವೆ. ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿಗೆ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಅಜ್ಜಂಪುರ ಹಾಗೂ ಕಡೂರು ತಾಲ್ಲೂಕಿಗೆ, ತುಮಕೂರು ಜಿಲ್ಲೆಯ ಶಿರಾ, ಚಿಕ್ಕನಾಯಕನಹಳ್ಳಿ ಮತ್ತು ಪಾವಗಡ ತಾಲ್ಲೂಕಿಗೆ ನೀರು ಹರಿಸಲಾಗುತ್ತಿದೆ.

ಪ್ರಾಯೋಗಿಕ ಹರಿವು ಆರಂಭ:

ಯೋಜನೆಯಡಿ ಭದ್ರಾ ಜಲಾಶಯದಿಂದ 12 ಟಿಎಂಸಿ ಅಡಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಸಾಗರಕ್ಕೆ ಹರಿಸಲಾಗುತ್ತದೆ. 2019ರಿಂದಲೇ ಬೇಸಿಗೆಯಲ್ಲಿ ಪ್ರಾಯೋಗಿಕವಾಗಿ ವಿ.ವಿ. ಸಾಗರಕ್ಕೆ 3 ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ.

ಗಾಜನೂರು ಬಳಿ ತುಂಗಾ ಜಲಾಶಯದ ಹಿನ್ನೀರಿನಿಂದ ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯಕ್ಕೆ ನೀರು ಹರಿಸಲು ಮುತ್ತಿನಕೊಪ್ಪ ಬಳಿ ನಿರ್ಮಿಸಿರುವ ಪಂಪ್‌ಹೌಸ್
ಗಾಜನೂರಿನ ತುಂಗಾ ಜಲಾಶಯದ ಹಿನ್ನೀರಿನಿಂದ ಭದ್ರಾ ಜಲಾಶಯಕ್ಕೆ ನೀರು ಕೊಂಡೊಯ್ಯಲು ಶಿವಮೊಗ್ಗ–ಚಿಕ್ಕಮಗಳೂರು ಗಡಿಭಾಗದಲ್ಲಿ ಎನ್‌.ಆರ್.ಪುರ ತಾಲ್ಲೂಕು ಮುತ್ತಿನಕೊಪ್ಪ ಬಳಿ ನಿರ್ಮಿಸಿರುವ ನಾಲೆ
ಗಾಜನೂರಿನ ತುಂಗಾ ಜಲಾಶಯದ ಹಿನ್ನೀರಿನಿಂದ ಭದ್ರಾ ಜಲಾಶಯಕ್ಕೆ ನೀರು ಕೊಂಡೊಯ್ಯಲು ಶಿವಮೊಗ್ಗ–ಚಿಕ್ಕಮಗಳೂರು ಗಡಿಭಾಗದಲ್ಲಿ ಎನ್‌.ಆರ್.ಪುರ ತಾಲ್ಲೂಕು ಮುತ್ತಿನಕೊಪ್ಪ ಬಳಿ ನಿರ್ಮಿಸಿರುವ ನಾಲೆ
ತುಂಗಾದಿಂದ ಭದ್ರಾದತ್ತ ನವೆಂಬರ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲಾಗುವುದು. ಜೂನ್‌ನಿಂದ ಪೂರ್ಣಪ್ರಮಾಣದಲ್ಲಿ ಹರಿಸಲು ಸಿದ್ಧತೆ ನಡೆಸಿದ್ದೇವೆ.
–ಎಚ್‌.ಎನ್‌.ಗೋವರ್ಧನ್ ಎಇಇ ವಿಜೆಎನ್‌ಎಲ್

14 ವರ್ಷಗಳ ವನವಾಸಕ್ಕೆ ಮುಕ್ತಿ..

ತುಂಗೆಯಿಂದ ಭದ್ರೆಗೆ ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ವರೆಗೆ 17.24 ಟಿಎಂಸಿ ಅಡಿ ನೀರು ಹರಿಸುವ ₹ 324 ಕೋಟಿ ವೆಚ್ಚದ ಈ ಯೋಜನೆಗೆ 2008ರಲ್ಲಿ ಟೆಂಡರ್ ಕರೆಯಲಾಗಿತ್ತು. 2010ರಲ್ಲಿ ಕೆಲಸ ಆರಂಭವಾಗಿತ್ತು. ನಿಗದಿಯಂತೆ ಮರು ವರ್ಷ 2011ರಲ್ಲಿ ಕೆಲಸ ಮುಗಿಯಬೇಕಿತ್ತು. ಆದರೆ ಜೂನ್‌ 2020ರ ನಂತರವೇ ಕಾಮಗಾರಿ ವೇಗ ಪಡೆದಿದೆ. 14 ವರ್ಷಗಳ ನಂತರ ಯೋಜನೆ ಅಂತಿಮ ಹಂತದಲ್ಲಿದೆ. ‘ಯೋಜನೆಯ ಶೇ 75ರಷ್ಟು ಪ್ರದೇಶ ದಟ್ಟ ಅರಣ್ಯದಲ್ಲಿದೆ. ಕಾಲುವೆ ನಿರ್ಮಾಣಕ್ಕಾಗಿ ಅರಣ್ಯ ಇಲಾಖೆಯ 96 ಹೆಕ್ಟೇರ್ ಪ್ರದೇಶ ಬಳಸಿಕೊಳ್ಳಲಾಗಿದೆ. ಖಾಸಗಿಯವರಿಂದ 109 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. 20000 ಮರ ಕಡಿಯಲಾಗಿದೆ. ಅರಣ್ಯದಲ್ಲಿ ವಿದ್ಯುತ್ ಲೈನ್ ಎಳೆಯಲಾಗಿದೆ. ಭೂಸ್ವಾಧೀನ ಕಾರ್ಯವಲ್ಲದೆ ಅರಣ್ಯ ವನ್ಯಜೀವಿ ಹಾಗೂ ಪರಿಸರ ವಿಭಾಗದಿಂದ ಅನುಮತಿ ಪಡೆಯಲು ವಿಳಂಬವಾಯಿತು. ಈ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುವುದರಿಂದ ವರ್ಷದಲ್ಲಿ ಆರು ತಿಂಗಳು ಮಾತ್ರ ಕಾಮಗಾರಿ ಸಾಧ್ಯ. ಅಂತೆಯೇ ಕಾಮಗಾರಿ ಸುದೀರ್ಘವಾಗಿದೆ’ ಎಂದು ವಿಜೆಎನ್‌ಎಲ್‌ ಮೂಲಗಳು ಹೇಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.