ADVERTISEMENT

ಭಗೀರಥ ಜಯಂತ್ಯುತ್ಸವ, ಉಪ್ಪಾರರ ಬೃಹತ್ ಸಮಾವೇಶ ಫೆ.9ಕ್ಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2024, 15:32 IST
Last Updated 1 ಫೆಬ್ರುವರಿ 2024, 15:32 IST

ಶಿವಮೊಗ್ಗ: ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಮಧುರೆಯ ಬ್ರಹ್ಮವಿದ್ಯಾನಗರ ಕ್ಷೇತ್ರದಲ್ಲಿ ಫೆಬ್ರುವರಿ 9 ರಂದು ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಭಗೀರಥ ಜಯಂತ್ಯುತ್ಸವ ಹಾಗೂ ಉಪ್ಪಾರರ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ಉಪ್ಪಾರ ಸಮಾಜದ ಕುಲಶಾಸ್ತ್ರೀಯ ಅಧ್ಯಯನ ನಡೆದಿದೆ. ಸಮುದಾಯಕ್ಕೆ ಸಿಗಬೇಕಾದ ರಾಜಕೀಯ ಸ್ಥಾನ– ಮಾನ ಕುರಿತ ಹಕ್ಕೊತ್ತಾಯವನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿವರು. ಉಪ್ಪಾರ ಸಂಘ ರಾಜ್ಯ ಘಟಕ ಅಧ್ಯಕ್ಷ ಸಿ.ಪಟ್ಟರಂಗಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ ಭಗೀರಥ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು ಎಂದರು.

ADVERTISEMENT

ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ,ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ,ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧುಬಂಗಾರಪ್ಪ ಸೇರಿದಂತೆ ಗಣ್ಯರ ಉಪಸ್ಥಿತಿ ಇರಲಿದೆ ಎಂದರು. 

ಉಪ್ಪಾರ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಎನ್.ಟಿ. ಹಾಲಪ್ಪ ಮಾತನಾಡಿ, ಸಮಾವೇಶಕ್ಕೆ ರಾಜ್ಯ ಹಾಗೂ ಕೇಂದ್ರದ ನಾಯಕರು ಭಾಗವಹಿಸುವರು. ಜಿಲ್ಲೆಯಿಂದ 5 ಸಾವಿರ ಜನ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಂದು ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರ ಪಟ್ಟಾಭಿಷೇಕದ 25 ನೇ ವರ್ಷದ ರಜತ ಮಹೋತ್ಸವ ಕೂಡ ನಡೆಯಲಿದೆ ಎಂದರು.

ಉಪ್ಪಾರ ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಮಾತನಾಡಿ, ‘ಸಂಸದ ಬಿ.ವೈ.ರಾಘವೇಂದ್ರ ಅವರು ಉಪ್ಪಾರ ಸಮುದಾಯ ಭವನ ನಿರ್ಮಾಣಕ್ಕೆ ₹1.5 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ್ದರು. ಆದರೆ, ಈ ಅನುದಾನ ಬಿಡುಗಡೆ ಆಗಿಲ್ಲ’ ಎಂದು ದೂರಿದರು.

ಪ್ರಮುಖರಾದ ನಾಗರಾಜ್ ಕಂಕಾರಿ, ಮೋಹನ್, ನಾಗೇಶ್, ರೇಣುಕೇಶ್, ಕಾಶಿಪುರ ರಾಮಣ್ಣ, ಉಮೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.