ಶಿವಮೊಗ್ಗ: ದೇಶದಲ್ಲಿ ಉಕ್ಕು ಉದ್ಯಮದ ವಿಸ್ತರಣೆಗೆ ಈ ವರ್ಷ ಭಾರತೀಯ ಉಕ್ಕು ಪ್ರಾಧಿಕಾರ (SAIL) ₹1 ಲಕ್ಷ ಕೋಟಿ ಹೂಡಿಕೆಗೆ ಮುಂದಾಗಿದೆ. ಜೊತೆಗೆ ಕರ್ನಾಟಕದವರೇ ಆದ ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಉಕ್ಕು ಸಚಿವಾಲಯದ ಹೊಣೆ ಹೊತ್ತಿದ್ದಾರೆ. ಇದು ಭದ್ರಾವತಿಯ ವಿಶ್ವೇಶರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್‌ಎಲ್) ನೌಕರರಲ್ಲಿ ಹೊಸ ಉತ್ಸಾಹ ತುಂಬಿದೆ.
ದೇಶದಲ್ಲಿ ಉಕ್ಕು ಉತ್ಪಾದನೆಯ ಗುರಿಯನ್ನು ವಾರ್ಷಿಕ ₹ 15 ದಶಲಕ್ಷ ಟನ್‌ಗೆ ಹೆಚ್ಚಿಸುವ ಜೊತೆಗೆ ಹಸಿರು ಉಕ್ಕು (ಪರಿಸರ ಸ್ನೇಹಿ) ಉತ್ಪಾದನೆಗೆ ಒತ್ತು ನೀಡಲು ₹ 1 ಲಕ್ಷ ಕೋಟಿ ಹೂಡಿಕೆಗೆ ಭಾರತೀಯ ಉಕ್ಕು ಪ್ರಾಧಿಕಾರ ಕಳೆದ ಮೇ ತಿಂಗಳಲ್ಲಿ ಕೇಂದ್ರದಿಂದ ಮಂಜೂರಾತಿ ಪಡೆದಿದೆ. ಇದರಡಿ ಹಾಲಿ ಇರುವ ಕಾರ್ಖಾನೆಗಳ ಉತ್ಪಾದನಾ ಸಾಮರ್ಥ್ಯ ಹೆಚ್ಚಳ, ಹೊಸ ತಾಂತ್ರಿಕತೆ ಅಳವಡಿಕೆ ಹಾಗೂ ವಿಸ್ತರಣೆಗೆ ಅವಕಾಶ ಇದೆ.
‘ಸೇಯ್ಲ್‌ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಹೂಡಿಕೆ ಆಗುತ್ತಿದೆ. ಉಕ್ಕು ಉದ್ಯಮದಲ್ಲಿನ ಈ ರೂಪಾಂತರ ಭದ್ರಾವತಿಯ ವಿಐಎಸ್‌ಎಲ್‌ಗೆ ಜೀವ ತುಂಬಲು ನೆರವಾಗಲಿದೆ’ ಎಂಬುದು ಅಲ್ಲಿನ ಕಾರ್ಮಿಕ ಮುಖಂಡರ ಅಭಿಮತ.
ಎಚ್‌ಡಿಕೆ ವಾಗ್ದಾನ:
ಕಳೆದ ವಿಧಾನಸಭೆ ಚುನಾವಣೆಗೆ ಮುನ್ನ ಎಚ್.ಡಿ.ಕುಮಾರಸ್ವಾಮಿ ಭದ್ರಾವತಿಗೆ ಬಂದಿದ್ದರು. ಯಾವುದೇ ಕಾರಣಕ್ಕೂ ವಿಐಎಸ್‌ಎಲ್ ಮುಚ್ಚಲು ಅವಕಾಶ ಕೊಡುವುದಿಲ್ಲ ಎಂದು ಆಗ ಕಾರ್ಮಿಕರಿಗೆ ವಾಗ್ದಾನ ನೀಡಿದ್ದರು. ಲೋಕಸಭಾ ಚುನಾವಣೆ ಪ್ರಚಾರಕ್ಕೆ ಬಂದಾಗಲೂ ಅದನ್ನೇ ಪುನರುಚ್ಚರಿಸಿದ್ದರು. ಈಗ ವಿಐಎಸ್‌ಎಲ್‌ನ ಮಾತೃಸಂಸ್ಥೆ ಆದ ಭಾರತೀಯ ಉಕ್ಕು ಪ್ರಾಧಿಕಾರ, ಎಚ್.ಡಿ. ಕುಮಾರಸ್ವಾಮಿ ಅವರ ಸಚಿವಾಲಯದ ಅಧೀನದಲ್ಲಿಯೇ ಬರುತ್ತದೆ. ಹೀಗಾಗಿ ಖಂಡಿತವಾಗಿಯೂ ಅವರು ಮಾತು ಉಳಿಸಿಕೊಳ್ಳಲಿದ್ದಾರೆ ಎಂಬುದು ಕಾರ್ಮಿಕರ ನಿರೀಕ್ಷೆ.
ಕೇಂದ್ರದ ಉಕ್ಕು ಸಚಿವಾಲಯ ದೇಶದಲ್ಲಿ ನಷ್ಟದಲ್ಲಿರುವ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಗಳನ್ನು ಶಾಶ್ವತವಾಗಿ ಮುಚ್ಚುವ ನಿರ್ಧಾರ ಕೈಗೊಂಡಿದೆ. ಅದಕ್ಕೆ ಪೂರಕವಾಗಿ ಭದ್ರಾವತಿಯ ವಿಐಎಸ್‌ಎಲ್ ಕಾರ್ಖಾನೆಯನ್ನು ಹಂತಹಂತವಾಗಿ ಮುಚ್ಚುವ ನಿರ್ಧಾರ ಕೈಗೊಳ್ಳಲಾಗಿದೆ. ಆ ಬಗ್ಗೆ ಸೇಯ್ಲ್ ಅಧಿಕೃತ ಆದೇಶವನ್ನೂ ಹೊರಡಿಸಿದೆ. ಆ ಹಾದಿಯಲ್ಲಿಯೇ ವಿಐಎಸ್‌ಎಲ್‌ನಲ್ಲಿ ಉತ್ಪಾದನೆ ಸ್ಥಗಿತಗೊಳಿಸಲು ಕಳೆದ ವರ್ಷ ಸೇಯ್ಲ್ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿತ್ತು. ಆಗಿನಿಂದಲೂ ಕಾರ್ಖಾನೆಯ ಕಾರ್ಮಿಕರು ನಿರಂತರವಾಗಿ ಹೋರಾಟ ಕೈಗೆತ್ತಿಕೊಂಡಿದ್ದಾರೆ.
ಇದು ಸಂಕ್ರಮಣ ಕಾಲ:
ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಕೇಂದ್ರದಲ್ಲಿ ಕರ್ನಾಟಕದವರೊಬ್ಬರು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಹೊಣೆ ಹೊತ್ತಿದ್ದಾರೆ. ಮುಂದಿನ 100 ವರ್ಷಗಳ ಅವಧಿಗೆ ವಿಐಎಸ್‌ಎಲ್ ಭವಿಷ್ಯ ನಿರ್ಧರಿಸಲು ಇದು ಸಂಕ್ರಮಣ ಕಾಲವಾಗಿದೆ ಎಂದು ಕಾರ್ಖಾನೆಯ ಗುತ್ತಿಗೆ ಕಾರ್ಮಿಕರ ಸಂಘದ ಮುಖಂಡ ಅಮೃತ್ ಹೇಳುತ್ತಾರೆ.
‘90ರ ದಶಕದಲ್ಲಿ ಎಚ್.ಡಿ. ದೇವೇಗೌಡ ಅವರು ವಿಐಎಸ್‌ಎಲ್ ಕಾರ್ಖಾನೆಯನ್ನು ಸೇಯ್ಲ್ ತೆಕ್ಕೆಗೆ ವಹಿಸಿ ಅದು ಆಗಲೇ ಮುಚ್ಚುವುದನ್ನು ತಡೆದಿದ್ದರು. ಕಾರ್ಖಾನೆಯನ್ನು ಶಾಶ್ವತವಾಗಿ ಉಳಿಸುವ ಅವಕಾಶ ಈಗ ಅವರ ಪುತ್ರನಿಗೆ ಒದಗಿಬಂದಿದೆ. ಭದ್ರಾವತಿಯ ವೈಭವದ ದಿನಗಳು ಮರಳಬಹುದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
‘ಮೈಸೂರಿನಲ್ಲಿ ಯದುವೀರ ಅವರು ಗೆಲುವು ಸಾಧಿಸಿದ್ದಾರೆ. ಕಾರ್ಖಾನೆ ಅವರ ಪೂರ್ವಜರ ಕೊಡುಗೆ. ಜೊತೆಗೆ ಸ್ಥಳೀಯ ಸಂಸದರಾದ ಬಿ.ವೈ.ರಾಘವೇಂದ್ರ ಕೂಡ ಕಾರ್ಖಾನೆ ಉಳಿಸಲು ನಮ್ಮೊಂದಿಗೆ ಕೈ ಜೋಡಿಸಲಿದ್ದಾರೆ’ ಎಂದು ಅವರು ಹೇಳುತ್ತಾರೆ.
ಎಚ್‌ಡಿಕೆ ಭೇಟಿ; ಬಿವೈಆರ್‌ಗೆ ಮನವಿ ಸಲ್ಲಿಕೆ
ಭದ್ರಾವತಿಯ ವಿಐಎಸ್‌ಎಲ್ ಉಳಿಸುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಕೆಗೆ ಸಮಯಾವಕಾಶ ಕೊಡಿಸುವಂತೆ ಕಾರ್ಖಾನೆಯ ಕಾರ್ಮಿಕ ಮುಖಂಡರು ಮಂಗಳವಾರ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಶಿವಮೊಗ್ಗದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
‘ವಿಐಎಸ್‌ಎಲ್ ಕಾರ್ಖಾನೆ ಉಳಿಸುವ ವಿಚಾರದಲ್ಲಿ ಇಲ್ಲಿಯವರೆಗೂ ಬದ್ಧತೆಯಿಂದ ಕೆಲಸ ಮಾಡಿದ್ದೇನೆ. ಅದನ್ನು ಈಗಲೂ ಮುಂದುವರೆಸುವೆ. ಎಚ್.ಡಿ. ಕುಮಾರಸ್ವಾಮಿ ಅವರ ಭೇಟಿಗೆ ಸಮಾಯಾವಕಾಶ ಪಡೆಯುವೆ. ಎಲ್ಲರೂ ದೆಹಲಿಗೆ ತೆರಳಿ ಮನವಿ ಸಲ್ಲಿಸೋಣ. ಭದ್ರಾವತಿಗೂ ಅವರನ್ನು ಆಹ್ವಾನಿಸಿ ಕಾರ್ಖಾನೆಯ ಕಾಯಕಲ್ಪಕ್ಕೆ ಕೇಂದ್ರದಿಂದ ನೆರವು ಪಡೆಯೋಣ’ ಎಂದು ಬಿ.ವೈ.ರಾಘವೇಂದ್ರ ಈ ಸಂದರ್ಭ ಭರವಸೆ ನೀಡಿದರು.
ಭದ್ರಾವತಿಯ ಕಾರ್ಮಿಕರ ಹೋರಾಟದ ವೇದಿಕೆಗೆ ಬಂದು ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದರು. ಈಗ ಅವರಿಗೆ ಹೆಚ್ಚಿನ ರಾಜಕೀಯ ಶಕ್ತಿ ದೊರೆತಿದೆ. ಇದು ನಮ್ಮಲ್ಲಿ ವಿಐಎಸ್ಎಲ್ ಪುನಶ್ಚೇತನದ ವಿಶ್ವಾಸ ಮೂಡಿಸಿದೆ.ಸುರೇಶ್, ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ
ಶಾಶ್ವತವಾಗಿ ಮುಚ್ಚುವ ನಿರ್ಧಾರದಿಂದ ಮೊದಲು ವಿಐಎಸ್‌ಎಲ್ ಕಾರ್ಖಾನೆಯನ್ನು ಹೊರತರಬೇಕಿದೆ. ಎಚ್.ಡಿ.ಕುಮಾರಸ್ವಾಮಿ ಅವರು ಈ ದೊಡ್ಡ ಸವಾಲನ್ನು ನಿಭಾಯಿಸುವ ವಿಶ್ವಾಸವಿದೆಅಮೃತ್, ಗುತ್ತಿಗೆ ಕಾರ್ಮಿಕರ ಸಂಘದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.