ಸೊರಬ: ಮಲೆನಾಡಿನ ಶಕ್ತಿ ದೇವತೆ ರೇಣುಕಾಂಬಾ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶುಕ್ರವಾರ ದೇವಿಗೆ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು.
ಶ್ರಾವಣ ಮಾಸದ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ರೇಣುಕಾಂಬಾ ದೇವಿ ದರ್ಶನಕ್ಕೆ ತಾಲ್ಲೂಕು ಸೇರಿ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಶಿವಮೊಗ್ಗ, ರಾಯಚೂರು, ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ಭಕ್ತಿ ಸಮರ್ಪಿಸಿದರು.
ದೇವಸ್ಥಾನದ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ಪುನಸ್ಕಾರಗಳು ನೆರವೇರಿದವು.
ಭಕ್ತರು ದೇವಸ್ಥಾನದ ಆವರಣದಲ್ಲಿ ತುಲಾಭಾರ ಸೇವೆ, ಕಿವಿ ಚುಚ್ಚುವುದು, ಮುಡಿ ನೀಡುವುದು ಸೇರಿ ವಿವಿಧ ರೀತಿಯ ಹರಕೆ ಮತ್ತು ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಿದರು. ದೇಗುಲಕ್ಕೆ ಬಂದ ಮಹಿಳೆಯರಿಗೆ ವರಮಹಾಲಕ್ಷ್ಮಿ ವ್ರತಚಾರಣೆ ಅಂಗವಾಗಿ ಅರಿಶಿಣ, ಕುಂಕುಮ, ಹಸಿರು ಬಳೆ ನೀಡಿ ಉಡಿ ತುಂಬಲಾಯಿತು.
ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಧಾರ್ಮಿಕ ಕಾರ್ಯದಲ್ಲಿ ಸ್ಥಳೀಯ ಮಹಿಳೆಯರು ಹಾಗೂ ಭಕ್ತರು ಹಾಗೂ ಊರ ಗ್ರಾಮಸ್ಥರು ಸಹಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.