ADVERTISEMENT

ಭದ್ರಾವತಿ: ನಿರ್ವಹಣೆಯಿಲ್ಲದ ವಾಣಿಜ್ಯ ಸಂಕೀರ್ಣ!

ನಗರಸಭೆಯ 26 ಮಳಿಗೆಗಳಲ್ಲಿ ಖಾಲಿ ಉಳಿದಿರುವುದು 22

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2024, 7:35 IST
Last Updated 16 ಅಕ್ಟೋಬರ್ 2024, 7:35 IST
<div class="paragraphs"><p><strong>ನಗರದ ರೈಲ್ವೆನಿಲ್ದಾಣದ ಬಳಿ ನಿರ್ಮಾಣವಾಗಿರುವ ನಗರ ಸಭೆಯ ಸಂಕೀರ್ಣದ ಮಳಿಗೆಗಳು ಹಲವು ವರ್ಷಗಳಿಂದ ಮುಚ್ಚಿರುವ</strong><br></p></div>

ನಗರದ ರೈಲ್ವೆನಿಲ್ದಾಣದ ಬಳಿ ನಿರ್ಮಾಣವಾಗಿರುವ ನಗರ ಸಭೆಯ ಸಂಕೀರ್ಣದ ಮಳಿಗೆಗಳು ಹಲವು ವರ್ಷಗಳಿಂದ ಮುಚ್ಚಿರುವ

   

ಭದ್ರಾವತಿ: ಇಲ್ಲಿನ ರೈಲು ನಿಲ್ದಾಣ ರಸ್ತೆಯಲ್ಲಿನ ಮಾರುಕಟ್ಟೆ ಸ್ಥಳದಲ್ಲಿ ನಗರಸಭೆಯಿಂದ ಮಳಿಗೆಗಳು ನಿರ್ಮಾಣಗೊಂಡು ಎಂಟು ವರ್ಷ ಕಳೆದಿದೆ. ಈ ವಾಣಿಜ್ಯ ಸಂಕೀರ್ಣದ ನಿರ್ವಹಣೆ ಸರಿ ಇಲ್ಲ. ಜೊತೆಗೆ ಮಾಸಿಕ ಬಾಡಿಗೆಯನ್ನು ಹೆಚ್ಚು ನಿಗದಿಪಡಿಸಿದ್ದರಿಂದ ವ್ಯಾಪಾರಸ್ಥರು ಅಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಮುಖ್ಯ ರಸ್ತೆಯ ಮುಂಭಾಗಕ್ಕೆ ಇರುವ ಮಳಿಗೆಗಳನ್ನು ಮಾತ್ರ ವ್ಯಾಪಾರಸ್ಥರು ಪಡೆದಿದ್ದಾರೆ. ಕೆಲವೇ ಕೆಲವು ಮಳಿಗೆಗಳು ಮಾತ್ರ ರಸ್ತೆಯ ಮುಂಭಾಗದಲ್ಲಿದೆ. ಉಳಿದಿದೆಲ್ಲವೂ ಒಳಭಾಗದಲ್ಲಿವೆ. ಗ್ರಾಹಕರು ಒಳ ಭಾಗಕ್ಕೆ ಬಾರದ ಕಾರಣ ವ್ಯಾಪಾರಸ್ಥರು ಬಾಡಿಗೆಗೆ ಪಡೆಯು ಹಿಂದೇಟು ಹಾಕಿದ್ದು, ಹಲವು ವರ್ಷಗಳಿಂದ ಈ ಮಳಿಗೆಗಳು ಖಾಲಿ ಬಿದ್ದಿವೆ.

ADVERTISEMENT

ಎಂಟು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಮಾರುಕಟ್ಟೆಯ ಹಳೇ ಮಳಿಗೆಗಳನ್ನು ಸಂಪೂರ್ಣ ಕೆಡವಿ, ಅಲ್ಲಿದ್ದ ವ್ಯಾಪಾರಸ್ಥರನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ, ನೂತನವಾಗಿ 26 ಮಳಿಗೆಗಳ ನಿರ್ಮಿಸಲಾಯಿತು. ಆದರೆ, ಅವುಗಳನ್ನು ನಿರ್ಮಿಸುವಾಗ ಸಮರ್ಪಕ ರೂಪು–ರೇಷೆ ನಡೆದಿಲ್ಲ. 6 ಮಳಿಗೆಗಳು ಮಾತ್ರ ಮುಖ್ಯರಸ್ತೆಯ ಮುಂಭಾಗಕ್ಕೆ ಇವೆ.

ಇನ್ನುಳಿದ ಎಲ್ಲಾ ಮಳಿಗೆಗಳು ರಸ್ತೆಯ ಒಳಭಾಗದಲ್ಲಿರುವ ಕಾರಣ ಗ್ರಾಹಕರು ರಸ್ತೆ ಬದಿಯಲ್ಲಿಯೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಅಲ್ಲದೆ ನಗರಸಭೆ ಕಚೇರಿ ಸಂಕೀರ್ಣದ ಮುಂಭಾಗದಲ್ಲಿಯೇ ಯಾವುದೇ ಬಾಡಿಗೆ ನೀಡದೆ ಪುಟ್‌ಪಾತ್ ಮೇಲೆ ಹಣ್ಣು, ತರಕಾರಿ, ಸೊಪ್ಪು, ಪೂಜಾ ಸಾಮಗ್ರಿ, ತೆಂಗಿನಕಾಯಿ ಮಾರಾಟಕ್ಕೆ 25ಕ್ಕೂ ಅಧಿಕ ವಿವಿಧ ಸಾಮಗ್ರಿ ಅಂಗಡಿ ತೆರೆದುಕೊಂಡಿವೆ.

ಅಲ್ಲಿ ಯಾವುದೇ ಬಾಡಿಗೆ ಇಲ್ಲದೆ ವ್ಯಾಪಾರ ಮಾಡಲು ಸ್ಥಳ ದೊರೆತಿರುವುದರಿಂದ ಮಳಿಗೆಗಳಿಗೆ ತೆರಳಲು ವ್ಯಾಪಾರಸ್ಥರು ನಿರಾಸಕ್ತಿ ತೋರಿದ್ದಾರೆ. ಇದರಿಂದ ನಗರಸಭೆಗೆ ಆರ್ಥಿಕವಾಗಿ ಹಲವು ವರ್ಷಗಳಿಂದ ಭಾರಿ ನಷ್ಟವಾಗುತ್ತಿದೆ ಎಂದು ಸ್ಥಳೀಯ ವ್ಯಾಪಾರಸ್ಥ ರಸೀಲ್ ತಿಳಿಸಿದರು.

ಅಧಿಕ ಬಾಡಿಗೆ ದರ:

ರೈಲು ನಿಲ್ದಾಣ, ಮಾರುಕಟ್ಟೆ ಮತ್ತು ಮುಖ್ಯ ರಸ್ತೆ ಇರುವ ಸ್ಥಳದಲ್ಲಿ ಮಳಿಗೆಗಳು ಇರುವುದರಿಂದ ವಿಪರೀತ ಬಾಡಿಗೆ ನಿಗದಿಪಡಿಸಲಾಗಿದೆ. ದರಕ್ಕೆ ತಕ್ಕಂತೆ ಸೌಲಭ್ಯವಿಲ್ಲ. ಹಲವು ಮಳಿಗೆಗಳು ಗ್ರಾಹಕರಿಗೆ ಕಾಣುವುದಿಲ್ಲ. ಅಳತೆಯಲ್ಲೂ ವ್ಯತ್ಯಾಸ ಹೊಂದಿವೆ.

15x20 ಅಳತೆಯ ಮಳಿಗೆಗಳಿಗೆ ₹ 16,000ದಿಂದ ₹ 21,000ದವರೆಗೂ ಬಾಡಿಗೆ ನಿಗದಿಪಡಸಲಾಗಿದೆ. ಅದಕ್ಕಿಂತ ಕಡಿಮೆ ಅಳತೆಯ ಮಳಿಗೆಗಳಿಗೆ ₹ 8000 ದಿಂದ ₹ 10,000 ಬಾಡಿಗೆ ಇದೆ.

ನಿರ್ವಹಣೆಯ ಕೊರತೆ:

8 ವರ್ಷಗಳಿಂದಲೂ ಸಂಕೀರ್ಣವನ್ನು ವ್ಯಾಪಾರಸ್ಥರೇ ಸ್ವಚ್ಛಗೊಳಿಸುತ್ತಿದ್ದಾರೆ. ಪ್ರಾರಂಭದಲ್ಲಿಯೇ ಅಧಿಕ ಬಾಡಿಗೆ ದರ ನಿಗದಿಪಡಿಸಿರುವ ನಗರಸಭೆ, ನೀರು, ವಿದ್ಯುತ್, ಕಸ ವಿಲೇವಾರಿಗೆ ಪ್ರತ್ಯೇಕ ದರ ನಿಗದಿಪಡಿಸಿದೆ. ಆ ದರ ಹೆಚ್ಚು ಎಂಬ ಕಾರಣದಿಂದ ಲಾಭ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯ ವ್ಯಾಪಾರಸ್ಥರು ತಿಳಿಸಿದರು.

ಬಾಡಿಗೆ ಕೊಡುವ ಪ್ರಕ್ರಿಯೆ ಶೀಘ್ರ: ಪ್ರಸಾದ್

ಮಳಿಗೆಗಳನ್ನು ಬಾಡಿಗೆಗೆ ಕೊಡಲು ಶೀಘ್ರ ಪ್ರಕ್ರಿಯೆ ಆರಂಭಿಸಲಾಗುವುದು. ಹೆಸರು ನೋಂದಾಯಿಸಿದವರು ಮಾತ್ರ ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶವಿರುತ್ತದೆ ಎಂದು ನಗರಸಭೆ ಎಂಜಿನಿಯರ್ ಪ್ರಸಾದ್ ತಿಳಿಸಿದರು.

ಬಾಡಿಗೆ ದರ ₹6,000ದಿಂದ ಪ್ರಾರಂಭವಾಗುತ್ತದೆ. ಮಳಿಗೆಗಳ ಅಳತೆ ಅನುಗುಣವಾಗಿ ಬಾಡಿಗೆ ದರ ನಿಗದಿಪಡಿಸಲಾಗುತ್ತದೆ. 

ರೈಲ್ವೆ ನಿಲ್ದಾಣ ಬಳಿ ನಗರಸಭೆಯಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗುತ್ತಿದೆ. ಆ ಶೌಚಾಲಯವನ್ನೇ ಇಲ್ಲಿನ ವ್ಯಾಪಾರಸ್ಥರು ಬಳಸಬಹುದು ಎಂದು ಹೇಳುತ್ತಾರೆ.

ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸುವುದರಿಂದ, ರಸ್ತೆ ಬದಿ ಸಣ್ಣ-ಪುಟ್ಟ ಅಂಗಡಿಗಳು ಸುಲಭವಾಗಿ ಹುಟ್ಟಿಕೊಳ್ಳುತ್ತಿವೆ. ಇದರ ಪರಿಣಾಮ ಬಾಡಿಗೆಗೆ ಮಳಿಗೆ ಪಡೆಯಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ.
ಪ್ರಕಾಶ್ ಎಂ. ಚನ್ನಪ್ಪನವರ್, ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.