ADVERTISEMENT

ನೀರೆತ್ತದ ಏತ ನೀರಾವರಿ!

ತುಂಗಾ, ಮಾಲತಿ ನದಿಯಲ್ಲಿ 19 ಯೋಜನೆಗಳು ಮಣ್ಣುಪಾಲು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 7:07 IST
Last Updated 24 ಮಾರ್ಚ್ 2024, 7:07 IST
ತೀರ್ಥಹಳ್ಳಿ ತಾಲ್ಲೂಕಿನ ಕೋಡ್ಲು ಗ್ರಾಮದಲ್ಲಿ ನಿರ್ಮಿಸಿರುವ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ ಪಾಳು ಬಿದ್ದಿರುವುದು 
ತೀರ್ಥಹಳ್ಳಿ ತಾಲ್ಲೂಕಿನ ಕೋಡ್ಲು ಗ್ರಾಮದಲ್ಲಿ ನಿರ್ಮಿಸಿರುವ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ ಪಾಳು ಬಿದ್ದಿರುವುದು    

ತೀರ್ಥಹಳ್ಳಿ: ತುಂಗಾ ಹಾಗೂ ಮಾಲತಿ ನದಿಗಳಿಂದ ಸಾಗುವಳಿ ಜಮೀನಿಗೆ ನೀರು ಹಾಯಿಸುವ ಏತ ನೀರಾವರಿ ಯೋಜನೆ ಮಣ್ಣು ಪಾಲಾಗಿದೆ. ₹ 60 ಕೋಟಿಗೂ ಅಧಿಕ ಮೊತ್ತದ ಅನುದಾನ ಖರ್ಚಾದರೂ ಕೃಷಿಕರ ಹೊಲ, ಗದ್ದೆಗಳಿಗೆ ಈವರೆಗೂ ನೀರು ಹರಿದಿಲ್ಲ. ಬೆಳೆ ಬೆಳೆಯುವ ಅವರ ಕನಸೂ ಈಡೇರಿಲ್ಲ!

ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹಾಯಿಸುವುದು, ಕೆರೆ ತುಂಬಿಸುವ ಆಶ್ವಾಸನೆ ಈವರೆಗೂ ಪೂರ್ಣಗೊಂಡಿಲ್ಲ. ಬೇಕಾಬಿಟ್ಟಿ ಅನುದಾನ ಬಳಕೆ, ಅವ್ಯವಹಾರ, ಕಳಪೆ ಕಾಮಗಾರಿ, ತಾಂತ್ರಿಕ ವೈಫಲ್ಯ, ಭ್ರಷ್ಟಾಚಾರ, ವಿದ್ಯುತ್‌ ಪೂರೈಕೆ ಗೊಂದಲ, ಅರಣ್ಯ ಇಲಾಖೆ ತಗಾದೆ (ತಕರಾರು), ನಿರ್ವಹಣೆ ಕೊರತೆ, ಅಧಿಕಾರಿಗಳ ನಿರ್ಲಕ್ಷ್ಯ.. ಹೀಗೆ ನಾನಾ ಕಾರಣಗಳಿಂದಾಗಿ ಯೋಜನೆ ವ್ಯರ್ಥವಾಗಿದೆ. 

ಕಾಮಗಾರಿಗಳನ್ನು ಪೂರ್ಣಗೊಳಿಸದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ಕೃಷಿಕರು ಬೀದಿಗಿಳಿದು ಹೋರಾಟ ಮಾಡಿದರೂ ಯೋಜನೆಯ ಮೂಲ ಆಶಯ ಸಾಕಾರಗೊಂಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಗುಡುಗಿದ್ದ ಜನಪ್ರತಿನಿಧಿಗಳು ಕ್ರಮೇಣ ಅಸಹಾಯಕರಾಗಿದ್ದಾರೆ. ಇಡೀ ಯೋಜನೆ ಹಳ್ಳ ಹಿಡಿದಿದ್ದರಿಂದಾಗಿ ವಿಧಿ ಇಲ್ಲದೇ ರೈತರು ನೀರಿಗಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ.

ADVERTISEMENT

ಬಸವಾನಿ, ಆಲಗೇರಿ, ಬುಕ್ಲಾಪುರ, ಬೇಗುವಳ್ಳಿ ಏತ ನೀರಾವರಿ ಯೋಜನೆ 1973, 1980, 1984ರಲ್ಲಿ ಅನುಷ್ಠಾನಗೊಂಡಿದೆ. ಯೋಜನೆ ಯಶಸ್ವಿಯಾಗಿದ್ದರೆ ತಾಲ್ಲೂಕಿನ 1925.54 ಹೆಕ್ಟೇರ್‌ ಪ್ರದೇಶದಲ್ಲಿ ಹಸಿರು ನಳನಳಿಸುತ್ತಿತ್ತು. ಕೃಷಿಕರ ಬದುಕೂ ಹಸನಾಗುತ್ತಿತ್ತು. ಆದರೆ ಹಳ್ಳ ಹಿಡಿದಿರುವ ಕಾಮಗಾರಿಯನ್ನು ಸರಿದಾರಿಗೆ ತರುವ ಪ್ರಯತ್ನ ವಿಫಲವಾಗಿದೆ. ಗುತ್ತಿಗೆ ಅವಧಿ ಮುಗಿದಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಟೆಂಡರ್‌ ಪ್ರಕ್ರಿಯೆಯಲ್ಲಿಯೇ ಅವ್ಯವಹಾರ ನಡೆದಿದೆ ಎಂದು ಸ್ಥಳೀಯ ರೈತರು ದೂರಿದ್ದಾರೆ.

ಕುಂದಾ ಮತ್ತು ಉಂಟೂರುಕಟ್ಟೆ- ಕೈಮರ ಏತ ನೀರಾವರಿ ಯೋಜನೆ ಚಾಲ್ತಿಯಲ್ಲಿದೆ. ಬುಕ್ಲಾಪುರ ಯೋಜನೆ ವಿದ್ಯುತ್‌ ಸಮಸ್ಯೆಯಿಂದ ಸ್ಥಗಿತಗೊಂಡಿದೆ ಎಂದು ಸಣ್ಣ ನೀರಾವರಿ ಇಲಾಖೆಯ ಎಇಇ ಪುರುಷೋತ್ತಮ ಜೆ ತಿಳಿಸಿದ್ದಾರೆ.

ಹೊರಬೈಲು ಪ್ರಭಾಕರ್
ತೀರ್ಥಹಳ್ಳಿ ತಾಲ್ಲೂಕಿನ ಕೋಡ್ಲು ಗ್ರಾಮದಲ್ಲಿ ನಿರ್ಮಿಸಿರುವ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ ಪಾಳು ಬಿದ್ದಿರುವುದು 
ಏತ ನೀರಾವರಿ ಯೋಜನೆಗೆ ಬಳಸಿದ ವಿದ್ಯುತ್‌ ಪರಿವರ್ತಕ (ಟಿಸಿ) ಗಿಡಗಂಟಿಗಳಿಂದ ಮುಚ್ಚಿರುವುದು
ಜಾಕ್‌ವೆಲ್‌ ಸ್ಥಳದಲ್ಲಿ ಅಳವಡಿಸಿರುವ ಮೋಟರ್‌ಗಳು
ಏತ ನೀರಾವರಿ ಯೋಜನೆಗೆ ಬಳಸಿದ ವಿದ್ಯುತ್‌ ಪರಿವರ್ತಕ (ಟಿಸಿ) ಗಿಡಗಂಟಿಗಳಿಂದ ಮುಚ್ಚಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಕೋಡ್ಲು ಗ್ರಾಮದಲ್ಲಿ ನಿರ್ಮಿಸಿರುವ ಏತ ನೀರಾವರಿ ಯೋಜನೆಯ ಜಾಕ್‌ವೆಲ್‌ ಪಾಳು ಬಿದ್ದಿರುವುದು 
ತೀರ್ಥಹಳ್ಳಿ ತಾಲ್ಲೂಕಿನ ಕೋಡ್ಲು ಗ್ರಾಮದಲ್ಲಿ ನಿರ್ಮಿಸಿದ ಏತ ನೀರಾವರಿ ಯೋಜನೆ.

ಏತ ನೀರಾವರಿ ಯೋಜನೆಯನ್ನು ನಂಬಿ ಬೆಳೆ ಬೆಳೆಯಲು ಸಾಧ್ಯವಿಲ್ಲ. ಇದು ನಿರರ್ಥಕ ಯೋಜನೆಯಾಗಿದೆ. ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗಿದೆ. ಅಧಿಕಾರಿಗಳನ್ನು ಹೊಣೆಯಾಗಿಸಿ ಸರ್ಕಾರ ಸೂಕ್ತ ತನಿಖೆ ಕೈಗೊಳ್ಳಬೇಕು

-ಸಾಲೇಕೊಪ್ಪ ರಾಮಚಂದ್ರ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ

ಬುಕ್ಲಾಪುರ ಏತ ನೀರಾವರಿ ಯೋಜನೆ ರೈತರಿಂದ ನಡೆದಿತ್ತು. ಎಕರೆಗೆ ₹ 30 ಸಂಗ್ರಹಿಸಿ ಜಾಕ್‌ವೆಲ್‌ನಲ್ಲಿನ ಹೂಳೆತ್ತುತ್ತಿದ್ದೆವು. ಯೋಜನೆ ನಿಂತಿದ್ದರಿಂದ ಸ್ವಂತ ಶಕ್ತಿ ಇಲ್ಲದ ರೈತರ ಜಮೀನು ಪಾಳು ಬಿದ್ದಿವೆ

-ಹೊರಬೈಲು ಪ್ರಭಾಕರ್‌ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.