ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಮುಂದಿಟ್ಟುಕೊಂಡು ತಾಲ್ಲೂಕಿನ ಆಯನೂರಿನಿಂದ ಶಿವಮೊಗ್ಗಕ್ಕೆ ಸೋಮವಾರ ಬೆಳಿಗ್ಗೆ ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಆರಂಭಿಸಿದ ಪಾದಯಾತ್ರೆಗೆ ಭರ್ಜರಿ ಸ್ಪಂದನೆ ದೊರೆತಿದೆ. ಸಾವಿರಾರು ಜನರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಶರಾವತಿ ಯೋಜನೆಯ ಮುಳುಗಡೆ ಸಂತ್ರಸ್ತರ ಕುಟುಂಬದವರು, ಕಾಂಗ್ರೆಸ್ ಪಕ್ಷದ ಸದಸ್ಯರು, ಪದಾಧಿಕಾರಿಗಳು ಹಾಗೂ ಮುಖಂಡರು ಮಧು ಬಂಗಾರಪ್ಪ ಅವರ ಜೊತೆಗೆ ಹೆಜ್ಜೆ ಹಾಕಿದ್ದು, ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಲ್ಲೆಡೆ ಕಾಂಗ್ರೆಸ್ ಪಕ್ಷದ ಧ್ವಜ ರಾರಾಜಿಸುತ್ತಿದೆ. ಪಕ್ಷದ ಗುರುತು ಇರುವ ಟೋಪಿ, ಟೀಶರ್ಟ್ ಧರಿಸಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಶಿವಮೊಗ್ಗ, ಆಯನೂರು, ಕುಂಸಿ ಭಾಗದಲ್ಲಿ ರಾತ್ರಿ ಸುರಿದ ಭರ್ಜರಿ ಮಳೆಯಿಂದ ವಾತಾವರಣ ತಂಪಾಗಿದ್ದು, ಆಗಾಗ ಇರುಚಲು ಮಳೆ ದರ್ಶನ ನೀಡುತ್ತಿದೆ. ಕೆಲ ದಿನಗಳಿಂದ ಕಾಣಿಸಿದ್ದ ಬಿಸಿಲ ಬೇಗೆ ಮರೆಯಾಗಿ ಮೋಡ ಮುಚ್ಚಿದ ವಾತಾವರಣ ಹಾಗೂ ಹಸಿರು ಹೊದ್ದ ಕಾಡು ಹಾದಿ, ಸಂತ್ರಸ್ತರ ಬವಣೆ ಬಿಂಬಿಸುವ ಹೋರಾಟದ ಹಾಡುಗಳು, ತಮಟೆ, ಡೊಳ್ಳಿನ ಸದ್ದು ಪಾದಯಾತ್ರಿಗಳ ನಡಿಗೆಗೆ ಉತ್ತೇಜನ ನೀಡಿದೆ.
ಶಿವಮೊಗ್ಗ–ಸಾಗರ ಮುಖ್ಯರಸ್ತೆಯ ಒಂದು ಭಾಗದಲ್ಲಿ ಪಾದಯಾತ್ರಿಗಳ ನಡಿಗೆಗೆ ಅವಕಾಶ ಮಾಡಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.
ಒಗ್ಗಟ್ಟು ಪ್ರದರ್ಶನ:
ಪಾದಯಾತ್ರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆ ಆಗಿ ಬದಲಾಗಿದ್ದು, ನಾಯಕರು ಮುನಿಸು ಮರೆತು ಸಾಗಿ ಬಂದರು. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವವರ ಬಲ ಪ್ರದರ್ಶನಕ್ಕೂ ಆಯನೂರು–ಶಿವಮೊಗ್ಗ ನಡುವಿನ ಹಾದಿ ಸಾಕ್ಷಿಯಾಗಿದೆ. ಟಿಕೆಟ್ ಆಕಾಂಕ್ಷಿಗಳು ತಮ್ಮೊಂದಿಗೆ ಭಾರೀ ಸಂಖ್ಯೆಯಲ್ಲಿ ಬೆಂಬಲಿಗರನ್ನು ಕರೆತಂದಿದ್ದಾರೆ.
ಬಾಡಿಗೆ ಬಸ್‌ಗಳಲ್ಲಿ ಆಯನೂರಿಗೆ ಬಂದಿದ್ದ ಸಂತ್ರಸ್ತರಿಗೆ ಅಲ್ಲಿನ ಸಂತೆ ಮೈದಾನದಲ್ಲಿ ಉಪ್ಪಿಟ್ಟು–ಕೇಸರಿ, ಚಹಾ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ನಾಷ್ಟಾ ಸವಿದು ನಾಯಕರೊಂದಿಗೆ ಹೆಜ್ಜೆ ಹಾಕಿದರು.
ಆಯನೂರಿನ ಎಪಿಎಂಸಿ ಮೈದಾನದ ಬಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪಾದಯಾತ್ರೆಗೆ ಚಾಲನೆ ನೀಡಿದರು. ಮಧು ಬಂಗಾರಪ್ಪ ಅವರೊಂದಿಗೆ ಕಿ.ಮೀನಷ್ಟು ದೂರ ಇಳಿ ವಯಸ್ಸಿನಲ್ಲೂ ಕಾಗೋಡು ತಿಮ್ಮಪ್ಪ ಹೆಜ್ಜೆ ಹಾಕಿದ್ದು, ಪಾದಯಾತ್ರಿಗಳಲ್ಲಿ ಉತ್ಸಾಹ ಮೂಡಿಸಿತು. ಜಯಘೋಷ ಮುಗಿಲುಮುಟ್ಟಿತು. ಧ್ರುವನಾರಾಯಣ್, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಾಜಿ ಶಾಸಕರಾದ ಗೋಪಾಲಕೃಷ್ಣ ಬೇಳೂರು, ಕೆ.ಬಿ.ಪ್ರಸನ್ನಕುಮಾರ್, ಆರ್.ಪ್ರಸನ್ನಕುಮಾರ್ ಕೂಡ ಪಾದಯಾತ್ರೆಯಲ್ಲಿ ಸಾಗಿ ಬಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಎಚ್.ಅನಿತಾಕುಮಾರಿ, ಕಾಗೋಡು ತಿಮ್ಮಪ್ಪ ಪುತ್ರಿ ಡಾ. ರಾಜನಂದಿನಿ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಮುಖಂಡರಾದ ಶ್ರೀನಿವಾಸ ಕರಿಯಣ್ಣ, ಇಸ್ಮಾಯಿಲ್ ಖಾನ್, ಜಿ.ಪಲ್ಲವಿ, ಬಲದೇವಕೃಷ್ಣ, ಕಲಗೋಡು ರತ್ನಾಕರ್, ಎಸ್.ಕೆ.ಮರಿಯಪ್ಪ, ಗೋಣಿ ಮಹಾಂತೇಶ, ನಗರದ ಮಹಾದೇವಪ್ಪ, ಎನ್. ರಮೇಶ್, ಎಚ್.ಸಿ.ಯೋಗೀಶ್, ಕೆ.ದೇವೇಂದ್ರಪ್ಪ, ರಮೇಶ ಇಕ್ಕೇರಿ, ಜಿ.ವಿಜಯಕುಮಾರ್, ಜಿ.ಡಿ.ಮಂಜುನಾಥ್, ಯುವಕಾಂಗ್ರೆಸ್‌ನ ಮುಖಂಡ ಎಸ್.ಎಂ.ಶರತ್, ಮಧುಸೂದನ್ ಅವರು ಮಧು ಅವರಿಗೆ ಸಾಥ್ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.