ADVERTISEMENT

ಹೇಳಿಕೆ ಹಿಂಪಡೆಯಿರಿ ಇಲ್ಲವೇ ಮಾನನಷ್ಟ ಮೊಕದ್ದಮೆ ಎದುರಿಸಿ:ಬೈರತಿಗೆ BY ರಾಘವೇಂದ್ರ

ಸಚಿವ ಬೈರತಿ ಸುರೇಶ್‌ಗೆ ಸಂಸದ ಬಿ.ವೈ.ರಾಘವೇಂದ್ರ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 15:45 IST
Last Updated 23 ಅಕ್ಟೋಬರ್ 2024, 15:45 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ: ‘ಮುಡಾ ಹಗರಣದಲ್ಲಿ ತಮ್ಮ ಭ್ರಷ್ಟ ನಾಯಕರನ್ನು ಉಳಿಸಿಕೊಳ್ಳಲು ಹಾಗೂ ಪ್ರಕರಣದ ದಿಕ್ಕನ್ನು ಬೇರೆ ಕಡೆ ತಿರುಗಿಸಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ನಮ್ಮ ತಾಯಿ ಅವರ ಸಹಜ ಸಾವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸಲ್ಲ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.

‘ಆಚಾರವಿಲ್ಲದ ತಮ್ಮ ನಾಲಿಗೆಯನ್ನು ಬೈರತಿ ಸುರೇಶ್, ಕಾಂಗ್ರೆಸ್ ಪಕ್ಷದ ಮೂಲ ರಾಜಕೀಯ ಸಂಸ್ಕೃತಿಯಾದ ಲಜ್ಜೆಗೆಟ್ಟ ರಾಜಕಾರಣಕ್ಕೆ ಬಳಸಿಕೊಂಡಿರುವುದು ಆಕ್ಷೇಪಾರ್ಹ. ಇದು ಅವರ ಸ್ಮರಣೆಗೆ ಮಾತ್ರವಲ್ಲ, ಮಾನವೀಯತೆಯ ಮೌಲ್ಯಗಳಿಗೂ ಧಕ್ಕೆ ತರುವಂತಹ ಕೃತ್ಯ. ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ವೈಯಕ್ತಿಕ ನೋವನ್ನು ರಾಜಕೀಯ ಪ್ರಯೋಜನಕ್ಕಾಗಿ ಬಳಸುವುದು ಜನತೆಗೂ, ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಕಪ್ಪುಚುಕ್ಕೆ ಇಟ್ಟಂತೆಯೇ ಸರಿ’ ಎಂದು ಬಿ.ವೈ.ರಾಘವೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

‘ಈ ರೀತಿಯ ನೀಚ ರಾಜಕಾರಣ ಯಾರೂ ಮಾಡಬಾರದು. ಇದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ಇದು ಅವರಿಗೆ ಖಂಡಿತ ಶೋಭೆ ತರುವುದಿಲ್ಲ. ಇಂತಹ ಲಜ್ಜಾಸ್ಪದ ರಾಜಕೀಯದ ಮುಖವಾಡಗಳ ಧಿಕ್ಕರಿಸುತ್ತೇನೆ. ಬೈರತಿ ಸುರೇಶ್ ಕೂಡಲೇ ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸುವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.