ADVERTISEMENT

ಸೊರಬ | ಪುರದೂರು ಜನರಿಗೆ ವರವಾಗದ ವರದೆ!

ಪ್ರತಿವರ್ಷ ತಪ್ಪದ ಗ್ರಾಮಸ್ಥರ ಗೋಳು...

ರಾಘವೇಂದ್ರ ಟಿ.
Published 24 ಜುಲೈ 2024, 6:37 IST
Last Updated 24 ಜುಲೈ 2024, 6:37 IST
ಸೊರಬ ತಾಲ್ಲೂಕಿನ ಪುರದೂರು ಗ್ರಾಮಕ್ಕೆ ವರದಾ ನೀರು ನುಗ್ಗಿ ಮನೆಗಳು ಅಸ್ತವ್ಯಸ್ತವಾಗಿರುವುದು
ಸೊರಬ ತಾಲ್ಲೂಕಿನ ಪುರದೂರು ಗ್ರಾಮಕ್ಕೆ ವರದಾ ನೀರು ನುಗ್ಗಿ ಮನೆಗಳು ಅಸ್ತವ್ಯಸ್ತವಾಗಿರುವುದು   

ಸೊರಬ: ತಾಲ್ಲೂಕಿನಲ್ಲಿ ಹರಿದಿರುವ ವರದಾ ನದಿಯ ಪ್ರವಾಹದಿಂದ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಪುರದೂರು ಗ್ರಾಮ ಮುಳುಗಡೆ ದ್ವೀಪವಾಗಿದೆ.

ಗ್ರಾಮಕ್ಕೆ ನೀರು ನುಗ್ಗಿದ್ದರಿಂದ 5 ಕುಟುಂಬಗಳ 30 ಜನರನ್ನು ನ್ಯಾರ್ಶಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ತಾಲ್ಲೂಕು ಆಡಳಿತ ಸ್ಥಳಾಂತರ ಮಾಡಲು ಕ್ರಮ ಕೈಗೊಂಡಿತು. ಆದರೆ, ಕಾಳಜಿ ಕೇಂದ್ರದಲ್ಲಿ ಇರಲು ಬಯಸದ ಸಂತ್ರಸ್ತರು ಸಮೀಪದ ಚನ್ನಪಟ್ಟಣ ಗ್ರಾಮದ ತಮ್ಮ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದಾರೆ.

ಪ್ರತಿ ವರ್ಷವೂ ವರದಾ ನದಿ ಪ್ರವಾಹದಿಂದ ಮುಳುಗಡೆಯಾಗುವ ಪುರದೂರು ಗ್ರಾಮವನ್ನು ಗ್ರಾಮಸ್ಥರ ಕೋರಿಕೆ ಮೇರೆಗೆ ಸ್ಥಳಾಂತರಿಸಲು ಒಂದು ವರ್ಷದ ಹಿಂದೆಯೇ ತಾಲ್ಲೂಕು ಆಡಳಿತ ಗ್ರಾಮದ ಸರ್ವೆ ನಂ 46/2ರಲ್ಲಿ 103 ಕುಟುಂಬಗಳಿಗೆ 13 ಎಕರೆ ಜಮೀನು ಗುರುತಿಸಿ ಭೂಮಿ ಮಂಜೂರಾತಿ ಮಾಡಿದೆ. ಆದರೆ ಇದುವರೆಗೂ ಸ್ಥಳೀಯ ಗ್ರಾಮ ಪಂಚಾಯಿತಿ ಆಡಳಿತ ಗ್ರಾಮಸ್ಥರಿಗೆ ನಿವೇಶನ ಹಂಚಿಕೆ ಮಾಡಿ ಮನೆ ನಿರ್ಮಾಣ ಮಾಡಲು ಮುಂದಾಗಿಲ್ಲ.

ADVERTISEMENT

ಇದರಿಂದ ಪ್ರತಿವರ್ಷ ಪುರದೂರು ಗ್ರಾಮದ ಜನರು ನೆರೆ ಹಾವಳಿಗೆ ತುತ್ತಾಗುವುದು ನಿಂತಿಲ್ಲ. ಇದರಿಂದ ಮಳೆಗಾಲ ಬರುತ್ತಿದ್ದಂತೆಯೇ ಗ್ರಾಮಸ್ಥರು ಆತಂಕಕ್ಕೆ ಒಳಗಾಗುತ್ತಾರೆ.

‘ಪ್ರತಿ ವರ್ಷ ಪ್ರವಾಹ ಭೀತಿ ಎದುರಾಗುವ ಭಯದಲ್ಲಿ ಕಾಲ ಕಳೆಯುವ ಸ್ಥಿತಿ ಎದುರುಸುತ್ತಿದ್ದೇವೆ. ಪ್ರವಾಹ ಇಳಿದ ಮೇಲೆ ಗೋಡೆ, ನೆಲ ತೇವಗೊಂಡು ಹುಳು, ಹುಪ್ಪಟೆ, ಎರೆ ಹುಳು ಕಾಣಿಸಿಕೊಂಡು ಕೆಟ್ಟ ವಾಸನೆ ಬರುತ್ತದೆ. ಕಷ್ಟಪಟ್ಟು ಕಟ್ಟಿದ ಮನೆಯಲ್ಲಿ ನೆಮ್ಮದಿ ಇಲ್ಲ. ಇತ್ತ ಜೀವನಕ್ಕೆ ಆಸರೆಯಾಗಿದ್ದ ಭೂಮಿಯಲ್ಲಿ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮದ ಹಿರಿಯರಾದ ನಾರಾಯಣಪ್ಪ ಅಳಲು ತೋಡಿಕೊಂಡರು.

ಮಳೆಗಾಲದಲ್ಲಿ ತುಂಬಿ ಹರಿಯುವ ವರದೆ ತಾಲ್ಲೂಕಿನ ಚಂದ್ರಗುತ್ತಿ ಹಾಗೂ ಜಡೆ ಹೋಬಳಿ ವ್ಯಾಪ್ತಿಯ ಹತ್ತಾರು ಗ್ರಾಮಗಳ ಜನರ ಬದುಕಿಗೆ ವರವಾಗುವ ಬದಲು ಆಪೋಶನ ತೆಗೆದುಕೊಳ್ಳುತ್ತಿದೆ. ಚಂದ್ರಗುತ್ತಿ ಹೋಬಳಿಯ ಕಡಸೂರು, ಬಾಡದಬೈಲು, ಅಂದವಳ್ಳಿ, ಹೊಳೆಜೋಳದಗುಡ್ಡೆ ಹಾಗೂ ಜಡೆ ಹೋಬಳಿಯ ಲಕ್ಕವಳ್ಳಿಯ ರಾಜರಾಜೇಶ್ವರಿ ಜೈನ ಮಠ, ಸಮಾಧಾನ ಮಠ, ಬಂಕಸಾಣ, ತುಮರಿಕೊಪ್ಪ ಸೇರಿದಂತೆ ಹಲವು ಗ್ರಾಮಗಳ ನದಿ ಪಾತ್ರದ ಜಮೀನುಗಳು ಜಲಾವೃತಗೊಂಡು ತಿಂಗಳು ಕಳೆದರೂ ನೀರು ತಗ್ಗುವುದಿಲ್ಲ‌. ಇದರಿಂದ ತುಂಡು ಭೂಮಿಯಲ್ಲಿ ಬದುಕು ಕಟ್ಟಿಕೊಳ್ಳಲು ಬಯಸುವ ನೂರಾರು ಕುಟುಂಬಗಳು ಆರ್ಥಿಕವಾಗಿ ಪುನಶ್ಚೇತನಗೊಳ್ಳಲು ಸಾಧ್ಯವಾಗದೆ ಪ್ರತಿ ವರ್ಷ ನಿರೀಕ್ಷಿತ ಆದಾಯವಿಲ್ಲದೆ ಹೊಟ್ಟೆಪಾಡಿಗಾಗಿ ಕಾಫಿ ಸೀಮೆಗೆ ದುಡಿಯಲು ವಲಸೆ ಹೋಗುತ್ತವೆ.

‘ಪ್ರತಿ ವರ್ಷ ಪ್ರವಾಹದ ಗೋಳು ತಪ್ಪಿಲ್ಲ‌. ನೀರು ಸುತ್ತುವರಿದು ಸಂಬಂಧಿಕರ ಮನೆಗೂ ಹೋಗಲು ಸಾಧ್ಯವಾಗುತ್ತಿಲ್ಲ. ನಮ್ಮ ಗ್ರಾಮಕ್ಕೂ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು’ ಎಂಬುದು ಗ್ರಾಮಸ್ಥರ ಒತ್ತಾಯ.

ಗ್ರಾಮಸ್ಥರ ನಿರಂತರ ಹೋರಾಟದ ಫಲವಾಗಿ ಬದಲಿ ಸೂರು ಕಲ್ಪಿಸಲು 13 ಎಕರೆ ಜಾಗ ದೊರೆತಿದೆ‌. ರೈತ ಕುಟುಂಬಗಳಿಗೆ ಸಣ್ಣ ನಿವೇಶನ ಸಾಕಾಗುವುದಿಲ್ಲ‌. ಗ್ರಾಮದಲ್ಲಿರುವ 20 ಎಕರೆ ಸೇರಿಸಿಕೊಂಡು ಶಾಲೆ ಅಂಗನವಾಡಿ ರಂಗಮಂದಿರವನ್ನು ವ್ಯವಸ್ಥಿತವಾಗಿ ಕಲ್ಪಿಸಲು ಮುಂದಾಗಬೇಕು.
ಈರಪ್ಪಯ್ಯ, ಗ್ರಾ.ಪಂ. ಸದಸ್ಯ
ಇಡೀ ಗ್ರಾಮವನ್ನು ಸ್ಥಳಾಂತರಿಸಲು ಸೂಕ್ತ ಜಾಗ ಗುರುತಿಸಿದೆ. 123 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಸೂಕ್ತ ಕ್ರಮ ವಹಿಸಲು ಸೂಚಿಸಿದೆ.
ಮಂಜುಳಾ ಹೆಗಡಾಳ್, ತಹಶೀಲ್ದಾರ್
ಸೊರಬ ತಾಲ್ಲೂಕಿನ ವರದಾ ನದಿ ಪ್ರವಾಹದಿಂದ ಪುರದೂರು ಗ್ರಾಮದ ಜಮೀನು ಮುಳುಗಡೆ ಆಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.