ADVERTISEMENT

ತೀರ್ಥಹಳ್ಳಿ: ಪಾತಾಳಕ್ಕೆ ಕುಸಿದ ಅಂತರ್ಜಲ

ಬರಿದಾಗುತ್ತಿದೆ ಜಲ ಮೂಲ; ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಕೆ

ನಿರಂಜನ ವಿ.
Published 9 ಫೆಬ್ರುವರಿ 2024, 6:16 IST
Last Updated 9 ಫೆಬ್ರುವರಿ 2024, 6:16 IST
ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಿ ಸ್ಥಿತಿ
ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾವಿ ಸ್ಥಿತಿ   

ತೀರ್ಥಹಳ್ಳಿ: ಹೆಚ್ಚು ಮಳೆ ಸುರಿಯುವ ಖ್ಯಾತಿಯ ಆಗುಂಬೆ ಸಮೀಪದ ಗ್ರಾಮಗಳಲ್ಲೇ ಪ್ರಸಕ್ತ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಕುಡಿಯುವ ನೀರಿನ ಬಹುತೇಕ ಮೂಲಗಳು ಬರಿದಾಗಿದ್ದು ಗ್ರಾಮಸ್ಥರು, ರೈತರು, ತಾಲ್ಲೂಕು ಆಡಳಿತ ಅಂತರ್ಜಲದ ಮೊರೆ ಹೋಗುತ್ತಿದ್ದಾರೆ. ಆದರೆ, ಅಂತರ್ಜಲ ಮಟ್ಟವೂ ಪಾತಾಳ ಕಂಡಿದೆ.

ಅತಿಯಾದ ನೀರಿನ ಬಳಕೆ, ನೀರು ಇಂಗುವ ಮಣ್ಣಿನ ಕೊಳವೆಗಳ ನಾಶ, ಅಕೇಶಿಯಾ, ರಬ್ಬರ್‌ ನೆಡುತೋಪು, ಬಾಗಾಯ್ತು (ಅಡಿಕೆ ತೋಟ) ಜಮೀನು ಹೆಚ್ಚಳ, ಅಕ್ರಮ ಗಣಿಗಾರಿಕೆಯಿಂದಾಗಿ ಅಂತರ್ಜಲ ತಳ ಹಿಡಿದಿದೆ. ಸುಮಾರು 800 ಅಡಿಗಳಷ್ಟು ಕೊಳವೆಬಾವಿ ಕೊರೆಯಿಸಿದರೂ ಕೆಲವು ಭಾಗದಲ್ಲಿ ನೀರಿನ ಸೆಲೆ ಲಭ್ಯವಾಗದೆ ಇರುವುದು ಆಡಳಿತ ಸೇರಿದಂತೆ ಹಲವರ ನಿದ್ದೆ ಗೆಡಿಸಿದೆ.

ತೀರ್ಥಹಳ್ಳಿ ತಾಲ್ಲೂಕಿನ 246 ಮಜರೆ ಹಳ್ಳಿಗಳು ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿವೆ. ತಾಲ್ಲೂಕು ಆಡಳಿತ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ಆದಾಗ್ಯೂ ಶೇ 75ರಷ್ಟು ಗ್ರಾಮಗಳಿಗೆ ನೀರನ್ನು ಪೂರೈಸಲು ವಿಫಲವಾಗಿದೆ. ಆರಗ, ಬೆಜ್ಜವಳ್ಳಿ, ಅರಳಸುರಳಿ, ದೇಮ್ಲಾಪುರ, ಗುಡ್ಡೇಕೊಪ್ಪ, ಹಾದಿಗಲ್ಲು, ಹಣಗೆರೆ, ಹೆಗ್ಗೋಡು, ಹೊನ್ನೇತ್ತಾಳು, ಹೊಸಹಳ್ಳಿ, ಕನ್ನಂಗಿ, ಮಂಡಗದ್ದೆ, ನಾಲೂರು ಕೊಳಿಗೆ, ನೆರಟೂರು, ಸಾಲ್ಗಡಿ, ಸಾಲೂರು, ಶೇಡ್ಗಾರು, ಸಿಂಗನಬಿದರೆ ಪಂಚಾಯಿತಿಗಳ ಸುಮಾರು 5ಕ್ಕಿಂತ ಹೆಚ್ಚು ಮಜಿರೆ ಗ್ರಾಮಗಳು ಸಮಸ್ಯೆಗೆ ತುತ್ತಾಗಿವೆ.

ADVERTISEMENT

ಈಗಾಗಲೇ ನಾಲ್ಕೈದು ಬಾರಿ ಮಳೆ ಸುರಿದಿದ್ದರೂ ಭೂಮಿಯ ತಾಪಕ್ಕೆ ನೀರಿನ ಪ್ರಮಾಣ ಏರಿಕೆಯಾಗಿಲ್ಲ. ಬಿಸಿಲಿನ ತಾಪಮಾನ ಹೆಚ್ಚಳವಾಗಿದ್ದು, ನೀರು ಆವಿಯಾಗುವ ಪ್ರಮಾಣ ದ್ವಿಗುಣಗೊಳ್ಳುತ್ತಿದೆ. ಬೆಳೆ ರಕ್ಷಣೆಗಾಗಿ ರೈತರು ಹೆಚ್ಚುವರಿ ನೀರು ಪೂರೈಸುವುದಕ್ಕೆ ಪರದಾಡುತ್ತಿದ್ದಾರೆ.

ಮಲೆನಾಡಿನ ಆಗುಂಬೆ ಮಡಿಲಿನಲ್ಲಿ ಹುಟ್ಟುವ ಮಲಾಪಹಾರಿ, ಮಾಲತಿ, ಸೀತಾ ನದಿಗಳ ಹರಿವು ಮಳೆಯ ಕೊರತೆಯಿಂದಾಗಿ ಸ್ಥಗಿತಗೊಂಡಿದೆ. ಶೃಂಗೇರಿ ಮೂಲಕ ತಾಲ್ಲೂಕು ಪ್ರವೇಶಿಸುವ ತುಂಗಾ ನದಿ, ಅಂಬುತೀರ್ಥದಲ್ಲಿ ಉದ್ಭವಿಸುವ ಶರಾವತಿ ನದಿ ಮತ್ತು ಇವುಗಳಿಗೆ ಸೇರುವ ಸಣ್ಣ ಪುಟ್ಟ ಉಪನದಿಗಳು ಬತ್ತಿ ಹೋಗುತ್ತಿದ್ದು, ಮಳೆ ಸಕಾಲ್ಕಕೆ ಬರದಿದ್ದರೆ ನೀರಿನ ಬವಣೆ ಇನ್ನಷ್ಟು ಹೆಚ್ಚಳವಾಗುವ ಮುನ್ಸೂಚನೆ ದಟ್ಟವಾಗುತ್ತಿದೆ.

ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸುಮಾರು 40 ಅಡಿ ಆಳದ ಬಾವಿ ನೀರಿಲ್ಲದೆ ಒಣಗಿರುವುದು.

ಕೈಕೊಟ್ಟ ‘ಜಲಜೀವನ್‌’ ಮಿಷನ್‌

ಕೇಂದ್ರ ಸರ್ಕಾರದ ಬಹುಗ್ರಾಮ ಕುಡಿಯುವ ಯೋಜನೆಯಾದ ಜಲ್‌ ಜೀವನ್‌ ಮಿಷನ್‌ (ಜೆಜೆಎಂ) ಅನುಷ್ಠಾನ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಕೆಲವು ಭಾಗಗಳಲ್ಲಿ ಟೆಂಡರ್‌ ಪ್ರಕ್ರಿಯೆ ನಡೆಯದೇ ಇರುವುದರಿಂದ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಕುಡಿಯುವ ನೀರಿನ ಸೌಲಭ್ಯ ಇಲ್ಲದೇ ಇರುವ ಗ್ರಾಮಗಳನ್ನು ಕಡೆಗಣಿಸಲಾಗಿದೆ. ಹಳೆಯ ನಲ್ಲಿಯ ಬದಲಿಗೆ ಹೊಸ ನಲ್ಲಿಗಳನ್ನು ಮಾತ್ರ ಅಳವಡಿಸುತ್ತಿದ್ದಾರೆ. ಕಪ್ಪೆಹೊಂಡಗಳಿಂದ ಕುಡಿಯುವ ನೀರು ಸಂಗ್ರಹಣೆ ಮಾಡುವ ಸಾಹಸ ಮಲೆನಾಡಿನಲ್ಲಿ ಮುಂದುರಿದಿದೆ ಎಂದು ಸಾಲ್ಗಡಿ ಗ್ರಾಮ ಪಂಚಾಯಿತಿ ಸದಸ್ಯ ಪಣಿರಾಜ್‌ ಕಟ್ಟೇಹಕ್ಕಲು ದೂರುತ್ತಾರೆ.

ಬತ್ತಿದ ಬಾವಿಗಳು ಆಗುಂಬೆಗೆ ಹೊಂದಿಕೊಂಡ ಗ್ರಾಮಗಳಲ್ಲಿ ಬಾವಿಗಳು ಸಂಪೂರ್ಣ ಬತ್ತಿ ಹೋಗಿವೆ. ಕೊಳವೆ ಬಾವಿಗಳಿಂದ ನಿರೀಕ್ಷಿತ ಪ್ರಮಾಣದ ನೀರು ಲಭ್ಯವಾಗುತ್ತಿಲ್ಲ. ತೆರೆದ ನೀರಿನ ಮೂಲಗಳು ಒಣಗಿದ್ದು ಕುಡಿಯುವ ನೀರು ಪೂರೈಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ
ಕುಂದಾದ್ರಿ ರಾಘವೇಂದ್ರ ಹೊನ್ನೇತ್ತಾಳು ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.