ADVERTISEMENT

ಮೆಕಾಲೆ ಮನಃಸ್ಥಿತಿ ಸರಿಪಡಿಸುವ ಕೆಲಸವಾಗುತ್ತಿದೆ: ವಿವೇಕ್ ಸುಬ್ಬಾರೆಡ್ಡಿ

ವಿಚಾರಸಂಕಿರಣದಲ್ಲಿ ಬೆಂಗಳೂರು ವಕೀಲರ ಸಂಘದ ವಿವೇಕ್ ಸುಬ್ಬಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2022, 5:38 IST
Last Updated 12 ಜೂನ್ 2022, 5:38 IST
ಶಿವಮೊಗ್ಗದಲ್ಲಿ ಶನಿವಾರ ರಾಷ್ಟ್ರೋತ್ಥಾನ ಬಳಗದಿಂದ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಪ್ರೊ.ಎಸ್.ಎ.ಬಾರಿ, ಬಳಗದ ಶಿವಮೊಗ್ಗ ವಿಭಾಗದ ಅಧ್ಯಕ್ಷ ಡಾ.ಸುಧೀಂದ್ರ ಇದ್ದಾರೆ.
ಶಿವಮೊಗ್ಗದಲ್ಲಿ ಶನಿವಾರ ರಾಷ್ಟ್ರೋತ್ಥಾನ ಬಳಗದಿಂದ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಪ್ರೊ.ಎಸ್.ಎ.ಬಾರಿ, ಬಳಗದ ಶಿವಮೊಗ್ಗ ವಿಭಾಗದ ಅಧ್ಯಕ್ಷ ಡಾ.ಸುಧೀಂದ್ರ ಇದ್ದಾರೆ.   

ಶಿವಮೊಗ್ಗ: ‘ಮೆಕಾಲೆ ಮನಃಸ್ಥಿತಿಯ ಪ್ರಭಾವದಿಂದ ಬರಗೂರು ರಾಮಚಂದ್ರಪ್ಪ ಸಮಿತಿಯ ಅವಧಿಯಲ್ಲಿ ದೇಶದ ಯೋಧರು, ಪ್ರಸಿದ್ಧ ಕವನಗಳು, ನಾಡಗೀತೆಗಳು, ನಾಡ ಸಂಸ್ಕೃತಿ ತಿರುಚುವ ಪೂರ್ವಯೋಜಿತ ಪ್ರಯತ್ನ ನಡೆದಿತ್ತು. ಅದನ್ನು ಸರಿಪಡಿಸುವ ಕೆಲಸವನ್ನು ಈಗ ಮಾಡಲಾಗುತ್ತಿದೆ’ ಎಂದು ಬೆಂಗಳೂರು ನಗರ ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೇಳಿದರು.

ರಾಷ್ಟ್ರೋತ್ಥಾನ ಬಳಗದಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಪಠ್ಯಪುಸ್ತಕ ಪರಿಷ್ಕರಣೆ ಸತ್ಯ–ಮಿಥ್ಯ ವಿಚಾರ ಸಂಕಿರಣ’ದಲ್ಲಿ ಅವರು ಮಾತನಾಡಿದರು.

‘ಏನೇನು ಭಾರತೀಯತೆ ಇಲ್ಲವೋ ಅವೆಲ್ಲವನ್ನೂ ಪಠ್ಯಪುಸ್ತಕಗಳಲ್ಲಿ ಸಾರುವ ವಿಕೃತಿಯ ಪರಿಪಾಟಕ್ಕೆ ಮೆಕಾಲೆ ಮೊದಲು ನಾಂದಿ ಹಾಡಿದ್ದನು. ಅದನ್ನು ನೆಹರೂ ಮುಂದುರಿಸಿದ್ದರು. ಅದೇ ಮಾನಸಿಕತೆ ಈಗಲೂ ಎಡೆಯಿಲ್ಲದೇ ಮುಂದುವರಿದಿದೆ. ಒಂದೇ ಕುಟುಂಬದ ವೈಭವೀರಣಕ್ಕಾಗಿ ನಮ್ಮ ಇತಿಹಾಸ, ವೈಭವ ತ್ಯಾಗ ಮಾಡಿದ್ದೇವೆ’ ಎಂದರು.

ADVERTISEMENT

‘ಶಾಲಾ ಪಠ್ಯಕ್ರಮದಲ್ಲಿ ಮೆಕಾಲೆ, ನೆಹರೂ ಮನಸ್ಥಿತಿಯನ್ನು ಆಚೆ ಹಾಕಲು ನಾವು ಪ್ರಯತ್ನ ಪಡಬೇಕು. ಅದಕ್ಕೆ ಸರ್ಕಾರ ಮುಂದೆ ಬಂದಿದೆ. ಈ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇಟ್ಟುಕೊಂಡಿದೆ. ಆ ಕಲ್ಪನೆಯಲ್ಲೇ ನಾವು ಈ ವಿಷಯ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದೇವೆ. ಎಲ್ಲ ಸಿದ್ಧಾಂತಗಳನ್ನು ಬಿಟ್ಟು ಸತ್ಯಾಸತ್ಯತೆಯ ಅನ್ವೇಷಣೆ ಮಾಡಿ ಮಕ್ಕಳಿಗೆ ಸತ್ಯ ತಿಳಿಸಬೇಕಿತ್ತು. ಅದನ್ನು ಮಾಡದ ವಿಕೃತ ಅಜೆಂಡಾವನ್ನು ತಡೆಗಟ್ಟಬೇಕಿದೆ’ ಎಂದರು.

‘ಬರಗೂರು ರಾಮಚಂದ್ರಪ್ಪ ಸಮಿತಿಯ ಪಠ್ಯಕ್ರಮದಲ್ಲಿ ಟಿಪ್ಪು ಒಬ್ಬನೇ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ ಎಂದು ಹಾಕಿದ್ದರು. ಇತಿಹಾಸದ ಈ ವಕ್ರತೆ ಸರಿಪಡಿಸಿ ರೋಹಿತ್‌ ಚಕ್ರತೀರ್ಥ ಸಮಿತಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಮದಕರಿ ನಾಯಕರ ಬಗ್ಗೆಯೂ ಸೇರಿಸಿದ್ದಾರೆ. ಹಿಂದಿನ ಸಮಿತಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಕ್ಕೆ ಮಾತ್ರ ಅವಕಾಶ ಕೊಟ್ಟು ಜೈನ, ಬೌದ್ಧ ಧರ್ಮಕ್ಕೆ ಜಾಗವನ್ನೇ ಕೊಟ್ಟಿರಲಿಲ್ಲ. ಈಗ ಅದನ್ನು ಸರಿಪಡಿಸಿದ್ದೇವೆ’ ಎಂದರು.

ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಪ್ರೊ.ಎಸ್.ಎ.ಬಾರಿ, ‘ಸಾಮಾನ್ಯವಾಗಿ ಎಲ್ಲಿ ಬದಲಾವಣೆ ಇರುತ್ತದೆಯೋ ಅಲ್ಲಿ ಸಂಘರ್ಷ ಇರಲಿದೆ. ಜಗತ್ತಿನ ಎಲ್ಲ ಸಮಾಜಗಳಲ್ಲೂ ಅದು ಕಾಣಸಿಗುತ್ತದೆ. ಏನಾದರೂ ಬದಲಾವಣೆಯೊಂದು ಬಂದರೆ ಅದನ್ನು ಒಪ್ಪಿಕೊಳ್ಳುವವರು ಕಡಿಮೆ. ವಿರೋಧ ಮಾಡುವವರು ಹೆಚ್ಚು. ಇದು ಮನುಷ್ಯರ ಮನೋಭಾವ’ ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ,ರಾಷ್ಟ್ರೋತ್ಥಾನ ಬಳಗದ ಶಿವಮೊಗ್ಗ ವಿಭಾಗದ ಅಧ್ಯಕ್ಷ ಡಾ.ಸುಧೀಂದ್ರ ಇದ್ದರು.

‘ಸಂವಿಧಾನ ಶಿಲ್ಪಿ’ ಕೈಬಿಟ್ಟಿರುವುದು ಆಕಸ್ಮಿಕ

ಅಂಬೇಡ್ಕರ್ ಪಠ್ಯದಿಂದ ‘ಸಂವಿಧಾನ ಶಿಲ್ಪಿ’ ಪದ ಕೈಬಿಟ್ಟಿರುವುದು ಆಕಸ್ಮಿಕವಾಗಿ ಬರವಣಿಗೆ (ಟೈಪಿಂಗ್) ವೇಳೆ ಆದ ಪ್ರಮಾದ. ಅದನ್ನು ಮತ್ತೆ ಸೇರಿಸಲಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ವಿವೇಕ್ ಸುಬ್ಬಾರೆಡ್ಡಿ ಪ್ರತಿಕ್ರಿಯಿಸಿದರು.

‘ರಾಮನ ಬದಲು ರಾವಣನ ಪೂಜಿಸಬೇಕು ಎಂಬುದು ಪೆರಿಯಾರ್‌ ಚಿಂತನೆ. ಇದನ್ನು ಮಕ್ಕಳಿಗೆ ಕೊಡಬಹುದಾ? ರಾವಣನ ಶ್ರೇಷ್ಠತೆ ಈ ದೇಶದ ಸಾಮೂಹಿಕ ಜನರ ಚಿಂತನೆ ಅಲ್ಲ. ನಾಲ್ಕೈದು ಸಾವಿರ ವರ್ಷಗಳಿಂದ ಬಂದಿರುವ ನಂಬಿಕೆಯ ಬಗ್ಗೆ ಅಪಕಲ್ಪನೆ ಸೃಷ್ಟಿಸುವ ಕೂಗು ಯಾಕೆ ಬೇಕು? ಹೀಗಾಗಿ ಅದನ್ನು ಪಠ್ಯದಿಂದ ತೆಗೆದಿದ್ದೇವೆ’ ಎಂದು ಹೇಳಿದರು.

ಭಾರತ ಮಾತೆಯನ್ನು ಎಡಗೈ ಸೋಲಿಸುತ್ತಿದೆ: ‘ಭಾರತ ಮಾತೆ ಎದ್ದು ಶತ್ರುಗಳನ್ನು ಸಂಹಾರ ಮಾಡಲು ಮುಂದಾದಾಗ ಬಲಗೈ ಆ ಕೆಲಸಕ್ಕೆ ನೆರವಾದರೆ, ಎಡಗೈ ಮಾತ್ರ ಆಕೆಯನ್ನೇ ಖಡ್ಗ ಹಿಡಿದು ಸೋಲಿಸುತ್ತಿದೆ ಎಂದು ಸಾರ್ವಕರ್ ಹೇಳುತ್ತಿದ್ದರು. ಈ ಕೆಲಸ ಮಾಡಲು ಒಂದು ಕುಲ, ವರ್ಗ ಎಂದೆಂದಿಗೂ ಸಿದ್ಧವಿದೆ. ಸಹಿಷ್ಣುತೆ ಕಾರಣಕ್ಕೆ ಅವರನ್ನೂ ಸುಮ್ಮನೆ ಸಹಿಸಿಕೊಂಡಿದ್ದೆವು. ಆ ಸಮಾಧಾನಕ್ಕೂ ಮಿತಿ ಇದೆ. ಇನ್ನು ತಡೆಯಲು ಆಗೊಲ್ಲ’ ಎಂದರು.

ನಾರಾಯಣಗುರು ಪಾಠ ತೆಗೆದಿಲ್ಲ: ಶ್ರೀನಿವಾಸ ಪೂಜಾರಿ

‘ಪಠ್ಯಕ್ರಮ ಪರಿಷ್ಕರಣೆ ವೇಳೆ ನಾರಾಯಣಗುರುಗಳಕುರಿತ ಪಠ್ಯ ತೆಗೆದಿಲ್ಲ. ನಾರಾಯಣಗುರುಗಳು ಪ್ರತಿನಿಧಿಸುವ ಸಮಾಜದಿಂದ ಹುಟ್ಟಿ ಬಂದಿರುವ ನಾನು ಈ ಮಾತನ್ನು ಅಭಿಮಾನದಿಂದ ಹೇಳುತ್ತೇನೆ’ ಎಂದುಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

‘ಅಧಿಕಾರಕ್ಕೆ ಬಂದ ವರ್ಷದಲ್ಲಿಯೇನಾರಾಯಣಗುರುಗಳ ಕರ್ಮಭೂಮಿ ಶಿವಗಿರಿಗೆ ಪ್ರಧಾನಿ ಮೋದಿ ಭೇಟಿ ನೀಡಿ ಗುರುಗಳ ಚಿಂತನೆ ಪ್ರಚಾರಕ್ಕೆ ₹70 ಕೋಟಿ ಬಿಡುಗಡೆ ಮಾಡಿದ್ದರು. ಹಾಗಿದ್ದ ಮೇಲೆ ನಾವು (ಬಿಜೆಪಿ) ಗುರುಗಳ ಪಾಠ ತೆಗೆಯುತ್ತೇವೆಯೇ’ ಎಂದು ಪ್ರಶ್ನಿಸಿದರು.

‘ಭಗತ್‌ಸಿಂಗ್, ಬಸವಣ್ಣ, ಕುವೆಂಪು ಅವರ ಪಾಠ ತೆಗೆದಿಲ್ಲ. ಆದರೂ ವಿವಾದ ಮಾಡಲಾಯಿತು.ರಾಷ್ಟ್ರಪ್ರೇಮದ ಪಕಳೆಗಳನ್ನು ಮಕ್ಕಳಿಗೆ ಪರಿಚಯಿಸಲು ಹೆಗಡೇವಾರ್ ಅವರ ಭಾಷಣ ಪಠ್ಯದಲ್ಲಿ ಸೇರಿಸಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.