ADVERTISEMENT

ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತಾಯ

ಪಾಲಿಕೆ ಅಧಿಕಾರಿಗಳ ವಿರುದ್ಧ ಮಾಜಿ ಶಾಸಕ ಕಿಡಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 16:20 IST
Last Updated 15 ಅಕ್ಟೋಬರ್ 2024, 16:20 IST

ಶಿವಮೊಗ್ಗ: ಮಹಾನಗರ ಪಾಲಿಕೆ ಮತ್ತು ಜಲಮಂಡಳಿ ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುವುದು ಇನ್ನಾದರೂ ನಿಲ್ಲಿಸಬೇಕು. ಹೀಗೆಯೇ ವರ್ತಿಸಿದರೆ ಮುಂದಿನ ದಿನಗಳಲ್ಲಿ ಪಾಲಿಕೆಗೆ ಮುತ್ತಿಗೆ ಹಾಕುತ್ತೇವೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ ಎಚ್ಚರಿಕೆ ನೀಡಿದರು.

ಕಳೆದ ಕೆಲವು ದಿನಗಳಿಂದ ಅಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಪರಿಣಾಮವಾಗಿ ನಗರದ ಜನರು ಜ್ವರ, ವಾಂತಿ ಭೇದಿ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಪತ್ರೆಗಳು ಭರ್ತಿಯಾಗಿವೆ. ಚಿಕಿತ್ಸೆ ಪಡೆಯಲು ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು. 

ನೀರು ಶುದ್ಧೀಕರಣ ಘಟಕವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಹೀಗಾಗಿ ಕಲುಷಿತ ನೀರು ಪೂರೈಕೆ ಮಾಡಲಾಗುತ್ತಿದೆ. ಜನರು ಬೀದಿಗಿಳಿದು ಹೋರಾಟ ಮಾಡುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿ ಅವರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕಿದೆ. ಆದರೆ ಎಲ್ಲರೂ ಬರೀ ಪತ್ರ ವ್ಯವಹಾರದಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಜನರ ಬಗ್ಗೆ ಇವರಿಗೆ ಕಾಳಜಿಯಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

ಜನರು ದುಡ್ಡು ಕೊಟ್ಟು ಶುದ್ಧವಾದ ನೀರು ಖರೀದಿ ಮಾಡುವಂತಹ ಪರಿಸ್ಥಿತಿ ಬಂದಿದೆ. ಇದಕ್ಕೆ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣ. ಮೂಲ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಇಂತಹವರಿಂದ ಉತ್ತಮವಾದ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. 

ನಗರದಲ್ಲಿ ಕುಡಿಯುವ ನೀರು ಸರಬರಾಜು 24/7 ಕಾಮಗಾರಿಯನ್ನು ಜಲಮಂಡಳಿ ಮಾಡುತ್ತಿದೆ. ಇನ್ನೂ ಅರ್ಧದಷ್ಟು ಕಾಮಗಾರಿ ಮುಗಿದಿಲ್ಲ. ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಇದಕ್ಕೂ ತಮಗೂ ಸಂಬಂಧ ಇಲ್ಲ ಎನ್ನುತ್ತಿದ್ದಾರೆ. ಪಾಲಿಕೆಯಲ್ಲಿ ದುಡ್ಡುಕೊಟ್ಟರೇ ಮಾತ್ರ ಕೆಲಸವಾಗುತ್ತಿದೆ. ಹಣ ಕೊಡದಿದ್ದರೆ ಫೈಲುಗಳನ್ನು ಪೆಂಡಿಂಗ್ ಇಡಲಾಗುತ್ತಿದೆ ಎಂದು ಆರೋಪಿಸಿದರು.

ದೀಪಕ್ ಸಿಂಗ್, ಸಿದ್ದಪ್ಪ, ಸಂಗಯ್ಯ, ಗೋವಿಂದರಾಜು, ಮಂಜುನಾಥ, ಲೋಹಿತ್, ಚಂದ್ರಶೇಖರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.