ಶಿವಮೊಗ್ಗ: ಲಕ್ಕವಳ್ಳಿಯ ಭದ್ರಾ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ನೀರಾವರಿ ನಿಗಮ ಶುಕ್ರವಾರ ಮುನ್ನೆಚ್ಚರಿಕೆ ನೀಡಿದೆ.
ಭದ್ರಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 35ರಿಂದ 40 ಸಾವಿರ ಕ್ಯುಸೆಕ್ ಒಳಹರಿವು ಇದೆ.
ಜಲಾಶಯದ ಗರಿಷ್ಠ ಮಟ್ಟ 186 ಅಡಿ ಇದ್ದು, ಜಲಾಶಯದಲ್ಲಿ ಈಗ 174.3 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.
ಅಣೇಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ಜಲಾಶಯದ ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ನದಿಗೆ ನೀರು ಹರಿಸಬಹುದು. ಹೀಗಾಗಿ ನದಿಯ ಎಡ ಮತ್ತು ಬಲದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು ಹಾಗೂ ಜಾನುವಾರುಗಳನ್ನು ಮೇಯಲು ಬಿಡಬಾರದು ಎಂದು ಎಂದು ಕರ್ನಾಟಕ ನೀರಾವರಿ ನಿಗಮ ಭದ್ರಾ ಯೋಜನಾ ವೃತ್ತದ ಸೂಪರಿಟೆಂಡೆಂಟ್ ಎಂಜಿನಿಯರ್ ಎನ್.ಸುಜಾತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.