ಶಿವಮೊಗ್ಗ: ‘ಬೆಳಗಾವಿಯಲ್ಲಿ ಬಿಜೆಪಿಯ 12 ನಾಯಕರು ಸಭೆ ನಡೆಸಿ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಪಕ್ಷದ ಹೈಕಮಾಂಡ್ ಅವರನ್ನು ಕರೆದು ನೋವು ಆಲಿಸಲಿ’ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನು ಬಿಟ್ಟು ಈ ರೀತಿಯ ಸಭೆ ನಡೆಯುತ್ತಿವೆ. ಇದು ಹೀಗೆಯೇ ಮುಂದುವರಿದರೆ ಬಿಜೆಪಿ ಇಬ್ಬಾಗವಾಗುವ ಸಾಧ್ಯತೆ ಇದೆ’ ಎಂದು ಎಚ್ಚರಿಕೆ ನೀಡಿದರು.
‘ಬಿಜೆಪಿಯ ಕೇಂದ್ರದ ನಾಯಕರಿಗೆ ಬಿ.ಎಸ್.ಯಡಿಯೂರಪ್ಪ ಕುಟುಂಬದ ಮೇಲೆ ಯಾಕೆ ಇಷ್ಟು ಮೋಹವೋ ಅರ್ಥವಾಗುತ್ತಿಲ್ಲ. ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕ ಮಾಡಿರುವುದೇ ಪಕ್ಷದೊಳಗೆ ಇಷ್ಟೆಲ್ಲ ಅಶಾಂತಿಗೆ ಕಾರಣವಾಗಿದೆ. ಈ ಎಲ್ಲ ಅಸಮಾಧಾನಗಳಿಗೆ ಬಿ.ಎಸ್.ಯಡಿಯೂರಪ್ಪ ಅವರ ಕುಟುಂಬವೇ ಪ್ರಮುಖ ಕಾರಣ ಎಂದು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನೋವಿನಿಂದ ಹೇಳುತ್ತಿದ್ದಾರೆ’ ಎಂದು ಹೇಳಿದರು.
‘ನಮ್ಮ ಕಾಲದಲ್ಲಿ ಬಿಜೆಪಿಯಲ್ಲಿ ಸಾಮೂಹಿಕ ನಾಯಕತ್ವ ಇತ್ತು. ಈಗ ವಿಜಯೇಂದ್ರ ಅವರದ್ದು ಏಕಪಕ್ಷೀಯ ತೀರ್ಮಾನವಾಗಿದೆ. ಸ್ವಜನ ಪಕ್ಷಪಾತವೇ ಮುಖ್ಯವಾಗುತ್ತಿದೆ. ಹೊಂದಾಣಿಕೆ ರಾಜಕಾರಣ ಎದ್ದು ಕಾಣುತ್ತಿದೆ. ಇದು ಇಲ್ಲಿಗೇ ಮುಗಿಯಬೇಕು. ಇಲ್ಲದಿದ್ದರೆ ಬಿಜೆಪಿಯನ್ನು ಕಟ್ಟಿ ಬೆಳೆಸಿದ ನನ್ನಂತಹ ನಾಯಕರಿಗೆ ನೋವಾಗುತ್ತದೆ’ ಎಂದರು.
‘ಬಿಜೆಪಿ ಈಗ ಪ್ರತೀ ತಾಲ್ಲೂಕಿನಲ್ಲೂ ಎರಡು ಗುಂಪುಗಳಾಗಿವೆ. ಪ್ರತ್ಯೇಕ ಸಭೆ ನಡೆಸಿರುವವರು ಇವತ್ತು 12 ಜನರು ಇರಬಹುದು. ಹಾಗೆಂದು ಪಕ್ಷದ ವರಿಷ್ಟರು ನಿರ್ಲಕ್ಷ್ಯ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ ಕುಂಠಿತವಾಗುತ್ತಾ ಹೋಗಲಿದೆ’ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರಭಕ್ತರ ಬಳಗದ ಪ್ರಮುಖರಾದ ಶಂಕರ್‌ಗನ್ನಿ, ಚನ್ನಬಸಪ್ಪ, ಬಾಲು, ಶ್ರೀಕಾಂತ್, ಮಹಾಲಿಂಗಶಾಸ್ತ್ರಿ, ಚಿದಾನಂದಮೂರ್ತಿ, ಕುಬೇಂದ್ರಪ್ಪ, ಜಾಧವ್, ಶಾಂತರಾಜು ಇದ್ದರು.
ಪ್ರತಿಭಟನಾ ಮೆರವಣಿಗೆ ನಾಳೆ
ಎಲ್ಲಾ ಬಡವರಿಗೂ ಸೂರು ನೀಡಬೇಕು ಗೋವಿದಪುರ ಆಶ್ರಯ ಬಡಾವಣೆಯ ಮನೆಗಳನ್ನು ಪೂರ್ಣಗೊಳಿಸಿ ತಕ್ಷಣವೇ ಹಂಚಬೇಕು. ಪಾಲಿಕೆಗೆ ಶೀಘ್ರವೇ ಚುನಾವಣೆ ನಡೆಯಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಮುಂದಿಟ್ಟುಕೊಂಡು ಆ.13ರಂದು ಬೆಳಿಗ್ಗೆ 11ಕ್ಕೆ ದೈವಜ್ಞ ಕಲ್ಯಾಣ ಮಂದಿರದ ಆವರಣದಿಂದ ಮಹಾನಗರ ಪಾಲಿಕೆ ಆವರಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.