ಹೊಸನಗರ: ಅತೀ ಹೆಚ್ಚು ಮಳೆ ಬೀಳುವ ತಾಲ್ಲೂಕಿನಲ್ಲೂ ನೀರಿಗೆ ಬರ ಎದುರಾಗಿದೆ. ಬಿಸಿಲ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿಸಿಲ ಝಳಕ್ಕೆ ಜನರು ಬೆದರಿದ್ದಾರೆ. ಈಗಲೇ ಹೀಗಾದರೆ ಮುಂದೆ ಹೇಗಪ್ಪಾ ಎಂದು ಆತಂಕದಲ್ಲಿದ್ದಾರೆ. ಜಾನುವಾರು, ಪ್ರಾಣಿ ಪಕ್ಷಿಗಳೂ ಹೊರ ಬರುತ್ತಿಲ್ಲ.
ಕಳೆದ ವರ್ಷ ತಾಲ್ಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಬಿದ್ದ ಮಳೆ ಕಾರಣ ಹಳ್ಳಕೊಳ್ಳ, ನದಿ ಮೂಲಗಳು ಅವಧಿಗಿಂತ ಮುಂಚೆಯೇ ಬತ್ತತೊಡಗಿವೆ. ತಾಲ್ಲೂಕಿನ ಜೀವನದಿ ಶರಾವತಿ ನದಿಯಲ್ಲಿ ನೀರಿಲ್ಲ. ಶರಾವತಿ ಸೆರಗಿನ ಹಸಿರ ಹೊನಲು ಒಣಗುತ್ತಿದೆ. ಆಯಾಕಟ್ಟಿನ ನೆಲ ಬರುಡಾಗುತ್ತಿದೆ. ಎಪ್ರಿಲ್ ಕೊನೆಯಲ್ಲಿ ಹರಿವು ನಿಲ್ಲಿಸುತ್ತಿದ್ದ ಶರಾವತಿ ಮಾರ್ಚ್ ಅಂತ್ಯಕ್ಕೂ ಮೊದಲೇ ತನ್ನ ಓಟಕ್ಕೆ ಸಂಪೂರ್ಣ ವಿರಾಮ ಹಾಕುವ ಸಾಧ್ಯತೆ ಇದೆ.
ಮುಳುಗಡೆ ಪ್ರದೇಶ, ಕಾಡು, ಗುಡ್ಡಗಾಡು, ಸೊಪ್ಪಿನಬೆಟ್ಟ ಹೊಂದಿರುವ ನಗರ, ಹುಂಚಾ, ಕಸಬಾ ಹೋಬಳಿಯಲ್ಲಿ ಬಿಸಿಲಿನ ಆರ್ಭಟ ತುಸು ಹೆಚ್ಚೇ ಇದೆ. ಇನ್ನು ಕೆರೆಹಳ್ಳಿ ಹೋಬಳಿಯಲ್ಲಿ ಬಿಸಿಲಿನ ರೌದ್ರವತಾರ ಕಾಣಸಿಗುತ್ತಿದೆ. ಫೆಬ್ರುವರಿಯಿಂದಲೇ ಬಿಸಿಲು ಹೆಚ್ಚಿದ್ದು, ಕಳೆದ ವಾರದಿಂದ ಭಾರಿ ಪ್ರಮಾಣದಲ್ಲಿ ಉರಿತಾಪ ಕಾಣುತ್ತಿದೆ. ಇದು ಜನ ಜಾನುವಾರು ಪರದಾಟಕ್ಕೆ ಕಾರಣವಾಗಿದ್ದು, ಮನೆಯಿಂದ ಹೊರಬರಲಾಗದ ಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ 30 ಗ್ರಾಮ ಪಂಚಾಯಿತಿಗಳಲ್ಲಿ ಸದ್ಯ ಕುಡಿಯುವ ನೀರಿಗೆ ಸಮಸ್ಯೆ ಕಂಡು ಬರದಿದ್ದರೂ ಮುಂದಿನ ದಿನಗಳಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಮಳೆ ಕೊರತೆಯಿಂದ ನಲುಗಿದ್ದ ರೈತರು ಬರದ ತೀವ್ರತೆಗೆ ಸಿಲುಕಿದ್ದಾರೆ. ನೀರಿಲ್ಲದೆ ಒಣಗುತ್ತಿರುವ ಅಡಿಕೆ ತೋಟಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ರೈತರು ಕೊಳವೆಬಾವಿಗಳ ಮೊರೆ ಹೋಗಿದ್ದು ಕಂಡ ಕಂಡಲ್ಲಿ ಬೋರ್‌ಗಳನ್ನು ಕೊರೆಯುವ ಸದ್ದು ಕೇಳಿಬರುತ್ತಿದೆ. ಆದರೆ, ನಿರೀಕ್ಷಿತ ನೀರು ಲಭ್ಯವಾಗದೇ ಹತಾಷರಾಗುತ್ತಿದ್ದಾರೆ.
ಪಟ್ಟಣಿಗರು ಸದ್ಯ ನೀರಾಳ: ಹೊಸನಗರ ಮತ್ತು ರಿಪ್ಪನ್‌ಪೇಟೆ ಪಟ್ಟಣಗಳಲ್ಲಿ ಸದ್ಯ ಕುಡಿಯವ ನೀರಿನ ಕೊರತೆ ಅಷ್ಟಾಗಿ ಕಂಡುಬಂದಿಲ್ಲ. ಹೊಸನಗರದಲ್ಲಿ ಕಲ್ಲುಹಳ್ಳಕ್ಕೆ ಜಾಕ್ವೆಲ್ ಬಳಿ ಕಟ್ಟು ಕಟ್ಟಿದ್ದು, ಲಭ್ಯ ಇರುವ ನೀರಿನ್ನೇ ಸರಬರಾಜು ಮಾಡಲಾಗುತ್ತಿದೆ. ವಾರಕ್ಕೊಮ್ಮೆ ನೀರು ಬಿಡಬೇಕಾದ ಸಂದರ್ಭ ಎದುರಾಗುವ ಸಾಧ್ಯತೆ ಹೆಚ್ಚಿದೆ.
ಕೊಳವೆ ಬಾವಿಗಳು ವಿಫಲ: ಗ್ರಾಮ ಪಂಚಾಯಿತಿಗಳಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರಕ್ಕೆ ಕೊಳವೆಬಾವಿಗಳನ್ನು ಕೊರೆಯಿಸಲು ಸೂಚನೆ ನೀಡಲಾಗುತ್ತಿದೆ. ಆದರೆ, ಕೊಳವೆಬಾವಿಗಳಲ್ಲಿ ನೀರು ಬಾರದೆ ವಿಫಲವಾಗುತ್ತಿವೆ. ಎರಡು ವರ್ಷಗಳ ಹಿಂದೆ ಕೊರೆಯಿಸಿದ್ದ ಕೊಳವೆಬಾವಿಗಳಲ್ಲಿ ನೀರಿಲ್ಲ. ಚೂರುಪಾರು ನೀರು ಬಂದರೂ ಸಾಕಾಗುತ್ತಿಲ್ಲ. ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಕೊಳವೆಬಾವಿಗಳು ವಿಫಲವಾಗಿವೆ. ಕುಡಿಯುವ ನೀರಿನ ನಿರ್ವಹಣೆಗೆ ಮತ್ತೆ ಕೊಳವೆಬಾವಿ ಕೊರೆಯಿಸಲು ಜಿಲ್ಲಾಡಳಿತ ಈಚೆಗೆ ಸೂಚನೆ ನೀಡಿದೆ. ಆದರೆ, ಜನರು ಆಸಕ್ತಿ ಕಳೆದುಕೊಂಡಿದ್ದಾರೆ. ನೀರಿನ ಲಭ್ಯತೆ ಆಧಾರದಲ್ಲಿ ತೆರೆದಬಾವಿ ತೋಡುವುದು ಉತ್ತಮ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಮನವಿ ಮಾಡಿದ್ದಾರೆ.
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಇದಕ್ಕಾಗಿ ಅನುದಾನ ಮೀಸಲಿಟ್ಟಿದ್ದು ಗ್ರಾಮ ಪಂಚಾಯಿತಿ ಪಿಡಿಒಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು.- ಗೋಪಾಲಕೃಷ್ಣ ಬೇಳೂರು ಶಾಸಕರು
ಲ್ಲುಹಳ್ಳಕ್ಕೆ ಕಟ್ಟು ಹಾಕುವ ಮೂಲಕ ಪಟ್ಟಣದಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಇದು 15 ದಿನಗಳಿಗೆ ಸಾಕಾಗಲಿದ್ದು 2 ಕೊಳವೆಬಾವಿಗಳನ್ನು ಕೊರೆಯಿಸಬೇಕಿದ್ದು ವಾಹನ ಲಭ್ಯವಾಗುತ್ತಿಲ್ಲ.- ಕಎಸ್.ಜಿ. ಮಾರುತಿ ಮುಖ್ಯಾಧಿಕಾರಿ ಹೊಸನಗರ ಪಟ್ಟಣ ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.