ADVERTISEMENT

ಆಗಸ್ಟ್‌ 10ರಿಂದ ಭದ್ರಾವತಿಯ ವಿಐಎಸ್‌ಎಲ್ ಬಾರ್‌ಮಿಲ್ ಪುನರಾರಂಭ

ಕಾರ್ಮಿಕ ಸಂಘಟನೆಯ ಸಂತಸ; ಶೀಘ್ರ ಪ್ರಾಥಮಿಕ ಗಿರಣಿ ಕೂಡ ಕಾರ್ಯಾರಂಭ?

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 13:11 IST
Last Updated 1 ಆಗಸ್ಟ್ 2023, 13:11 IST
ವಿಐಎಸ್‌ಎಲ್‌
ವಿಐಎಸ್‌ಎಲ್‌   

ಶಿವಮೊಗ್ಗ: ಭಾರತೀಯ ಉಕ್ಕು ಪ್ರಾಧಿಕಾರದ (Steel Authority of India) ನಿರ್ಧಾರದಿಂದಾಗಿ ಕಳೆದ ಜನವರಿ 16ರಿಂದ ಸ್ಥಗಿತಗೊಂಡಿದ್ದ ಭದ್ರಾವತಿಯ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಬಾರ್‌ ಮಿಲ್ ಆಗಸ್ಟ್ 10ರಿಂದ ಮತ್ತೆ ಉತ್ಪಾದನೆ ಆರಂಭಿಸಲಿದೆ.

‘ಉತ್ಪಾದನೆ ಆರಂಭಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೇಲ್‌ ಆಡಳಿತ ಮಂಡಳಿಯು ವಿಐಎಸ್‌ಎಲ್‌ಗೆ ಸೂಚಿಸಿದೆ. ಈ ಬಗ್ಗೆ ಕಾರ್ಖಾನೆಯ ಸೂಚನಾ ಫಲಕದಲ್ಲಿ ಪತ್ರ ಕೂಡ ಲಗತ್ತಿಸಲಾಗಿದೆ’ ಎಂದು ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾರ್ ಮಿಲ್‌ನಲ್ಲಿ ಮತ್ತೆ ಉತ್ಪಾದನೆ ಆರಂಭಿಸಲು ನೆರವಾಗುವುದಾಗಿ ಸಂಸದ ಬಿ.ವೈ.ರಾಘವೇಂದ್ರ ನಮಗೆ ಮಾತು ಕೊಟ್ಟಿದ್ದರು. ಅದನ್ನು ಉಳಿಸಿಕೊಂಡಿದ್ದಾರೆ. ಭಾರತೀಯ ಉಕ್ಕು ಪ್ರಾಧಿಕಾರದ ಕಾರ್ಪೊರೇಟ್ ಕಚೇರಿ ಅಧಿಕಾರಿಗಳೊಂದಿಗೆ ಮಾತನಾಡಿ ಕಚ್ಚಾವಸ್ತು ಹಾಗೂ ಅಗತ್ಯ ಅನುದಾನ ಕೊಡಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಕಾರ್ಖಾನೆಯು ಸಂಪೂರ್ಣವಾಗಿ ಮುಚ್ಚಿ ಹೋಗುತ್ತದೆ ಎಂದು ಹೇಳಲಾಗುತ್ತಿತ್ತು. ಇದರ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಕಾರ್ಖಾನೆಯನ್ನು ಉಳಿಸುವ ನಿರ್ಧಾರ ಕೈಗೊಳ್ಳುವವರೆಗೂ ಇದನ್ನು ಮುಂದುವರೆಸುತ್ತೇವೆ’ ಎಂದರು. ಕಾರ್ಖಾನೆ ಮುಚ್ಚದಂತೆ ಕಾರ್ಮಿಕ ಸಂಘಟನೆ ಭದ್ರಾವತಿಯಲ್ಲಿ ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ 194ನೇ ದಿನಕ್ಕೆ ಕಾಲಿಟ್ಟಿದೆ.

‘ಬಾರ್‌ ಮಿಲ್ ಮುಚ್ಚಿರಲಿಲ್ಲ. ಹೀಗಾಗಿ ಆರಂಭ, ಪುನರಾರಂಭ ಎಂಬುದೇನೂ ಇಲ್ಲ. ಕಚ್ಚಾವಸ್ತುವಿನ ಕೊರತೆಯಿಂದಾಗಿ ಕಾರ್ಖಾನೆಯ ಒಂದು ವಿಭಾಗ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಈಗ ಪೂರೈಕೆ ಆಗಿರುವುದರಿಂದ ಮತ್ತೆ ಚಾಲನೆಗೊಳ್ಳುತ್ತಿದೆ. ತಪ್ಪು ಭಾವನೆ ಬೇಡ. ಅದೊಂದು ಪ್ರಕ್ರಿಯೆಯಷ್ಟೇ’ ಎಂದು ವಿಐಎಸ್‌ಎಲ್ ಕಾರ್ಖಾನೆಯ ಸಾರ್ವಜನಿಕ ಸಂ‍ಪರ್ಕಾಧಿಕಾರಿ ಎಲ್‌.ಪ್ರವೀಣ್‌ಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಶೀಘ್ರ ಪ್ರಾಥಮಿಕ ಗಿರಣಿ ಪುನರಾರಂಭ

‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸ್ಪಷ್ಟ ನಿರ್ದೇಶನದೊಂದಿಗೆ ಸೇಲ್‌ ಆಡಳಿತ ಮಂಡಳಿಯು ವಿಐಎಸ್ಎಲ್‌ನಲ್ಲಿ ಉತ್ಪಾದನಾ ಚಟುವಟಿಕೆ ಪುನರಾರಂಭಿಸಲು ಅಂತಿಮವಾಗಿ ಒಪ್ಪಿಕೊಂಡಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಗಿರಣಿ ಪುನರಾರಂಭವಾಗಲಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಬಿಲಾಯ್‌ನಿಂದ ಕಚ್ಚಾವಸ್ತು ಬರಲಿದೆ. 15ರಿಂದ 20 ದಿನಗಳಲ್ಲಿ ಪ್ರಾಥಮಿಕ ಗಿರಣಿ ಅರಂಭವಾಗಲಿದೆ. ಈ ನಿರ್ಧಾರವು ವಿಐಎಸ್ಎಲ್ ಅನ್ನು ನಂಬಿಕೊಂಡಿರುವ ನೌಕರರಿಗೆ ಮತ್ತು ಭದ್ರಾವತಿಯ ನಾಗರಿಕರ ಪಾಲಿಗೆ ಮಹತ್ವದ್ದು ಎಂಬುದಾಗಿ ಭಾವಿಸಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.