ADVERTISEMENT

ಸಾವರ್ಕರ್, ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಅನ್ನಲು ಸಾಧ್ಯವಿಲ್ಲ: ಚಕ್ರತೀರ್ಥ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 14:52 IST
Last Updated 15 ಜೂನ್ 2023, 14:52 IST
   

ಶಿವಮೊಗ್ಗ: ’ವೀರ ಸಾವರ್ಕರ್ ಹಾಗೂ ಕೇಶವ ಬಲಿರಾಮ ಹೆಡ್ಗೇವಾರ್ ಸ್ವಾತಂತ್ರ್ಯ ಹೋರಾಟಗಾರರು ಅಲ್ಲ ಎನ್ನಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೆ ಸೂಕ್ತ ದಾಖಲೆ ಒದಗಿಸಲು ಸಿದ್ದನಿದ್ದೇನೆ. ಮಕ್ಕಳಲ್ಲಿ ರಾಷ್ಟ್ರೀಯತೆ ಬೆಳೆಸಲು ಪಠ್ಯ ಪುಸ್ತಕಕ್ಕೆ ಆ ಇಬ್ಬರು ದಿಗ್ಗಜರ ಪಾಠ ಸೇರಿಸಿದ್ದೆವು‘ ಎಂದು ಹಿಂದಿನ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ನನ್ನ ಅವಧಿಯ ಪರಿಷ್ಕರಣೆ ಸಮಿತಿ ಶಿಫಾರಸು ಮಾಡಿದ್ದ ಆ ಪಠ್ಯಪುಸ್ತಕ ಈಗ ಸರ್ಕಾರದ ಸ್ವತ್ತು. ಅದನ್ನ ತೆಗೆಯಿರಿ, ಇದನ್ನ ತೆಗೆಯಿರಿ ಅನ್ನಲು, ಇದನ್ನು ಯಾಕೆ ತೆಗೆದಿರಿ ಎಂದು ಪ್ರಶ್ನಿಸಲು ನಮಗೆ ಸಂಬಂಧವಿಲ್ಲ. ಪಠ್ಯ ಸೇರ್ಪಡೆ, ತೆಗೆಯುವ ನಿರ್ಣಯ ತೆಗೆದುಕೊಳ್ಳಲು ಸರ್ಕಾರ ಸರ್ವ ಸ್ವತಂತ್ರರಾಗಿರುತ್ತದೆ‘ ಎಂದರು.

’ನಾವು ಪರಿಷ್ಕರಣ ಮಾಡುವಾಗ ಹಿಂದಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಅಧ್ಯಕ್ಷರನ್ನೂ ಚರ್ಚೆಗೆ ಆಹ್ವಾನಿಸಿದ್ದೆವು. ನಮ್ಮ ಆಹ್ವಾನಕ್ಕೆ ಅವರು ಪ್ರತಿಕ್ರಿಯಿಸಿರಲಿಲ್ಲ. ಈಗಿನ ಪಠ್ಯ ಪುಸ್ತಕ ಪರಿಷ್ಕರಣ ಸಮಿತಿ ಒಂದು ವೇಳೆ ಚರ್ಚೆಗೆ ಆಹ್ವಾನಿಸಿದರೆ ನಾನು ‍‍ಪಾಲ್ಗೊಳ್ಳಲು ಸಿದ್ದ‘ ಎಂದು ಚಕ್ರತೀರ್ಥ ಹೇಳಿದರು.

ADVERTISEMENT

ಹೊಸದಾಗಿ ಸೇರಿಸಿರುವ ಪಠ್ಯಗಳಿಗೆ ಅವುಗಳನ್ನು ಸೇರಿಸಲು ಸ್ಪಷ್ಟ ಕಾರಣ ಕೊಡಲು ಸಿದ್ದನಿದ್ದೇನೆ. ಈಗ ಮರು ಪಠ್ಯ ಪರಿಷ್ಕರಣೆಯನ್ನು ಜನ ಸಾಮಾನ್ಯರು ಒಪ್ಪಿಕೊಂಡರೆ ಒಳ್ಳೆಯದು. ಈ ವಿಚಾರದಲ್ಲಿ ಸರ್ಕಾರ ಪ್ರಜಾಪ್ರಭುತ್ವದ ರೀತಿಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟರೆ ನನ್ನ ಅಭ್ಯಂತರವಿಲ್ಲ ಎಂದರು.

’ಸಾವರ್ಕರ್ ಮತ್ತು ಹೆಡ್ಗೇವಾರ್ ಅವರ ಪಾಠ ತೆಗೆಯಲು ಸರ್ಕಾರ ಮುಂದಾಗಿದೆ. ಏಕೆ ಅಂತಾ ಅದನ್ನ ಸರ್ಕಾರಕ್ಕೆ ನೀವು (ಮಾಧ್ಯಮದವರು) ಕೇಳಬೇಕು‘ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.