ಶಿವಮೊಗ್ಗ: ‘ಹಾಲುಮತ ಸಮಾಜದಲ್ಲಿ ಧರ್ಮವಿದೆ. ಜೀವ ಹೋದರೂ, ಅವರು ಸತ್ಯ ಬಿಡುವುದಿಲ್ಲ. ಇದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಹೇಳಿದರು.
ಇಲ್ಲಿನ ಕನಕನಗರದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಮಂಗಳವಾರ ನಡೆದ ಬೀರಪ್ಪ ದೇವರ ಭಂಡಾರ ಜಾತ್ರೆಯಲ್ಲಿ ಸಾನ್ನಿಧ್ಯ ವಹಿಸಿ ಆರ್ಶೀವಚನ ನೀಡಿದರು.
‘ಕನಕದಾಸರ ರಕ್ತದಲ್ಲಿ ಮೋಸವಿರಲಿಲ್ಲ. ಮೋಸವಿದ್ದಿದ್ದರೆ ಶ್ರೀಕೃಷ್ಣ ತಿರುಗುತ್ತಿರಲಿಲ್ಲ. ಕನಕದಾಸರು ಒಂದು ಜಾತಿಗೆ ಸೇರಿಲ್ಲ. ಪ್ರತಿಯೊಬ್ಬರೂ ತಕ್ಕಮಟ್ಟಿಗಾದರೂ ಕನಕನಾಗಿ ಬಾಳಬೇಕು’ ಎಂದರು.
‘ಹಾಲುಮತ ಸಮುದಾಯದವರು ಶಾಲಾ–ಕಾಲೇಜು ಮತ್ತು ಆಸ್ಪತ್ರೆಗಳನ್ನು ನಿರ್ಮಿಸಿ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕು. ನಿಮ್ಮವರನ್ನು ರಾಜಕೀಯವಾಗಿ ಬೆಳೆಸಬೇಕು. ನಿಮ್ಮ ಪರವಾಗಿ ವಿಧಾನಸೌಧದಲ್ಲಿ ಧ್ವನಿ ಎತ್ತುವವರ ಅಗತ್ಯವಿದೆ’ ಎಂದು ತಿಳಿಸಿದರು.
‘ಜಗತ್ತಿನಲ್ಲಿಯೇ ಅತ್ಯಂತ ಪವಿತ್ರವಾದ ವಸ್ತು ಕಂಬಳಿಯಾಗಿದೆ. ಶಿವನಿಗೆ ಕಂಬಳಿ ಪ್ರಿಯವಾದ ವಸ್ತುವಾಗಿದೆ. ಕಂಬಳಿ ಮುಟ್ಟಿರೆ ಮನಸ್ಸು ಶುದ್ಧವಾಗುತ್ತದೆ. ಮನಸ್ಸಿನೊಳಗಿನ ಭಂಡತನವನ್ನು ಹೋಗಲಾಡಿಸಬೇಕು. ಭಂಡಾರ ಹಚ್ಚಿಕೊಳ್ಳುವುದರಿಂದ ಮನಸ್ಸು ಶುದ್ಧವಾಗುತ್ತದೆ. ಭಂಡಾರ (ಅರಿಶಿನ ಪುಡಿ)ಕ್ಕೆ ವಿಷವನ್ನು ಎಳೆಯುವ ಶಕ್ತಿಯಿದೆ. ಮಂಗಲ ದ್ರವವಾಗಿರುವ ಇದು ಅಮಂಗಲ ತೆಗೆಯುತ್ತದೆ’ ಎಂದರು.
‘ನಾನು ಕೊಟ್ಟ ಕಂಬಳಿ ಪಡೆದುಕೊಂಡವರು ರಾಜ್ಯದಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದಾರೆ. ಪಟ್ಟಾಭಿಷೇಕಕ್ಕೆ ಇರಲಿ ಎಂದು ಅವರಿಗೆ ನಾನು ಕಂಬಳಿ ಕೊಟ್ಟಿದ್ದೇನೆ’ ಎಂದು ಹೇಳಿದರು.
‘ಭಂಡಾರದಲ್ಲಿ ಜ್ಞಾನ, ಶಕ್ತಿ, ಆರೋಗ್ಯ ಅಡಗಿದೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಮಹಿಳೆಯರ ಮೇಲಿದೆ. ಅವರು ನಮ್ಮ ಸಂಸ್ಕೃತಿಯ ವಾರಸುದಾರರು’ ಎಂದು ಸಾನ್ನಿಧ್ಯ ವಹಿಸಿದ್ದ ತಿಂಥಿಣಿಯ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ಹೇಳಿದರು.
‘ಹೆಣ್ಣು ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಅಂತರ್ಜಾತಿ ವಿವಾಹ ಆಗುತ್ತಿರುವುದು ಅಪಾಯಕಾರಿಯಾಗಿದೆ. ಬರೀ ಆಸ್ತಿ ಮಾಡುವುದಲ್ಲ, ಮಕ್ಕಳಲ್ಲಿ ಸಂಸ್ಕಾರ ಮೂಡಿಸುವುದು ಅಗತ್ಯವಿದೆ’ ಎಂದರು.
‘ಕೆಲವರು ಹಣೆಗೆ ಭಂಡಾರ ಹಚ್ಚುವುದಿಲ್ಲ. ಪವಿತ್ರವಾದ ಭಂಡಾರ ಹಚ್ಚಿಕೊಳ್ಳುವುದು ನಮ್ಮೆಲ್ಲರ ಧರ್ಮವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಕಂಬಳಿ ಇರಬೇಕು. ಇದು ಸಮಾಜದ ಹೆಮ್ಮೆಯ ಸಂಕೇತ’ ಎಂದು ಹೇಳಿದರು.
‘ಭಂಡಾರ ಹಚ್ಚಿಕೊಂಡವರ ಸಮಸ್ಯೆ ಪರಿಹಾರವಾಗಿ ಅವರು ಪವಿತ್ರವಾಗುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಭಂಡಾರ ಜಾತ್ರೆ ಜೋರಾಗಿ ನಡೆಯುತ್ತಿದೆ. ನಮಲ್ಲಿಯೂ ಭಂಡಾರ ಜಾತ್ರೆ ಅದ್ದೂರಿಯಾಗಿ ನಡೆದು ಶಿವಮೊಗ್ಗ ಜಿಲ್ಲೆ ಪವಿತ್ರವಾಗಿದೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ಮತ್ತು ಸಮಾಜದ ಮುಖಂಡ ಎಂ. ಶ್ರೀಕಾಂತ್ ಮಾತನಾಡಿದರು.
ಕೆ.ಇ. ಕಾಂತೇಶ್, ನವುಲೆ ಈಶ್ವರಪ್ಪ, ರಂಗನಾಥ, ಮಾಲತೇಶ್, ಹೊನ್ನಪ್ಪ, ಬಾಲಪ್ಪ, ವಿಜಯಣ್ಣ, ಡಾ. ಶರತ್ ಮರಿಯಪ್ಪ, ವಿಜಯಕುಮಾರ್, ಮಂಜಣ್ಣ, ಮೋಹನ್, ವಾಸು, ಪ್ರೇಮಾ ಚಂದ್ರಶೇಖರ್, ಹಾಲಪ್ಪ ಇದ್ದರು.
ತಿಂಥಿಣಿಯ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ಅವರನ್ನು ಸಾರೋಟಿನಲ್ಲಿ ಅದ್ಧೂರಿಯಾಗಿ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು. ನೂರಾರು ಸಂಖ್ಯೆಯಲ್ಲಿ ಪೂರ್ಣಕುಂಭ ಹೊತ್ತುಕೊಂಡು ಮಹಿಳೆಯರು ಭಾಗವಹಿಸಿದ್ದರು. ಜೆಸಿಬಿ ಬಳಸಿ ಸ್ವಾಮೀಜಿಗೆ ಹೂಮಳೆ ಸುರಿಸಲಾಯಿತು. ಮೆರವಣಿಗೆಯಲ್ಲಿ ಚೌಡಿಕೆ ಪದಗಳನ್ನು ಹಾಡಲಾಯಿತು. ಭಕ್ತರು ಜಯಘೋಷಣೆ ಕೂಗಿದರು. ಇಲ್ಲಿನ ವಿನೋಬನಗರದ ಶಿವಾಲಯ ದೇವಸ್ಥಾನದಿಂದ ಕನಕನಗರದಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.