ಶಿವಮೊಗ್ಗ: ಪರಿಶಿಷ್ಟ ಜಾತಿ-ಪಂಗಡದ ಅನುದಾನ ಬಳಸಿಕೊಳ್ಳುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ವಿಫಲವಾಗಿವೆ ಎಂದು ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಘಟಕದ ಅಧ್ಯಕ್ಷ ಎ.ಡಿ.ಶಿವಪ್ಪ ಆರೋಪಿಸಿದರು.
ಪರಿಶಿಷ್ಟರ ಎಸ್‌ಸಿ. ಎಸ್‌ಪಿ ಮತ್ತು ಟಿಎಸ್‌ಪಿ ಅನುದಾನದಲ್ಲಿ ₹11 ಸಾವಿರ ಕೋಟಿ ಹಣವನ್ನು ಕಲಂ 7ಡಿ ಅಡಿಯಲ್ಲಿ ಬೇರೆಬೇರೆ ಬಾಬ್ತುಗಳಿಗೆ ಬಳಸುತ್ತಾ, ಅನ್ಯಾಯ ಮಾಡಲಾಗುತ್ತಿದೆ. ಕಲಂ 7ಡಿ ಅಡಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರೆಡೂ ಸರ್ಕಾರಗಳು ಪರಿಶಿಷ್ಟರ ಅನುದಾನದ ಹಣ ಬಳಸಿಕೊಳ್ಳದೇ ವಂಚಿಸಿವೆ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕಲಂ 7ಡಿ ಅಡಿಯಲ್ಲಿ ₹19 ಸಾವಿರ ಕೋಟಿ ಅನುದಾನವನ್ನು ಬೇರೆ ಬಾಬ್ತುಗಳಿಗೆ ಬಳಸಿಕೊಳ್ಳಲಾಗಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಕಲಂ 7ಡಿಯನ್ನು ರದ್ದುಪಡಿಸುತ್ತೇವೆ ಎಂದು ಹೇಳಿದ್ದರು. ಆದರೆ ಆ ಪಕ್ಷವೂ ಕೂಡ ಕೆಲವು ಒತ್ತಡಗಳಿಗೆ ಸಿಕ್ಕು ಪರಿಶಿಷ್ಟರಿಗೆ ಮೀಸಲಾಗಿಟ್ಟಿದ್ದ ₹34,294 ಕೋಟಿ ಹಣವನ್ನು ಸಮರ್ಥವಾಗಿ ಬಳಸಿಕೊಂಡಿಲ್ಲ. ಆದ್ದರಿಂದ ಕಾಂಗ್ರೆಸ್ ಪಕ್ಷ ಕೂಡ ಪರಿಶಿಷ್ಟರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.
₹ 11 ಸಾವಿರ ಕೋಟಿ ಅನುದಾನವನ್ನು ಪ್ರತಿ ಕುಟುಂಬಕ್ಕೆ ₹5 ಲಕ್ಷ ಕೊಟ್ಟಿದ್ದರೆ ಸುಮಾರು 2.20 ಲಕ್ಷ ಮನೆಗಳನ್ನು ಕಟ್ಟಿ ಕೊಡಬಹುದಿತ್ತು. ಇದರಿಂದ ವಸತಿ ಸಮಸ್ಯೆ ಪರಿಹಾರವಾಗುತ್ತಿತ್ತು. ಅಥವಾ ನಿರುದ್ಯೋಗಿಗಳಿಗೆ ತಲಾ ₹5 ಲಕ್ಷ ಬಂಡವಾಳ ನೀಡಿದ್ದರೆ ತಮ್ಮ ಕಾಲ ಮೇಲೆ ತಾವು ನಿಲ್ಲುತ್ತಿದ್ದರು. ಆದರೆ ಈ ಎರಡನ್ನೂ ಮಾಡದ ಎರಡೂ ಸರ್ಕಾರಗಳು ಬೇರೆಬೇರೆ ಬಾಬ್ತುಗಳಿಗೆ ಹಣ ವರ್ಗಾವಣೆ ಮಾಡಿ ಪರಿಶಿಷ್ಟರನ್ನು ವಂಚಿಸಿವೆ ಎಂದು ದೂರಿದರು.
ತಕ್ಷಣವೇ ಕಾಂಗ್ರೆಸ್ ಸರ್ಕಾರ 7 ಡಿ ಕಲಂ ಅನ್ನು ರದ್ದುಪಡಿಸಿ ಆ ಹಣವನ್ನು ಪರಿಶಿಷ್ಟರ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿಯ ಜಿಲ್ಲಾ ಸಂಯೋಜಕ ಎಚ್.ಎನ್. ಶ್ರೀನಿವಾಸ್, ಉಪಾಧ್ಯಕ್ಷ ಪ್ರೊ. ಕೃಷ್ಣಪ್ಪ, ಖಜಾಂಚಿ ಎ.ಡಿ. ಲಕ್ಷ್ಮೀಪತಿ, ಸಂಘಟನಾ ಕಾರ್ಯದರ್ಶಿ ಮಂಜುನಾಥ್, ಗುತ್ಯಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.