ತೀರ್ಥಹಳ್ಳಿ: ಸಾಮಾಜಿಕ, ಕೌಟುಂಬಿಕ ಬಂಧನಕ್ಕೆ ಸಿಲುಕಿ, ದೌರ್ಜನ್ಯ ಖಂಡಿಸಲು ಸಾಧ್ಯವಾಗದ ಅನೇಕ ಪ್ರಕರಣ ಬೇಧಿಸುವಲ್ಲಿ ಇಲ್ಲಿನ ‘ಸಾಂತ್ವನ’ ಕೇಂದ್ರ ಯಶಸ್ವಿಯಾಗಿದೆ. ಆಪ್ತ ಸಮಾಲೋಚನೆ ಮೂಲಕ ದಾಂಪತ್ಯ ಜೀವನವನ್ನು ಪುನಃ ಜೋಡಿಸಿ ಸೈ ಎನಿಸಿಕೊಂಡಿದೆ.
ಅತ್ಯಾಚಾರ, ಲೈಂಗಿಕ ಕಿರುಕುಳ, ದೌರ್ಜನ್ಯ, ಕೌಟುಂಬಿಕ ಕಲಹ, ವರದಕ್ಷಿಣೆ ಪಿಡುಗು, ಬಾಲ ಗರ್ಭಿಣಿಯರು, ಪೋಕ್ಸೊ ಸಂತ್ರಸ್ತೆಯರು, ವೈಯಕ್ತಿಕ ಜೀವನದಲ್ಲಿ ತೀವ್ರತರ ಸಮಸ್ಯೆ ಎದುರಿಸಿದ ನೊಂದ ಮಹಿಳೆಯರಿಗೆ ನೆರವು ನೀಡುವ ಮೂಲಕ ಅವರಿಗೆ ಆಶಾಕಿರಣವಾಗಿದೆ.
‘ಸಾಂತ್ವನ’ ಕೇಂದ್ರದಲ್ಲಿ ನೋಂದಾಯಿತ ಶೇ 90ರಷ್ಟು ಪ್ರಕರಣಗಳು ಕೌಟುಂಬಿಕ ದೌರ್ಜನ್ಯಕ್ಕೆ ಸಂಬಂಧಿಸಿವೆ. ಬಹುತೇಕ ಎಲ್ಲಾ ಪ್ರಕರಣಗಳನ್ನು ಆಪ್ತ ಸಮಾಲೋಚನೆ ಮೂಲಕ ಇತ್ಯರ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಕಾಲೇಜೊಂದರಲ್ಲಿ ನಡೆದ ಅಶ್ಲೀಲ ವಿಡಿಯೊ ಪ್ರಕರಣ ಮತ್ತು ಈಚೆಗೆ ನಡೆದಿದ್ದ ಶಿಕ್ಷಕನಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯದ ಪೋಕ್ಸೊ ಪ್ರಕರಣ ಬೆಳಕಿಗೆ ತರುವಲ್ಲಿ ಸಾಂತ್ವನ ಕೇಂದ್ರ ಪ್ರಮುಖ ಪಾತ್ರ ವಹಿಸಿದೆ.
‘ನಾವಿಬ್ಬರೂ ಪ್ರೀತಿಸಿ ಮದುವೆಯಾಗಿ 10 ವರ್ಷ ಸಂದಿದೆ. 2 ವರ್ಷಗಳ ಹಿಂದಿನಿಂದ ಆರ್ಥಿಕ ವಿಚಾರಕ್ಕೆ ದಾಂಪತ್ಯ ಹೊಂದಾಣಿಕೆ ಆಗುತ್ತಿರಲಿಲ್ಲ. ಒಂದು ಮಗುವನ್ನು ನಾನು, ಮತ್ತೊಂದನ್ನು ಪತಿ ಬೆಳೆಸುತ್ತಿದ್ದರು. ನಮ್ಮಿಬ್ಬರಿಗೆ ವಿಚ್ಛೇದನ ಕೊಡಿಸಿ ಎಂದು ಸಾಂತ್ವನ ಕೇಂದ್ರವನ್ನು ಸಂಪರ್ಕಿಸಿದ್ದೆ. ಅಲ್ಲಿ ನನಗೂ ಮತ್ತು ಪತಿಗೂ ಪ್ರತ್ಯೇಕ ಸಮಾಲೋಚನೆ ಮಾಡಿದರು. ಮಕ್ಕಳ ಭವಿಷ್ಯದ ಮೇಲಿನ ಪರಿಣಾಮಗಳನ್ನು ಎಳೆಎಳೆಯಾಗಿ ಬಿಡಿಸಿ ಹೇಳಿದರು. ಇಬ್ಬರು ಮಕ್ಕಳೊಂದಿಗೆ ಮುಕ್ತವಾಗಿ ಬೆರೆತ ನಂತರ ತಪ್ಪುಗಳ ಅರಿವಾಗಿದೆ. ಈಗ ನಾವಿಬ್ಬರೂ ಮಕ್ಕಳೊಂದಿಗೆ ಶಿವಮೊಗ್ಗದಲ್ಲಿ ಜೀವನ ನಡೆಸುತ್ತಿದ್ದೇವೆ’ ಎಂದು ಫಲಾನುಭವಿ ಮಹಿಳೆಯೊಬ್ಬರು ಹರ್ಷ ವ್ಯಕ್ತಪಡಿಸುತ್ತಾರೆ.
‘ಕಳೆದ ವರ್ಷ ಕಾಲೇಜೊಂದರಲ್ಲಿ ಮಹಿಳಾ ದೌರ್ಜನ್ಯ, ಪೋಕ್ಸೊ ಕಾಯ್ದೆ ಜಾಗೃತಿ ಕಾರ್ಯಕ್ರಮವನ್ನು ನಡೆಸಿದ್ದೇವೆ. ಇದರ ಬೆನ್ನಿಗೆ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ಕರೆ ಮಾಡಿ ಕುಟುಂಬದ ಸದಸ್ಯನಿಂದ ಲೈಂಗಿಕ ಕಿರುಕುಳ ಅನುಭವಿಸುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಪಾಲಕರ ಜೊತೆ ಸಂಕಷ್ಟ ಹೇಳಿಕೊಳ್ಳುವ ಆತ್ಮೀಯ ಒಡನಾಟವನ್ನು ವಿದ್ಯಾರ್ಥಿನಿ ಇಟ್ಟುಕೊಂಡಿಲ್ಲ ಎಂಬುದು ಆಪ್ತ ಸಮಾಲೋಚನೆ ವೇಳೆ ಗೊತ್ತಾಯಿತು. ವಿಚಾರ ಹಂಚಿಕೊಂಡರೆ ಶಿಕ್ಷಣ ಮೊಟಕುಗೊಳ್ಳುತ್ತದೆ ಎಂಬ ಆತಂಕವನ್ನು ವಿದ್ಯಾರ್ಥಿನಿ ವ್ಯಕ್ತಪಡಿಸಿದ್ದರು. ಪಾಲಕರು ಮತ್ತು ಪೊಲೀಸರ ನೆರವಿನಿಂದ ವಿದ್ಯಾರ್ಥಿನಿಗೆ ನ್ಯಾಯ ಕೊಡಿಸಿ, ಆಪಾದಿತನಿಗೆ ಶಿಕ್ಷೆಯಾಗುವಲ್ಲಿ ಕೇಂದ್ರ ಯಶಸ್ವಿಯಾಯಿತು. ವಿದ್ಯಾರ್ಥಿನಿ ಇದೀಗ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ’ ಎಂದು ಸಾಂತ್ವನ ತಂಡ ಮಾಹಿತಿ ಹಂಚಿಕೊಂಡಿತು.
‘ದಕ್ಷಿಣ ಕನ್ನಡ ಜಿಲ್ಲೆಯ ಹಾಸ್ಟೆಲ್‌ನಲ್ಲಿ ಶೈಕ್ಷಣಿಕ ಜೀವನ ಆರಂಭಿಸಿದ್ದ ಮಧ್ಯಮ ವರ್ಗದ ವಿದ್ಯಾರ್ಥಿನಿಯೊಬ್ಬರು ಅಲ್ಲಿನ ವಸತಿ ನಿಲಯ, ಶಿಕ್ಷಣ, ಊಟದ ಸಮಸ್ಯೆಯಿಂದ ಕಂಗೆಟ್ಟು ಮಂಕು ಹಿಡಿದವಳಂತೆ ವರ್ತಿಸುತ್ತಿದ್ದಳು. ವಿಚಾರ ತಿಳಿದ ಪಾಲಕರು, ವಿದ್ಯಾರ್ಥಿನಿ ಎದುರಿಸುತ್ತಿರುವ ಮಾನಸಿಕ ಖಿನ್ನತೆಯನ್ನು ಸಾಂತ್ವನ ಕೇಂದ್ರದಲ್ಲಿ ಪ್ರಸ್ತಾಪಿಸಿದ್ದರು. ಆಪ್ತ ಸಮಾಲೋಚನೆ ನಡೆಸಿದಾಗ, ವಿದ್ಯಾರ್ಥಿನಿಯು ಹಾಸ್ಟೆಲ್ ತೊರೆಯುವ ಉಪಾಯ ಮಾಡುತ್ತಿರುವುದು ಪತ್ತೆಯಾಯಿತು. ತಿಳಿಹೇಳಿದ ನಂತರ ವಿದ್ಯಾರ್ಥಿನಿ ಎದುರಿಸುತ್ತಿದ್ದ ಭಯ ನಿವಾರಣೆಯಾಗಿದೆ’ ಎಂದು ತಂಡದ ಸದಸ್ಯರು ತಿಳಿಸಿದರು.
‘ಹಾವೇರಿ ಮೂಲದ ಮಹಿಳೆಯೊಬ್ಬರು ಪ್ರೀತಿಸಿ ಮದುವೆಯಾಗಿ 2 ಮಕ್ಕಳ ತಾಯಿಯಾದ ಬಳಿಕ ಪತಿ ಮಧ್ಯಂತರದಲ್ಲಿ ಬಿಟ್ಟು ಹೋಗಿದ್ದ. ನಂತರ ಶೃಂಗೇರಿ ಮೂಲದ ವ್ಯಕ್ತಿಯೊಬ್ಬ ಪರಿಚಯವಾಗಿ ಆತನೊಂದಿಗೆ ಮಹಿಳೆಗೆ ಸ್ನೇಹ ಬೆಳೆಯಿತು. ಪೋಷಣೆ ಮಾಡುವುದಾಗಿ ನಂಬಿಸಿ ಮಹಿಳೆಯನ್ನು ಮನೆಗೆಲಸಕ್ಕೆ ಸೇರಿಸಿದ್ದ. ಇಬ್ಬರು ಚಿಕ್ಕ ಮಕ್ಕಳನ್ನು ಹಾಸ್ಟೆಲ್‌ನಲ್ಲಿ ಬಿಟ್ಟು ಓದಿಸುತ್ತಿರುವುದಾಗಿ ಮಹಿಳೆಗೆ ನಂಬಿಸಿ, ಅವರನ್ನು ಕೂಲಿ ಕೆಲಸಕ್ಕೆ ತಳ್ಳಿದ್ದ. ತಿಂಗಳ ಸಂಬಳವನ್ನು ತಾನೇ ತೆಗೆದುಕೊಂಡು ವಂಚಿಸುತ್ತಿದ್ದ. ಸಂತ್ರಸ್ತ ಮಹಿಳೆಗೆ ಕಾನೂನು ರಕ್ಷಣೆ ನೀಡಿ ಸಂತೈಸಿದ್ದೇವೆ’ ಎಂದು ಸಿಬ್ಬಂದಿ ವಿವರಿಸಿದರು.
‘ಇಂತಹ ಹತ್ತಾರು ಸಮಸ್ಯೆ ನಿವಾರಣೆಗೆ ಸಾಂತ್ವನ ಕೇಂದ್ರ ದಾರಿದೀಪವಾಗಿದೆ. ಪೋಕ್ಸೊ ಪ್ರಕರಣವಾಗಿದ್ದರೆ, ಪೊಲೀಸ್ ಇಲಾಖೆಗೆ ಮತ್ತು ಮಕ್ಕಳ ಕಲ್ಯಾಣ ಸಮಿತಿಗೆ ವಹಿಸುತ್ತೇವೆ. ನೊಂದ ಅಪ್ರಾಪ್ತರಿಗೆ ಅವಶ್ಯಕತೆ ಇದ್ದಲ್ಲಿ ಒಂದು ದಿನದ ಮಟ್ಟಿಗೆ ತಾತ್ಕಾಲಿಕ ಆಶ್ರಯವನ್ನೂ ಕೇಂದ್ರದಲ್ಲಿ ನೀಡುತ್ತೇವೆ. ನಂತರ ಅವರನ್ನು ಜಿಲ್ಲಾ ಮಟ್ಟದ ಸಖಿ ಕೇಂದ್ರಕ್ಕೆ ಕಳುಹಿಸುತ್ತೇವೆ. ಅಲ್ಲಿಂದ ಕರ್ನಾಟಕ ರಾಜ್ಯ ಮಹಿಳಾ ನಿಲಯಕ್ಕೆ ಕಳುಹಿಸಿಕೊಡಲಾಗುತ್ತದೆ’ ಎಂದು ಕೇಂದ್ರದ ಆಪ್ತ ಸಮಾಲೋಚಕಿ ಎಚ್.ಡಿ. ಕಿರಣಕುಮಾರಿ ‘ಪ್ರಜಾವಾಣಿ’ಗೆ ತಿಳಿಸಿದರು.
24 ಗಂಟೆಯೂ ಕಾರ್ಯ ನಿರ್ವಹಣೆ
ತೀರ್ಥಹಳ್ಳಿಯ ಸೊಪ್ಪುಗುಡ್ಡೆಯಲ್ಲಿ ಇರುವ ಮಹಿಳಾ ಸಹಾಯವಾಣಿ ಸಾಂತ್ವನ ಕೇಂದ್ರ 2019ರಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಾಯೋಜಕತ್ವದಲ್ಲಿ ಆರಂಭಗೊಂಡಿತು. ಮದರ್ (ರಿ) ತಾಯಿಮನೆ ಸರ್ಕಾರೇತರ ಸಂಘ ಸಂಸ್ಥೆ ಮೂಲಕ ಕಾರ್ಯ ನಿರ್ವಹಿಸುತ್ತಿದ್ದು, ಇಲ್ಲಿಯವರೆಗೆ 571 ಪ್ರಕರಣಗಳು ದಾಖಲಾಗಿವೆ. 2024ನೇ ಸಾಲಿನಲ್ಲಿ ಈವರೆಗೆ 89 ಪ್ರಕರಣ ನೋಂದಣಿಯಾಗಿವೆ. ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ ಒಟ್ಟು 566 ಮಹಿಳಾ ದೌಜನ್ಯ ಪ್ರಕರಣಗಳನ್ನು ಆಪ್ತ ಸಮಾಲೋಚನೆ ಮೂಲಕ ಇತ್ಯರ್ಥಗೊಳಿಸಿದೆ.
ಆಪ್ತ ಸಮಾಲೋಚನೆ ಕುರಿತು ಅರಿವಿನ ಅಗತ್ಯ ಇದೆ. ಸಮಾಲೋಚನೆ ಅಂದಾಕ್ಷಣ ಮಾನಸಿಕ ಖಿನ್ನತೆ ಎಂಬ ಭಾವನೆ ಇದೆ. ಸಮಾಲೋಚನೆ ಆರೋಗ್ಯ, ವ್ಯಕ್ತಿತ್ವ, ವಿಚಾರ ಬೆಳವಣಿಗೆಗೆ ಸಹಾಯ ಮಾಡಲಿದೆ.ಎಚ್.ಡಿ. ಕಿರಣಕುಮಾರಿ, ಆಪ್ತ ಸಮಾಲೋಚಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.