ADVERTISEMENT

ಇಂದಿನಿಂದ ಮಕ್ಕಳಿಗೂ ಲಸಿಕೆ

83,128 ಮಕ್ಕಳಿಗೆ ಲಸಿಕೆ ಗುರಿ, ಪ್ರತಿ ಕಾಲೇಜಿನಲ್ಲೂ ಅಭಿಯಾನ

ಗಣೇಶ್ ತಮ್ಮಡಿಹಳ್ಳಿ
Published 3 ಜನವರಿ 2022, 4:35 IST
Last Updated 3 ಜನವರಿ 2022, 4:35 IST
ಎನ್‌.ಎಂ.ರಮೇಶ್‌
ಎನ್‌.ಎಂ.ರಮೇಶ್‌   

ಶಿವಮೊಗ್ಗ: ಹೊಸ ವರ್ಷದ ಆರಂಭದ ಹೊಸ್ತಿಲಲ್ಲೇ ಮಕ್ಕಳಿಗೂ ಕೊರೊನಾ ಲಸಿಕೆ ಹಾಕಲು ಮುಂದಾಗಿರುವ ಆರೋಗ್ಯ ಇಲಾಖೆಯು ಜಿಲ್ಲೆಯಲ್ಲಿ ಒಟ್ಟು 83,128 ಮಕ್ಕಳಿಗೆ ಲಸಿಕೆ ನೀಡಿಕೆ ಗುರಿ ಹೊಂದಿದೆ.

ಜ.3ರಿಂದ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗುತ್ತಿದೆ. ಕಳೆದ ವರ್ಷ ಜನವರಿ 16ರಿಂದ ಹಂತ ಹಂತವಾಗಿ ವಿವಿಧ ವಯೋಮಾನದವರಿಗೆ ಲಸಿಕಾ ಅಭಿಯಾನ ನಡೆಸಲಾಗಿದೆ. ಕೊರೊನಾ ವಾರಿಯರ್‌ಗಳಿಗೆ, 60 ವರ್ಷ ಮೇಲ್ಪಟ್ಟವರಿಗೆ, 45 ವರ್ಷ ಮೇಲ್ಪಟ್ಟವರಿಗೆ, ನಂತರ 18 ವರ್ಷ ಮೇಲ್ಪಟ್ಟವರಿಗೆ ಹೀಗೆ ನಾನಾ ಹಂತಗಳಲ್ಲಿ ಲಸಿಕಾ ಅಭಿಯಾನ ನಡೆಸಲಾಗಿದ್ದು, ಇದೀಗ 15 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಕೆ ಲಸಿಕೆ ನೀಡಲು ಸಮರೋಪಾದಿಯಲ್ಲಿ ಸಿದ್ಧತೆ ನಡೆದಿದೆ.

2007ಕ್ಕೂ ಮುನ್ನ ಜನಿಸಿದ ಎಲ್ಲ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲಾಗುತ್ತಿದ್ದು, ಜ.3ರಂದು ನಗರದ ಸೈನ್ಸ್‌ ಮೈದಾನದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕೋ ವ್ಯಾಕ್ಸಿನ್ ಲಸಿಕೆ ನೀಡುವ ಮೂಲಕ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.

ADVERTISEMENT

83,831 ವಿದ್ಯಾರ್ಥಿಗಳು: ಜಿಲ್ಲೆಯಲ್ಲಿ 9ನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳು ಸೇರಿ ಒಟ್ಟು 83,831 ವಿದ್ಯಾರ್ಥಿಗಳಿಗೆ ಲಸಿಕೆನೀಡಲು ಗುರಿ ಹೊಂದಲಾಗಿದ್ದು, 15ರಿಂದ 18 ವರ್ಷದೊಳಗಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಲಸಿಕೆ ನೀಡಲಾಗುತ್ತದೆ ಎಂದು ಅರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಶಾಲೆಗಳಲ್ಲೂ ಲಸಿಕೆ: ಮಕ್ಕಳ ಲಸಿಕಾಅಭಿಯಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆಮಾಡಿಕೊಂಡಿದೆ. ತಾಲ್ಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಬಿಇಒ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಶಿಕ್ಷಣ ಇಲಾಖೆ ಅಧಿಕಾರಿಗಳು ಲಸಿಕಾ ಅಭಿಯಾನಕ್ಕೆ ತಯಾರಿ ನಡೆಸಿದ್ದಾರೆ. ಈಗಾಗಲೇ ಮೇಲಧಿಕಾರಿಗಳು ಮಾರ್ಗದರ್ಶನ ನೀಡಿದ್ದಾರೆ. ಶಾಲೆಯಲ್ಲಿ ಲಸಿಕೆ ಪಡೆಯಲು ಅರ್ಹ ಇರುವ ವಿದ್ಯಾರ್ಥಿಗಳ ಸಂಖ್ಯೆ ಲಭ್ಯತೆ ನೋಡಿಕೊಂಡು ಯಾವ ದಿನ ಯಾವ ಶಾಲೆ ಎಂಬ ಪಟ್ಟಿಯನ್ನು ಕೂಡ ಸಿದ್ಧಪಡಿಸಲಾಗುವುದು ಎಂದು ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಎಲ್‌. ನಾಗರಾಜ್‌ ನಾಯ್ಕ್‌ ತಿಳಿಸಿದ್ದಾರೆ.

ಶಾಲೆ ಬಿಟ್ಟ ಮಕ್ಕಳಿಗೂ ಲಸಿಕೆ: ಜಿಲ್ಲೆಯಲ್ಲಿರುವ 15ರಿಂದ 18ವರ್ಷದೊಳಗೆ ಇರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಲಸಿಕೆ ನೀಡಲು ಗುರಿ ಹಾಕಿಕೊಂಡಿರುವ ಆರೋಗ್ಯ ಇಲಾಖೆ ಶಾಲೆ ಬಿಟ್ಟ ಮಕ್ಕಳಿಗೂ ಲಸಿಕೆ ನೀಡಲು ಯೋಜನೆ ರೂಪಿಸಿದೆ. ಇದಕ್ಕಾಗಿ ಶಾಲೆ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರನ್ನುಬಳಸಿಕೊಂಡು ಶಾಲೆ ಬಿಟ್ಟ ಮಕ್ಕಳ ಪಟ್ಟಿ ರಚಿಸಿ ಅದರಂತೆ ಅವರ ಮನೆಗೆ ತೆರಳಿ ಪೋಷಕರ ಮನವೊಲಿಸಿ ಲಸಿಕೆ ಹಾಕಲು ಸಿದ್ಧತೆ ನಡೆಸಲಾಗಿದೆ ಎಂದು ಡಾ.ಎಲ್‌. ನಾಗರಾಜ್‌ ನಾಯ್ಕ್ಮಾಹಿತಿ ನೀಡಿದರು.

‘ಲಸಿಕಾ ಅಭಿಯಾನಕ್ಕೆ ತಯಾರಿ’

‘ಜಿಲ್ಲೆಯ ಶಾಲೆಗಳಲ್ಲಿ ಮಕ್ಕಳ ಲಸಿಕಾ ಅಭಿಯಾನಕ್ಕೆ ತಯಾರಿ ಮಾಡಿಕೊಂಡಿದ್ದೇವೆ. 9 ಮತ್ತು 10ನೇ ತರಗತಿಯಲ್ಲಿ 53 ಸಾವಿರ ವಿದ್ಯಾರ್ಥಿಗಳಿದ್ದು, ಈ ಪೈಕಿ 15ರಿಂದ 18 ವರ್ಷದೊಳಗಿನ 25 ಸಾವಿರ ವಿದ್ಯಾರ್ಥಿಗಳಿದ್ದಾರೆ. ಪ್ರತಿ ಶಾಲೆಗೂ ತೆರಳಿ ಲಸಿಕೆ ವಿತರಣೆ ಮಾಡಲಾಗುವುದು’ ಎಂದುಡಿಡಿಪಿಐ ಎನ್‌.ಎಂ.ರಮೇಶ್‌ ತಿಳಿಸಿದರು.

22, 62, 833 ಡೋಸ್‌ ಲಸಿಕೆ

ಜಿಲ್ಲೆಯಲ್ಲಿ ಇದುವರೆಗೆ 22,62,833 ಡೋಸ್‌ ಲಸಿಕೆ ನೀಡಲಾಗಿದೆ. 12,58, 894 ಮೊದಲ ಡೋಸ್‌ ಹಾಗೂ 10,03,939 ಎರಡನೇ ಡೋಸ್‌ ಲಸಿಕೆ ವಿತರಣೆಯಾಗಿದೆ.

ಪ್ರತಿ ಶಾಲೆಗೂ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಎಲ್ಲ ಶಾಲೆ, ಕಾಲೇಜುಗಳಲ್ಲೂ ಲಸಿಕೆ ಅಭಿಯಾನ ನಡೆಯಲಿದೆ.

-ಡಾ.ಎಲ್‌. ನಾಗರಾಜ್‌ ನಾಯ್ಕ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.