ADVERTISEMENT

ಶಿಕಾರಿಪುರ | ಇ-ಸ್ವತ್ತು ದಾಖಲೆ ಪಡೆಯಲು ಪುರಸಭೆಗೆ ಅಲೆದಾಟ: ನಿವಾಸಿಗಳ ಅಸಮಾಧಾನ

ಎಚ್.ಎಸ್.ರಘು
Published 1 ಜುಲೈ 2024, 7:19 IST
Last Updated 1 ಜುಲೈ 2024, 7:19 IST
ಶಿಕಾರಿಪುರ ಪಟ್ಟಣದ ಪುರಸಭೆ ಕಚೇರಿ
ಶಿಕಾರಿಪುರ ಪಟ್ಟಣದ ಪುರಸಭೆ ಕಚೇರಿ    

ಶಿಕಾರಿಪುರ: ಮನೆ ಹಾಗೂ ನಿವೇಶನಗಳ ಇ-ಸ್ವತ್ತು ಸೇರಿ ಅಗತ್ಯ ದಾಖಲೆಗಳನ್ನು ಪಡೆಯಲು ತಮ್ಮ ಕೆಲಸ ಕಾರ್ಯ ಬಿಟ್ಟು, ಪಟ್ಟಣದ ಪುರಸಭೆ ಕಚೇರಿಗೆ ನಿವಾಸಿಗಳು ಅಲೆದಾಡುವ ಪರಿಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.

ಪಟ್ಟಣದ ನಿವಾಸಿಗಳು ತಮ್ಮ ಮನೆ ಹಾಗೂ ನಿವೇಶನಗಳ ಮಾಲೀಕತ್ವ ಪಡೆಯಲು ಇ-ಸ್ವತ್ತು ದಾಖಲೆ ಪಡೆಯುವುದು ಪ್ರಮುಖವಾಗಿದೆ. ನಿವೇಶನ ಹಾಗೂ ಮನೆ ಮಾರಾಟ ಮಾಡಲು ಇ-ಸ್ವತ್ತು ಪ್ರಮುಖ ಪಾತ್ರ ವಹಿಸಲಿದೆ. ಬ್ಯಾಂಕ್‌ಗಳಲ್ಲಿ ನಿವಾಸಿಗಳು ತಮ್ಮ ಕಷ್ಟದ ಸಂದರ್ಭದಲ್ಲಿ ನಿವೇಶನ ಹಾಗೂ ಮನೆ ಮೇಲೆ ಅಡಮಾನ ಸಾಲ ಸೌಲಭ್ಯ ಪಡೆಯಲು ಹಾಗೂ ಹೊಸ ಮನೆ ನಿರ್ಮಿಸಿಕೊಳ್ಳಲು ಇ–ಸ್ವತ್ತು ದಾಖಲೆ ನೀಡಬೇಕಾಗಿದೆ.

ಆದರೆ, ಪಟ್ಟಣದ ನಿವಾಸಿಗಳಿಗೆ ನಿವೇಶನ ಹಾಗೂ ಮನೆ ಹೊಂದಿರುವ ಬಡಾವಣೆಯ ಟೌನ್ ಪ್ಲಾನಿಂಗ್ ಇಲ್ಲದ ಕಾರಣ ಇ–ಸ್ವತ್ತು ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೆಲವೊಮ್ಮೆ ಟೌನ್ ಪ್ಲಾನ್ ಇದ್ದರೂ ಇ–ಸ್ವತ್ತು ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳು ಪಟ್ಟಣದ ನಿವಾಸಿಗಳಿಂದ ಕೇಳಿ ಬರುತ್ತಿವೆ. ಪ್ರತಿನಿತ್ಯ ಕೆಲಸ ಕಾರ್ಯ ಬಿಟ್ಟು ಪುರಸಭೆ ಕಚೇರಿಗೆ ಅಲೆದಾಡಬೇಕಾಗಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ADVERTISEMENT

ಪುರಸಭೆ ಕಚೇರಿಗೆ ಅಲೆದಾಡಿ ಬೇಸತ್ತ ನಿವಾಸಿಯೊಬ್ಬರು ಈಚೆಗೆ ಕಚೇರಿ ಆವರಣದಲ್ಲಿಯೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಮತ್ತೊಬ್ಬ ನಿವಾಸಿ ಪುರಸಭೆ ಮುಂಭಾಗ ಧರಣಿ ಸತ್ಯಾಗ್ರಹ ನಡೆಸಿದ್ದರು. ಆದರೂ ಪಟ್ಟಣದ ನಿವಾಸಿಗಳಿಗೆ ಇ–ಸ್ವತ್ತು ನೀಡುವಲ್ಲಿ ಪುರಸಭೆ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಜಿಲ್ಲೆಯ ಬೇರೆ ಪಟ್ಟಣಗಳಲ್ಲಿ ನಿವಾಸಿಗಳಿಗೆ ಇ–ಸ್ವತ್ತು ದಾಖಲೆ ಸಮಯಕ್ಕೆ ದೊರೆಯುತ್ತಿದೆ. ಗ್ರಾಮ ಠಾಣಾ ಭೂಮಿಗೂ ಇ–ಸ್ವತ್ತು ಮಾಡಿಕೊಡಲು ಅವಕಾಶವಿದೆ. ಆದರೆ, ಶಿಕಾರಿಪುರದಲ್ಲಿ ಇ–ಸ್ವತ್ತು ಪಡೆಯಲು ಪುರಸಭೆ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನನ್ನ ನಿವೇಶನಕ್ಕೆ ಇ–ಸ್ವತ್ತು ಪಡೆಯಲು ವರ್ಷಗಳ ಕಾಲ ಅಲೆದಾಡಬೇಕಾಯಿತು. ಭೂ ಪರಿವರ್ತನೆಯಾದ ದಾಖಲೆ ಇದ್ದಂತಹ ಸ್ವತ್ತಿಗಾಗಿ ನೀಡಿದ ಕೆಲವು ಫೈಲ್‌ಗಳು ಕಳೆದು ಹೋದ ಘಟನೆಗಳು ಜರುಗಿವೆ ಎಂದು ಸ್ಥಳೀಯ ನಿವಾಸಿ ಮಂಜಾಚಾರ್ ದೂರಿದರು.

ಪಟ್ಟಣದಲ್ಲಿ ನಿವೇಶನ ಹಾಗೂ ಮನೆ ಸೇರಿ 13500 ಸ್ವತ್ತುಗಳಿವೆ. 5 ಸಾವಿರ ನಿವೇಶನ ಹಾಗೂ ಮನೆಗಳಿಗೆ ಅಧಿಕೃತವಾಗಿ ಇ–ಸ್ವತ್ತು ದಾಖಲೆ ನೀಡಲಾಗಿದೆ. 8300 ಸ್ವತ್ತುಗಳಿಗೆ ಇ–ಸ್ವತ್ತು ಆಗಿಲ್ಲ. ಭೂ ಪರಿವರ್ತನೆ ಆಗದೇ ಇರುವ ಭೂಮಿಯಲ್ಲಿ ನಿವೇಶನ ಹಾಗೂ ಮನೆ ಹೊಂದಿದ ನಿವಾಸಿಗಳಿಗೆ ಹಾಗೂ ಸ್ಪಷ್ಟ ದಾಖಲೆಗಳ ಕೊರತೆ ಇರುವ ಸ್ವತ್ತುಗಳಿಗೂ ಇ–ಸ್ವತ್ತು ನೀಡಲು ಸಾಧ್ಯವಾಗಿಲ್ಲ. ಸಮರ್ಪಕ ದಾಖಲೆ ಪಡೆದು ಇ–ಸ್ವತ್ತು ನೀಡಲಾಗುತ್ತಿದೆ.

- ಭರತ್ ಮುಖ್ಯಾಧಿಕಾರಿ ಶಿಕಾರಿಪುರ

ಪುರಸಭೆ ಇ–ಸ್ವತ್ತು ಸೇರಿ ವಿವಿಧ ದಾಖಲೆ ಪಡೆಯಲು ಪುರಸಭೆ ಕಚೇರಿಗೆ ನಿವಾಸಿಗಳನ್ನು ಅಲೆದಾಡಿಸುತ್ತಿರುವ ಬಗ್ಗೆ  ದೂರುಗಳು ಬಂದಿದ್ದವು. ಈಚೆಗೆ ಪುರಸಭೆ ಅಧಿಕಾರಿಗಳ ಸಭೆ ನಡೆಸಿದ್ದೇನೆ. ಕಚೇರಿಗೆ ನಿವಾಸಿಗಳನ್ನು ಅಲೆದಾಡಿಸದೇ ತಕ್ಷಣ ಇ–ಸ್ವತ್ತು ನೀಡಲು ಕ್ರಮ ಕೈಗೊಳ್ಳುವಂತೆಸ ಸೂಚಿಸಲಾಗಿದೆ.

- ಬಿ.ವೈ. ವಿಜಯೇಂದ್ರ ಶಾಸಕ ಶಿಕಾರಿಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.