ಶಿವಮೊಗ್ಗ: ಲಿಂಗನಮಕ್ಕಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಲಾಗುತ್ತದೆ. ಹೀಗಾಗಿ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯ ನಿರ್ವಾಹಕ ಎಂಜಿನಿಯರ್ ಬುಧವಾರ ಮುನ್ನೆಚ್ಚರಿಕೆ ನೀಡಿದ್ದಾರೆ.
ಕಾರ್ಗಲ್ ನ ಲಿಂಗನಮಕ್ಕಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಜಲಾಶಯಕ್ಕೆ ಸದ್ಯ 60 ಸಾವಿರ ಕ್ಯುಸೆಕ್ ಒಳಹರಿವು ಇದೆ.
ಜಲಾಶಯದ ಗರಿಷ್ಠ ಮಟ್ಟ 1819 ಅಡಿಗಳು ಇದ್ದು, ಜಲಾಶಯದಲ್ಲಿ ಈಗ 1801. 20 ಅಡಿ ನೀರಿನ ಸಂಗ್ರಹ ಇದೆ. ಮಳೆ ಹೆಚ್ಚಿರುವುದರಿಂದ ಜಲಾಶಯದ ಮಟ್ಟ ಶೀಘ್ರವೇ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇದೆ.
ಅಣೆಕಟ್ಟೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸಬಹುದು ಎಂದು ಕೆಪಿಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.