ಶಿವಮೊಗ್ಗ: ‘ಮನುಷ್ಯರಾಗಿ ನಾವು ಸುತ್ತಲಿನ ಪರಿಸರದಲ್ಲಿ ಯಾವೆಲ್ಲಾ ಕರ್ತವ್ಯ ನಿಭಾಯಿಸಬೇಕು ಎಂಬುದನ್ನು ಮಕ್ಕಳಿಗೆ ಹೇಳಿಕೊಡಲು ಅವರಲ್ಲಿ ಸಾಮಾಜಿಕ ಪರಿಜ್ಞಾನ ಮೂಡಿಸಲು ಮುಂಬರುವ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ವಾರಕ್ಕೊಮ್ಮೆ ಪ್ರತ್ಯೇಕ ಮೌಲ್ಯ ಶಿಕ್ಷಣ ತರಗತಿ ನಡೆಸಲಾಗುವುದು’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.
ನಿರ್ಮಲ ತುಂಗಭದ್ರಾ ಅಭಿಯಾನದ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆಯ ಕಿಷ್ಕಿಂಧೆವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶನಿವಾರ ಮಾತನಾಡಿದರು.
‘ಈ ತರಗತಿಯಲ್ಲಿ ಒಂದರಿಂದ ಎಸ್‌ಎಸ್‌ಎಲ್‌ಸಿವರೆಗಿನ ವಿದ್ಯಾರ್ಥಿಗಳಿಗೆ ದೈನಂದಿನ ವಿದ್ಯಮಾನಗಳಿಗೆ ಸ್ಪಂದಿಸುವ ಬಗೆಯನ್ನು ಕಲಿಸಲಾಗುವುದು. ಸಂಚಾರ ನಿಯಮಗಳು, ಆರೋಗ್ಯದ ಸಂಗತಿ, ಪರಿಸರ ಸಂರಕ್ಷಣೆ, ಕೃಷಿ ಸೇರಿ ಸಾಮಾನ್ಯ ಜ್ಞಾನಕ್ಕೆ ಆದ್ಯತೆ ನೀಡಲಾಗುವುದು’ ಎಂದರು.
‘ವ್ಯವಸ್ಥೆಯಲ್ಲಿ ಬದುಕುವ ರೀತಿ, ಹಾಳಾಗಿರುವ ವ್ಯವಸ್ಥೆಯನ್ನು ಸರಿಪಡಿಸುವ ಕ್ರಮದ ಕುರಿತೂ ಹೇಳಿಕೊಡಲಾಗುವುದು. ಇದಕ್ಕೆ ಪಠ್ಯಕ್ರಮದ ಚೌಕಟ್ಟು ಹೇಗಿರಬೇಕು ಎಂಬುದರ ಬಗ್ಗೆ ತಜ್ಞರ ಸಮಿತಿ ಅಧ್ಯಯನ ನಡೆಸುತ್ತಿದೆ. ಶೀಘ್ರ ಅದು ಅಂತಿಮಗೊಳ್ಳಲಿದೆ. ಈ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಪರೀಕ್ಷೆ ಇರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.