ಶಿವಮೊಗ್ಗ: ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗೆ (ಎಂಎಡಿಬಿ) ಬಜೆಟ್‌ನಲ್ಲಿ ₹ 100 ಕೋಟಿ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜುಲೈ 7ರಂದು ಭೇಟಿಯಾಗಿ ಮನವಿ ಸಲ್ಲಿಸಲು ಶುಕ್ರವಾರ ಇಲ್ಲಿ ನಡೆದ ಮಂಡಳಿಯ ಸರ್ವಸದಸ್ಯರ ಸಭೆ ತೀರ್ಮಾನಿಸಿತು.
ಮಂಡಳಿಯ ಅಧ್ಯಕ್ಷರೂ ಆದ ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. 16 ಜಿಲ್ಲೆಗಳ 86 ಶಾಸಕರ (21 ಮಂದಿ ವಿಧಾನಪರಿಷತ್ ಸದಸ್ಯರನ್ನೊಳಗೊಂಡು) ಪೈಕಿ 14 ಮಂದಿ ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದರು.
‘ಮಲೆನಾಡು ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ನಾವು ಸಶಕ್ತವಾಗಿದ್ದೇವೆ. ಈ ಹಿಂದೆ ಕೈಗೊಳ್ಳಲಾದ ಕಾಮಗಾರಿ ತೃಪ್ತಿಕರವಾಗಿವೆ. ಮುಂದಿನ ದಿನಗಳಲ್ಲಿ ಎಂಎಡಿಬಿಯನ್ನು ಇನ್ನಷ್ಟು ಕ್ರಿಯಾಶೀಲಗೊಳಿಸಲಾಗುವುದು’ ಎಂದು ಸಚಿವ ಡಿ. ಸುಧಾಕರ್ ತಿಳಿಸಿದರು.
ಮಂಡಳಿಯ ಪ್ರದೇಶದ ವ್ಯಾಪ್ತಿ ವಿಶಾಲವಾಗಿದೆ. ಅನುದಾನ ಕಡಿಮೆಯಾಗಿದೆ. ಇನ್ನೂ ಹೆಚ್ಚಿನ ಅನುದಾನ ತರಲು ಪ್ರಯತ್ನ ಮಾಡಲಾಗುವುದು. ಬಿಡುಗಡೆಯಾಗುವ ಅನುದಾನವನ್ನು ನಿರೀಕ್ಷಿತ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ‘ಮಂಡಳಿ ವ್ಯಾಪ್ತಿಯಲ್ಲಿ ಹೊಸದಾಗಿ ಆಯ್ಕೆಯಾದ ಶಾಸಕರಿಂದ ಕಾಮಗಾರಿಗಳ ಹೊಸ ಪ್ರಸ್ತಾವನೆ ಪಡೆದು, ಸಭೆಯಲ್ಲಿ ಅನುಮೋದನೆ ಪಡೆದು, ಅಗತ್ಯವಿರುವ ಅನುದಾನಕ್ಕಾಗಿ ಬೇಡಿಕೆ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.
ಮಂಡಳಿಯ ಆಡಳಿತಾಧಿಕಾರಿ ಕೆ.ಎಸ್.ಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮಂಡಳಿಯು ಮಲೆನಾಡು ಪ್ರದೇಶದ 16 ಜಿಲ್ಲೆಗಳ ಪ್ರಾಥಮಿಕ ಅವಶ್ಯಕತೆಗಳಾದ ರಸ್ತೆ, ಚರಂಡಿ, ಕಾಲುವೆ, ಸಣ್ಣ ಸೇತುವೆಗಳ ನಿರ್ಮಾಣ, ಗ್ರಾಮೀಣ ಪ್ರದೇಶಗಳಲ್ಲಿ ಅವಶ್ಯಕ ಶಾಲಾ ಕಟ್ಟಡ ಹಾಗೂ ಅಂಗನವಾಡಿ ಕಟ್ಟಡಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಪೂರೈಕೆ, ಆರೋಗ್ಯ ಸೇವೆ, ಸಮುದಾಯ ಭವನ, ಬಸ್ ನಿಲ್ದಾಣ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ’ ಎಂದರು.
ಕಳೆದ ಸಾಲಿನಲ್ಲಿ ₹ 43 ಕೋಟಿ ಅನುದಾನ ನಿಗದಿಪಡಿಸಲಾಗಿತ್ತು. ಅದರಲ್ಲಿ ಬಂಡವಾಳ ವೆಚ್ಚ ₹ 32.64 ಕೋಟಿ, ವಿಶೇಷ ಘಟಕ ಯೋಜನೆಯಡಿ ₹ 7.37 ಕೋಟಿ ಮತ್ತು ಗಿರಿಜನ ಉಪಯೋಜನೆಯಡಿ ₹ 2.99 ಕೋಟಿ ಬಿಡುಗಡೆಯಾಗಿತ್ತು. ಈ ಅನುದಾನದಲ್ಲಿ ಮಂಡಳಿಯ ಎಲ್ಲಾ ಸದಸ್ಯರಿಗೆ ತಲಾ ₹ 50 ಲಕ್ಷ ಮೊತ್ತದ ಕ್ರಿಯಾಯೋಜನೆಗೆ ಕಾಮಗಾರಿಗಳನ್ನು ನೀಡಲು ಪತ್ರ ವ್ಯವಹಾರ ಮಾಡಲಾಗಿದೆ. ಹೊಸ ಶಾಸಕರಿಂದಲೂ ಪ್ರಸ್ತಾವನೆ ಪಡೆದು, ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದರು.
ಸಭೆಯಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಶಿವಮೊಗ್ಗ ಶಾಸಕ ಎಸ್.ಎನ್. ಚನ್ನಬಸಪ್ಪ, ಶೃಂಗೇರಿ ಶಾಸಕ ಟಿ. ರಾಜೇಗೌಡ, ಹಿರೆಕೆರೂರಿನ ಯು.ಬಿ. ಬಣಕಾರ್, ಬೇಲೂರು ಶಾಸಕ ಎಚ್.ಕೆ. ಸುರೇಶ್, ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ, ಗುಂಡ್ಲುಪೇಟೆ ಶಾಸಕ ಗಣೇಶ ಪ್ರಸಾದ್, ಖಾನಾಪುರ ಶಾಸಕ ವಿಠ್ಠಲ ಹಲಗೇಕರ, ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಇದ್ದರು.
ಅಭಿವೃದ್ಧಿ ಕಾಮಗಾರಿಗಳ ಆಯ್ಕೆಯ ವಿಚಾರದಲ್ಲಿ ಶಾಸಕರ ಸಲಹೆಗೆ ಆದ್ಯತೆ ನೀಡಿ. ಸಭೆಯ ಅನುಸರಣಾ ವರದಿಯನ್ನು ಮೊದಲೇ ಶಾಸಕರಿಗೆ ಕಳುಹಿಸುವ ವ್ಯವಸ್ಥೆ ಮಾಡಿ..-ಎಚ್.ಡಿ.ತಮ್ಮಯ್ಯ ಚಿಕ್ಕಮಗಳೂರು ಶಾಸಕ
ಅಪಮಾನ ಮಾಡಿದರೆ ಸಹಿಸಲ್ಲ
ಸಭೆಯಲ್ಲಿ ಮುಂದಿನ ಸಾಲಿನಲ್ಲಿ ಕುಳಿತಿದ್ದ ಶಾಸಕರಿಗೆ ಮಾತ್ರ ಚಹಾ–ನೀರು ಕೊಡಲಾಗಿತ್ತು. ಎರಡನೇ ಸಾಲಿನಲ್ಲಿ ಕುಳಿತವರಿಗೆ ಕೊಟ್ಟಿರಲಿಲ್ಲ. ಸಭೆ ಮುಗಿದ ನಂತರ ಇದನ್ನು ಪ್ರಸ್ತಾಪಿಸಿದ ಶಾಸಕ ತಮ್ಮಯ್ಯ ‘ಸಭೆಯಲ್ಲಿ ಕುಳಿತವರಿಗೆ ಚಹಾ ನೀರು ಕೊಡುವುದು ಸೌಜನ್ಯ. ಆದರೆ ನಮಗೆ ಅಪಮಾನ ಮಾಡಿದ್ದೀರಿ. ನಾವೆಲ್ಲರೂ ಜನರಿಂದ ಆಯ್ಕೆಯಾಗಿ ಬಂದವರು. ಇದು ಪುನರಾವರ್ತನೆಯಾದರೆ ಸಹಿಸಲ್ಲ’ ಎಂದು ಹೇಳಿದರು. ಆಗ ಸಚಿವ ಸುಧಾಕರ್ ಅವರನ್ನು ಸಮಾಧಾನಪಡಿಸಿದರು. ತಮ್ಮಯ್ಯ ಅವರು ಊಟವನ್ನೂ ನಿರಾಕರಿಸಿ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.