ಹೊಸನಗರ: ದೇವಸ್ಥಾನವನ್ನು ಕಟ್ಟಿಸಿದ ಭಕ್ತನ ಹೆಸರು, ಆತನ ಶ್ರಮ ಕಾಲಾನಂತರ ನೆನಪಿನಿಂದ ಮಾಸುವುದೇ ಹೆಚ್ಚು. ಆತನ ಹೆಸರು ಹೇಳುವವರು, ಕೇಳುವವರು ಇರುವುದಿಲ್ಲ. ಆದರೆ, ಹೊಸನಗರ ತಾಲ್ಲೂಕಿನಲ್ಲಿರುವ ದೇವಾಲಯವೊಂದು ಗುಡಿ ಕಟ್ಟಿದ ನಿರ್ಮಾತೃವಿನ ಹೆಸರನ್ನೇ ತನ್ನದಾಗಿಸಿಕೊಂಡು ಇಂದಿಗೂ ಜನಜನಿತವಾಗಿದೆ.
ಹೊಸನಗರ ತಾಲ್ಲೂಕಿನ ಮೇಲಿನಬೆಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಗೇರಿ ಗ್ರಾಮದಲ್ಲಿರುವ ಉಮಾಮಹೇಶ್ವರ ದೇವಾಸ್ಥಾನ ತನ್ನನ್ನು ನಿರ್ಮಿಸಿದ ಪರಮ ಭಕ್ತನ ಹೆಸರನ್ನು ತನ್ನಲ್ಲೇ ಇರಿಸಿಕೊಂಡು ಚಿರಸ್ಥಾಯಿಗೊಳಿಸಿದೆ.
ತಾಲ್ಲೂಕಿನ ಜೀವನದಿ ಶರಾವತಿಯ ಬಲ ದಂಡೆಯ ನಿಸರ್ಗ ನಿರ್ಮಿತ ನಿರ್ಮಲ ಪರಿಸರದಲ್ಲಿರುವ ಈ ದೇವಸ್ಥಾನ ಪ್ರಮುಖ ಕಾರಣಿಕ ಕ್ಷೇತ್ರವಾಗಿದ್ದು, ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ.
ಭಕ್ತಿ ಮೆರೆದ ವ್ಯಾಪಾರಿ: ವೈಷ್ಣವ ಪಂಥದ ಭಕ್ತ ಉಪ್ಪಿನ ವ್ಯಾಪಾರಿಯೊಬ್ಬ ಶಿವನ ದೇವಸ್ಥಾನ ಕಟ್ಟಿಸಿದ ದಂತಕತೆ ಈ ದೇವಾಲಯದ ಹಿರಿಮೆ ಆಗಿದೆ.
ಕೆಳದಿ ಅರಸರು ಬಿದನೂರು ನಗರ ಆಳ್ವಿಕೆ ನಡೆಸುತ್ತಿದ್ದ ಶಿವಪ್ಪ ನಾಯಕನ ಕಾಲವದು. ಈ ಸಂಸ್ಥಾನದಲ್ಲಿ ದೂರದ ಊರಿನಿಂದ ಬಂದ ಉಮಾಪತಿ ಎಂಬ ಉಪ್ಪಿನ ವ್ಯಾಪಾರಿ ಬಾರೀ ವಹಿವಾಟು ನಡೆಸುತ್ತಿದ್ದ. ಒಂದು ದಿನ ವ್ಯಾಪಾರಿ ನಗರಕ್ಕೆ ವ್ಯಾಪಾರಕ್ಕೆಂದು ಹೋಗಲು ಸಂಸ್ಥಾನದ ಅನುಮತಿಗಾಗಿ ಸಾಲಗೇರಿ ಬಳಿ ಕಾದು ಮಲಗಿದ್ದ. (ಅಂದು ಬಿದನೂರು ನಗರಕ್ಕೆ ಹೋಗಲು ಸಾಲಗೇರಿಯಲ್ಲಿ ಪರವಾನಗಿ ಚೀಟಿ ನೀಡುವ ಕೇಂದ್ರ ಅಸ್ಥಿತ್ವದಲ್ಲಿತ್ತು).
ಉಮಾಪತಿ ಮಲಗಿದ್ದಾಗ ರಾತ್ರಿ ಕನಸಿನಲ್ಲಿ ಬಂದ ಶಿವ ತನಗೊಂದು ಗುಡಿ ಕಟ್ಟಲು ಕೇಳಿಕೊಂಡ. ತಕ್ಷಣವೇ ಎಚ್ಚೆತ್ತುಕೊಂಡ ಉಮಾಪತಿ ಕ್ಷಣಮಾತ್ರದಲ್ಲಿ ಶಿವನ ಆಸೆ ಪೂರೈಸಲು ಕಟಿಬದ್ಧನಾದ. ವ್ಯಾಪಾರಿಯು ನೇರವಾಗಿ ಅರಸ ಶಿವಪ್ಪ ನಾಯಕನ ಬಳಿ ಹೋಗಿ ಮನದಾಸೆ ಬಿನ್ನಹ ಮಾಡಿಕೊಂಡ. ಅರಸ ಶಿವಪ್ಪನಾಯಕನ ಸಮ್ಮತಿ, ಸಹಕಾರ ಪಡೆದು ದೇವಾಲಯ ಕಟ್ಟಿಸಿದ ಎಂಬುದು ಐತಿಹ್ಯ.
ಅದರಂತೆ ಸಾಲಗೇರಿಯಲ್ಲಿ ಕಟ್ಟಿಸಿದ ಈ ದೇವಾಸ್ಥಾನ ಉಮಾಮಹೇಶ್ವರ, ಉಮಾಪತಿ ಎಂದೇ ಹೆಸರಾಯಿತು.
ಶೈವ ಪಂಥದ ಬಿದನೂರು ನಾಯಕರ ಆಡಳಿತ ಕಾಲದಲ್ಲಿ ನಗರ ಬಿದನೂರು ಭಾಗದಲ್ಲಿ ಶೈವ ಪಂಥದವರೇ ಹೆಚ್ಚು ವಾಸವಾಗಿದ್ದರು. ಅವರ ಆಚರಣೆಗಳೇ ನಡೆಯುತ್ತಿದ್ದವು. ವೈಷ್ಣವ ಪಂಥದ ವ್ಯಾಪಾರಿ ಶಿವಾಲಯ ಕಟ್ಟಲು ಮುಂದಾದಾಗ ಶೈವರ ಪ್ರಬಲ ವಿರೋಧ ವ್ಯಕ್ತವಾದರೂ ಅದನ್ನು ಲೆಕ್ಕಿಸದ ವ್ಯಾಪಾರಿ ವೈಷ್ಣವ ಶೈಲಿಯಲ್ಲೇ ದೇವಾಸ್ಥಾನ ನಿರ್ಮಿಸಿದ. ಅಲ್ಲದೆ, ವೈಷ್ಣವ ಪಂಥದ ಪದ್ಧತಿಯಂತೆ ಪೂಜೆ ನಡೆಯಿತು. ನಂತರ ಶೈವ– ವೈಷ್ಣವ ಎರಡೂ ಪಂಥಗಳ ಮಾದರಿಯಲ್ಲಿ ಪೂಜೆಯೂ ನಡೆದು ಸರ್ವ ಜನರ ಸಾಮರಸ್ಯದ ತಾಣವಾಯಿತು ಎನ್ನುತ್ತದೆ ಸ್ಥಳ ಪುರಾಣ.
ದಶಾವತಾರಗಳ ಚಿತ್ತಾರ: ದೇವಸ್ಥಾನದ ಗರ್ಭಗುಡಿಯಲ್ಲಿ ಆಕರ್ಷಕ ಶಿವಲಿಂಗ ಪ್ರತಿಷ್ಠಾಪಿಸಲಾಗಿದ್ದು, ಸುತ್ತಲಿನ ಗೋಡೆಯಲ್ಲಿ ವಿಷ್ಣುವಿನ ದಶಾವತಾರಗಳ ವಿಶೇಷ ಚಿತ್ತಾರದ ಕೆತ್ತನೆ ಮನಸೆಳೆಯುತ್ತದೆ.
ಶಿಲ್ಪ ಸಾಲುಗಳ ಮಧ್ಯದಲ್ಲಿ ಒಂದೇ ಕಲ್ಲಿನಲ್ಲಿ (ಏಕಶಿಲೆ) ಕೆತ್ತಲಾದ ಗಂಡು ಹೆಣ್ಣು ರೂಪದ ಪರಿಕಲ್ಪನೆಯು ಶಿವ ಮತ್ತು ಮೋಹಿನಿ ಪ್ರತಿರೂಪ ಎಂದು ಬಿಂಬಿಸಲಾಗಿದೆ. ಅಲ್ಲದೇ ಶಿವ ಮತ್ತು ವಿಷ್ಣು (ಮೋಹಿನಿ) ಒಂದೇ ಎಂದು ಹರಿಹರ ತತ್ವದಲ್ಲಿ ಪ್ರತಿಪಾದಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.