ಶಿವಮೊಗ್ಗ: ಹೊಸನಗರ ತಾಲ್ಲೂಕಿನ ನಗರ ಹೋಬಳಿ ಕರಿಮನೆ ಗ್ರಾಮದ ಸರ್ವೆ ನಂ 8, 27, 72,106, 126, 144, 189ರ ಪಹಣಿ ದಾಖಲೆಯ ಕಾಲಂ ನಂ 9ರಲ್ಲಿ ಸೂಚಿತ ಅರಣ್ಯವೆಂದು ದಾಖಲಾಗಿದೆ. ಅದನ್ನು ರದ್ದುಪಡಿಸುವಂತೆ ಕೋರಿ ಫಲಾನುಭವಿಗಳು ಕೆಪಿಸಿಸಿ ವಕ್ತಾರ ಬಿ.ಎ.ರಮೇಶ್ ಹೆಗ್ಡೆ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
‘ಸದರಿ ಜಮೀನಿನಲ್ಲಿ ಸುಮಾರು 300ರಿಂದ 400 ವರ್ಷಗಳಿಂದ ನಮ್ಮ ಹಿರಿಯರು ಜೀವನ ಸಾಗಿಸಿಕೊಂಡು ಬಂದಿದ್ದಾರೆ. ಮನೆ ಕಟ್ಟಿಕೊಂಡು ಸಾಗುವಳಿ ಮಾಡುತ್ತಿದ್ದಾರೆ. ಅಲ್ಲಿ ಅಡಿಕೆ ತೋಟ, ಗದ್ದೆ, ದೇವಸ್ಥಾನ ಇದ್ದು, ಶಾಲೆ, ಗ್ರಾಮ ಪಂಚಾಯಿತಿ ಕಾರ್ಯಾಲಯ, ಅಂಗನವಾಡಿ ಮೊದಲಾದ ಸೌಕರ್ಯ ಕಲ್ಪಿಸಲಾಗಿದೆ. ಕಂದಾಯ ಇಲಾಖೆಯ ಪಹಣಿ ದಾಖಲೆಗಳ ಪ್ರಕಾರ ಕಾಲಂ 9ರಲ್ಲಿ ಮೇಲ್ಕಂಡ ಜಮೀನುಗಳು ಸರ್ಕಾರಿ ದನಗಳ ಮುಫತ್ತೆಂದು ದಾಖಲಾಗಿರುತ್ತದೆ. ಆದರೆ ಇತ್ತೀಚೆಗೆ ಯಾವುದೇ ಅರಣ್ಯ ಕಾಯ್ದೆಯಡಿಯಲ್ಲಿ ಸದರಿ ಜಾಗ ಅರಣ್ಯವೆಂದು ಅಧಿಸೂಚನೆ ಹೊಂದದೇ ಇದ್ದರೂ ಸಹ ಯಾವುದೇ ಮ್ಯುಟೇಶನ್ ಆದೇಶ ಇಲ್ಲದೇ ಇದ್ದರೂ ಸಹ ಸೂಚಿತ ಅರಣ್ಯವೆಂದು ಪಹಣಿಯಲ್ಲಿ ತಪ್ಪಾಗಿ ದಾಖಲಾಗಿರುತ್ತದೆ. ಈ ಕಾರಣದಿಂದ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಸೆಕ್ಷನ್ 94 (ಎ), 94 (ಬಿ), 94 (ಸಿ) ಹಾಗೂ 94 (ಸಿಸಿ) ನಿಯಮಗಳಡಿ ಬಗರ್‌ಹುಕುಂ ಸಾಗುವಳಿ ಹಾಗೂ ವಸತಿ ಸಕ್ರಮ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ವಿಲೇ ಇಟ್ಟಿರುತ್ತಾರೆ’ ಎಂದರು.
ತಪ್ಪಾಗಿ ನಮೂದಾಗಿರುವ ಸೂಚಿತ ಅರಣ್ಯ ಪದವನ್ನು ರದ್ದುಪಡಿಸಿ ಸಾಗುವಳಿ ಹಾಗೂ ವಸತಿ ಹಕ್ಕನ್ನು ಮಂಜೂರು ಮಾಡಲು ಕ್ರಮ ವಹಿಸುವಂತೆ ಫಲಾನುಭವಿಗಳು ಕೋರಿದರು.
ಕರಿಮನೆ ಗ್ರಾಮದ ಎಸ್.ಪಿ.ಪರ್ವತಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.