ADVERTISEMENT

ಅವೈಜ್ಞಾನಿಕ ಕಾಮಗಾರಿ: ಅಪಘಾತಕ್ಕೆ ಆಹ್ವಾನಿಸುತ್ತಿದೆ ರಾಜ್ಯ ಹೆದ್ದಾರಿ

ರಾಜ್ಯ ಹೆದ್ದಾರಿ, ಕೆಶಿಪ್‌ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಆರೋಪ

ರವಿ ಆರ್.ತಿಮ್ಮಾಪುರ
Published 22 ಅಕ್ಟೋಬರ್ 2021, 6:13 IST
Last Updated 22 ಅಕ್ಟೋಬರ್ 2021, 6:13 IST
ಆನವಟ್ಟಿಯ ವಿಠ್ಠಲ ದೇವಸ್ಥಾನ ಹತ್ತಿರದ ಪೂಲ್‌ಕಟ್ಟೆ ಪಕ್ಕದಲ್ಲಿನ ಕಿರಿದಾದ ರಸ್ತೆ 
ಆನವಟ್ಟಿಯ ವಿಠ್ಠಲ ದೇವಸ್ಥಾನ ಹತ್ತಿರದ ಪೂಲ್‌ಕಟ್ಟೆ ಪಕ್ಕದಲ್ಲಿನ ಕಿರಿದಾದ ರಸ್ತೆ    

ಆನವಟ್ಟಿ: ಇಲ್ಲಿನ ರಾಜ್ಯ ಹೆದ್ದಾರಿ ಅಪಘಾತಕ್ಕೆ ಆಹ್ವಾನ ನೀಡುತ್ತಿದೆ.ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದಾಗಿ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ ಎಂಬುದು ಜನರ ಆರೋಪ.

ಮೊದಲು ಇದ್ದ ಏಕಮುಖ ರಸ್ತೆಯಿಂದ ಅಪರೂಪಕ್ಕೊಮ್ಮೆ ಅಪಘಾತಗಳು ಸಂಭವಿಸುತ್ತಿದ್ದವು. ರಾಜ್ಯ ಹೆದ್ದಾರಿ ನಿರ್ಮಾಣವಾದ ಮೇಲೆ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಹಲವರು ಮೃತಪಟ್ಟಿದ್ದು, ಇನ್ನು ಕೆಲವರು ಗಾಯಗೊಂಡು ಅಂಗವಿಕಲರಾಗಿದ್ದಾರೆ.

‘ನಿಯಮಾನುಸಾರ ಕಾಮಗಾರಿ ನಡೆದಿಲ್ಲ. ಕಾಲುವೆ ಕಿರಿದಾಗಿದೆ. ರಸ್ತೆ ನೇರವಾಗಿಲ್ಲ ಎಂದು ಈ ಹಿಂದೆ ಕೆಲಸ ನಿಲ್ಲಿಸಿದ್ದರು. ಆದರೆ ಕೆಲವು ತಿಂಗಳ ನಂತರ ಮೊದಲು ಇದ್ದ ಹಾಗೆಯೇ ಕಾಮಗಾರಿ ನಡೆಯಿತು.ಶಾಸಕರು ಇದರ ಬಗ್ಗೆ ಮಾತನಾಡದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಗುತ್ತಿಗೆದಾರರ ಮತ್ತು ಕೆ–ಶಿಪ್ ಅಧಿಕಾರಿಗಳು ಹೆದ್ದಾರಿ ನಿಯಮಗಳನ್ನು ಪಾಲಿಸದೆ ಪ್ರಭಾವಿಗಳ ಒತ್ತಡಕ್ಕೆ ಮಣಿದು ರಸ್ತೆ ನಿರ್ಮಾಣ ಮಾಡಿರುವುದೇ ಹೆಚ್ಚು ಅಪಘಾತಗಳು ಸಂಭವಿಸಲು ಕಾರಣ’ ಎಂದು ದೂರುತ್ತಾರೆ ಕಾಂಗ್ರೆಸ್ ಮುಖಂಡ ರಾಜು ಎಂ. ತಲ್ಲೂರು.

ADVERTISEMENT

ಕಿರಿದಾದ ರಸ್ತೆ: ‘ವಿಠ್ಠಲ ದೇವಸ್ಥಾನದ ಹತ್ತಿರ ನಿರ್ಮಿಸಿರುವ ಗ್ರಾಮೀಣ ರಸ್ತೆಯಲ್ಲಿ ಒಂದು ಬಸ್ ಮಾತ್ರ ಸಂಚರಿಸಬಹುದು. ಬಸ್‌ ಪಕ್ಕದಲ್ಲಿ ‌ಒಬ್ಬ ವ್ಯಕ್ತಿ ಕೂಡ ನಡೆದುಕೊಂಡು ಹೋಗಲು ಸಾಧ್ಯವಿಲ್ಲ. ಇಷ್ಟು ಕಿರಿದಾಗಿ ರಸ್ತೆ ನಿರ್ಮಿಸಿದ್ದರೂ ಕೆ–ಶಿಪ್ ಅಧಿಕಾರಿಗಳು ಕಂಡೂ ಕಾಣದ ಹಾಗೆ ಇರುವುದು ಏಕೆ’ ಎಂಬುದು ಅವರು ಪ್ರಶ್ನಿಸುತ್ತಾರೆ.

‘ರಾಜ್ಯ ಹೆದ್ದಾರಿಯಲ್ಲಿ ಯುವಕರೇ ಹೆಚ್ಚು ಅಪಘಾತಕ್ಕೆ ಒಳಗಾಗುತ್ತಿದ್ದಾರೆ. ಸಕಾಲದಲ್ಲಿ ವೈದ್ಯಕೀಯ ನೆರವು ಸಿಗದೆ ಹಲವರು ಮೃತಪಟ್ಟಿದ್ದಾರೆ. ಆನವಟ್ಟಿಯಿಂದ ಶಿವಮೊಗ್ಗಕ್ಕೆ 100 ಕೀ.ಮೀ. ದೂರವಿದೆ. ಅಪಘಾತಕ್ಕೆ ಒಳಗಾದವರನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಷ್ಟರಲ್ಲೇ ಪ್ರಾಣ ಹೋಗುತ್ತದೆ. ಇಲ್ಲಿ ಶಸ್ತ್ರ ಚಿಕಿತ್ಸೆ ವೈದ್ಯರು, ಅಗತ್ಯ ವೈದ್ಯಕೀಯ ಸಲಕಣೆಗಳು ಇರುವಂತೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸಬೇಕು’ ಎಂದು ಒತ್ತಾಯಿಸುತ್ತಾರೆ ಅವರು.

ರಾಜ್ಯ ಹೆದ್ದಾರಿ ನಿರ್ಮಾಣವಾದ ಮೇಲೆ ಫುಟ್‌ಪಾತ್ ನಿರ್ಮಿಸದೇ ಇರುವುದರಿಂದ ಶಿರಾಳಕೊಪ್ಪ ರಸ್ತೆಯ ಶಾಮನಕಟ್ಟೆಯಿಂದ ಹಾನಗಲ್ ರಸ್ತೆಯ ನೇರಲಗಿ ಕ್ರಾಸ್‌ವರೆಗೆ ಇರುವ ಒಳರಸ್ತೆಗಳಿಗೆ ಮೌತ್‌ಗಳನ್ನು ನಿರ್ಮಾಣ ಮಾಡಿಲ್ಲ. ಒಳರಸ್ತೆಗಳಿಂದ ವಾಹನಗಳು ಏಕಾಏಕಿ ಬರುವುದರಿಂದ ಅಪಘಾತಗಳು ಸಂಭವಿಸುತ್ತವೆ.

ಪಾರ್ಕಿಂಗ್ ಇಲ್ಲ: ರಾಜ್ಯ ಹೆದ್ದಾರಿ ರಸ್ತೆಯನ್ನು ಕಿರಿದಾಗಿ ನಿರ್ಮಿಸಿರುವುದರಿಂದ ಎಲ್ಲೂ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ಮಾಡಿಲ್ಲ. ಹೆದ್ದಾರಿ ಅರ್ಧ ರಸ್ತೆಯಲ್ಲಿ ವಾಹನಗಳು ನಿಲ್ಲುತ್ತವೆ. ಪಾದಚಾರಿಗಳು ನಡೆದುಕೊಂಡು ಹೋಗಲು ಹರಸಾಹಸ ಪಡಬೇಕಾಗಿದೆ.

ಎರಡು ವರ್ಷದ ಹಿಂದೆ ತಿಮ್ಮಾಪುರ ಕ್ರಾಸ್ ಬಿಎಸ್‌ಎನ್‌ಎಲ್ ಕಚೇರಿ ಎದುರು ರಾತ್ರಿ ಭೀಕರ ಅಪಘಾತ ಸಂಭವಿಸಿದ ಬಳಿಕ ಗ್ರಾಮಸ್ಥರ ಒತ್ತಾಯಕ್ಕೆ ಮಣಿದು ಕೆಲವು ಕಡೆ ರಸ್ತೆ ತಡೆಗಳನ್ನು ಹಾಕಲಾಗಿದೆ. ಸರ್ಕಾರಿ ಆಸ್ಪತ್ರೆ, ಸಂತೆ ಮಾರುಕಟ್ಟೆ ಕ್ರಾಸ್‌, ವಿಠ್ಠಲ ದೇವಸ್ಥಾನ, ಕೋಟಿಪುರ ಕೈಟಬೈರೇಶ್ವರ ದೇವಸ್ಥಾನ, ಜಡೆ ಕ್ರಾಸ್, ನೇರಲಗಿ ಕ್ರಾಸ್‌ಗಳಿಗೆ ರಸ್ತೆ ತಡೆಗಳನ್ನು ನಿರ್ಮಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಪಿ. ಅಜಿತ್‌ ಕುಮಾರ.

ವಿಠ್ಠಲ ದೇವಸ್ಥಾನದ ಬಳಿ ಕಿರಿದಾದ ಹೆದ್ದಾರಿ ಇರುವುದರಿಂದ ಈಚೆಗೆ ನನ್ನ ಸ್ನೇಹಿತ ಕಾರ್ತಿಕ್ ಅಪಘಾತದಲ್ಲಿ ಮೃತಪಟ್ಟ. ಪೂಲ್‌ಕಟ್ಟೆ ಹತ್ತಿರ ಬಸ್ ಹೋದರೆ ಪಕ್ಕದಲ್ಲಿ ಜಾಗವೇ ಇರುವುದಿಲ್ಲ. ಕಿರಿದಾದ ರಸ್ತೆಯನ್ನು ವಿಸ್ತರಣೆ ಮಾಡಬೇಕು. ಇಲ್ಲವೇ ಆನವಟ್ಟಿ ಮುಖ್ಯ ರಸ್ತೆಯಲ್ಲಿ ನಡೆಯುವ ಅಪಘಾತಗಳಿಗೆ ಕೆಶಿಪ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ನೇರ ಹೊಣೆ ಹೋರಬೇಕು ಎಂದು ಆಗ್ರಹಿಸುತ್ತಾರೆ ಪವನ ಇಳಿಗೇರ್.

ವಿಸ್ತರಣೆ ಮಾಡಲು ಮನವಿ ಸಲ್ಲಿಕೆ

‘ಗುತ್ತಿಗೆ ಪಡೆದ ಕಂಪನಿಗೆ ಶಾಲೆಗಳ ಬಳಿ ಬ್ಯಾರಿಕೇಡ್ ಹಾಕುವಂತೆ ಹಾಗೂ ಸರ್ಕಾರಿ ಆಸ್ಪತ್ರೆ ಎದುರಿನ ಸರ್ವಿಸ್ ರಸ್ತೆಗೆ ಡಾಂಬರು ಹಾಕಲು, ವಿಠ್ಠಲ ದೇವಸ್ಥಾನದ ಎದುರಿನ ರಸ್ತೆ ವಿಸ್ತರಣೆಗೆ ಸೂಚಿಸಲಾಗಿತ್ತು. ಆದರೆ ಅವರು ಅನುದಾನ ಇಲ್ಲ ಎಂಬ ಕಾರಣ ನೀಡಿದ್ದರು. ಈಗ ರಾಜ್ಯ ಹೆದ್ದಾರಿ ರಸ್ತೆ ಲೋಕೋಪಯೋಗಿ ವ್ಯಾಪ್ತಿಗೆ ಸೇರಿದ್ದು ವಿಸ್ತರಣೆ ಮಾಡುವಂತೆ ಮನವಿ ಸಲ್ಲಿಸಿದ್ದೇವೆ’ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರವಿಕುಮಾರ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.