ADVERTISEMENT

ವಾಲ್ಮೀಕಿ ನಿಗಮ ಹಗರಣ | ತನಿಖೆಯಿಂದ ಸತ್ಯಾಂಶ ಹೊರಬರಲಿದೆ: ಶಾಸಕ ಗೋಪಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 1 ಜೂನ್ 2024, 16:23 IST
Last Updated 1 ಜೂನ್ 2024, 16:23 IST
ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶನಿವಾರ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಿದರು
ಸಾಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶನಿವಾರ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತ ಯಾಚಿಸಿದರು   

ಸಾಗರ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಿದೆ. ತನಿಖೆಯಿಂದ ಸತ್ಯಾಂಶ ಹೊರಬರಲಿದ್ದು ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದರೂ ಚಿಂತೆ ಇಲ್ಲ ಎಂದರು.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಧರ್ಮದ ಆಧಾರದ ಮೇಲೆ ಅಪರಾಧಿಕ ಪ್ರಕರಣಗಳಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದು ನೋಡುವ ಕ್ರಮ ಸರಿಯಲ್ಲ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಧರ್ಮದ ಆಧಾರದ ಮೇಲೆ ಪ್ರಕರಣಗಳನ್ನು ದೊಡ್ಡದಾಗಿ ಮಾಡುವ ಸಂಸ್ಕೃತಿ ಬಿಜೆಪಿಯಲ್ಲಿದೆ. ತಪ್ಪು ಮಾಡಿದವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ಜಾರಿಗೆ ಬರಬೇಕು ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

ವಿಧಾನ ಪರಿಷತ್ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಗೆಲ್ಲುವುದು ಖಚಿತ ಎಂಬ ವಾತಾವರಣವಿದೆ. ಇಬ್ಬರೂ ಅಭ್ಯರ್ಥಿಗಳು ಮೇಲ್ಮನೆಯಲ್ಲಿ ಪದವೀಧರರ ಹಾಗೂ ಶಿಕ್ಷಕರ ಪರ ಧ್ವನಿ ಎತ್ತುವ ಸಾಮರ್ಥ್ಯ ಹೊಂದಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ನಗರ ಘಟಕದ ಅಧ್ಯಕ್ಷ ಐ.ಎನ್.ಸುರೇಶ್ ಬಾಬು, ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಕುಮಾರಿ, ಪ್ರಮುಖರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಉಷಾ ಎನ್. ಸೋಮಶೇಖರ್ ಲ್ಯಾವಿಗೆರೆ, ಮಹ್ಮದ್ ಖಾಸಿಂ, ಬಿ.ಎ.ಇಂದೂಧರ ಗೌಡ, ಸರಸ್ವತಿ ನಾಗರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.