ADVERTISEMENT

ವರ್ಕ್ ಫ್ರಂ ಹೋಂಗೆ ವಿದ್ಯುತ್‌, ಸಿಗ್ನಲ್ ಅಡ್ಡಿ

ನಗರ ಬಿಟ್ಟು ಊರು ಸೇರಿದವರ ಪರದಾಟ; ಲ್ಯಾಪ್‌ಟಾಪ್ ಹಿಡಿದು ಗುಡ್ಡ ಏರುವ ಅನಿವಾರ್ಯ

ಶಿವಾನಂದ ಕರ್ಕಿ
Published 8 ಮೇ 2021, 3:50 IST
Last Updated 8 ಮೇ 2021, 3:50 IST
ಅಂಕಿತ್
ಅಂಕಿತ್   

ತೀರ್ಥಹಳ್ಳಿ: ಕೊರೊನಾ ಎರಡನೇ ಅಲೆಗೆ ತತ್ತರಿಸಿದ ಜನರು ಬೆಂಗಳೂರು ಸೇರಿ ಇತರ ನಗರ ಪ್ರದೇಶಗಳನ್ನು ತೊರೆದು ತಮ್ಮ ತಮ್ಮ ಊರು ಸೇರಿದ್ದಾರೆ. ಮನೆಯಲ್ಲಿಯೇ ಕುಳಿತು ಕೆಲಸ ಮಾಡುವುದಕ್ಕೆ ಅಣಿಯಾಗಿದ್ದರೂ ವಿದ್ಯುತ್ ಹಾಗೂ ಅಂತರ್ಜಾಲ ಸಂಪರ್ಕದ ಕೊರತೆಯಿಂದ ತೊಂದರೆಗೆ ಸಿಲುಕಿದ್ದಾರೆ.

ತಾಲ್ಲೂಕಿನ ಅನೇಕ ಕಡೆಗಳಲ್ಲಿ ಕಳೆದ ಹಲವು ದಿನಗಳಿಂದ ಸಂಜೆ ವೇಳೆಗೆ ಮಳೆ–ಗಾಳಿಯಿಂದಾಗಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ವಿದ್ಯುತ್ ಇಲ್ಲದ ಕಾರಣ ಮೊಬೈಲ್ ಟವರ್‌ಗಳೂ ಕಾರ್ಯನಿರ್ವಹಿಸುತ್ತಿಲ್ಲ. ವರ್ಕ್ ಫ್ರಂ ಹೋಂ ಎಂದು ಮಲೆನಾಡಿಗೆ ಮರಳಿದವರಿಗೆ ಮನೆಯಲ್ಲಿ ಕುಳಿತು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಲ್ಯಾಪ್‌ಟಾಪ್ ಕೈಯಲ್ಲಿ ಹಿಡಿದು ಸಿಗ್ನಲ್ ಹುಡುಕಿಕೊಂಡು ಗುಡ್ಡ ಹತ್ತುವ ಸ್ಥಿತಿ ಎದುರಾಗಿದೆ.

ಈ ನಡುವೆ ಕೆಲ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಕಾರಣ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಕೊರತೆ ತಲೆದೋರಿದೆ. ಬೆಜ್ಜವಳ್ಳಿ ಮೆಸ್ಕಾಂ ಉಪ ಕಚೇರಿಯ ನಾಲ್ವರು ಸಿಬ್ಬಂದಿಗೆ ಸೋಂಕು ತಗಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. 2018ರಿಂದ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯಾಗಿಲ್ಲ. 10 ಮಂದಿ ಕೆಲಸ ಮಾಡಬೇಕಿದ್ದ ಜಾಗದಲ್ಲಿ 4 ಸಿಬ್ಬಂದಿ ಕೆಲಸ ನಿರ್ವಹಿಸ ಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದ್ದು, ಕೆಲಸದ ಒತ್ತಡ ಹೆಚ್ಚುತ್ತಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ADVERTISEMENT

ಮಲೆನಾಡು ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಮುಂಗಾರು ಆರಂಭಕ್ಕೂ ಮುನ್ನ ಸುರಿವ ಮಳೆ ಗಾಳಿಯಿಂದಾಗಿ ವಿದ್ಯುತ್ ಮಾರ್ಗವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗುತ್ತಿದೆ ಎಂಬ ಅಳಲನ್ನು ಸಿಬ್ಬಂದಿ ತೋಡಿಕೊಳ್ಳುತ್ತಾರೆ. ಇದರಿಂದಾಗಿ ಸಮರ್ಪಕ ಸೇವೆ ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಪದೇ ಪದೇ ವಿದ್ಯುತ್ ಕೈಕೊಡುವುದರಿಂದ ತೀವ್ರ ತೊಂದರೆಗೆ ಒಳಗಾದ ಜನರು ಮೆಸ್ಕಾಂ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿದ್ಯುತ್ ಪೂರೈಕೆಯನ್ನು ಯಾವ ಸಮಯದಲ್ಲಿ ಮಾಡಲಾಗುತ್ತದೆ, ಯಾವ ಸಮಯದಲ್ಲಿ ಕಡಿತಗೊಳಿಸಲಾಗುವುದು ಎಂಬ ಕನಿಷ್ಠ ಮಾಹಿತಿಯನ್ನೂ ಗ್ರಾಹಕರಿಗೆ ನೀಡದೆ ಇರುವುದರಿಂದ ವಿದ್ಯುತ್ ನಂಬಿಕೊಂಡವರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.

ಗ್ರಾಮೀಣ ಭಾಗದ ಜನರು ವಿದ್ಯುತ್ ಕಣ್ಣಾ ಮುಚ್ಚಾಲೆಯನ್ನು ನಿರಂತರವಾಗಿ ಸಹಿಸಿಕೊಂಡು ಬರುವಂತಾಗಿದೆ. ಮಂಡಗದ್ದೆ, ಮುತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಸಮಸ್ಯೆ ತೀವ್ರವಾಗಿ ಬಿಗಡಾಯಿಸಿದೆ. ತಾಲ್ಲೂಕಿನ ಕಟ್ಟೆಹಕ್ಕಲು, ಹಣಗೆರೆಕಟ್ಟೆ, ಕನ್ನಂಗಿ, ಕೋಣಂದೂರು, ಆಗುಂಬೆ ಭಾಗದಲ್ಲಿ ವಿದ್ಯುತ್ ಕೈಕೊಡುತ್ತಿದೆ.

ಸ್ಥಗಿತಗೊಂಡ ದೂರ ಸಂಪರ್ಕ ಟವರ್: ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ತೊಡಕಿನಿಂದಾಗಿ ದೂರ ಸಂಪರ್ಕದ ಮೊಬೈಲ್ ಟವರ್‌ಗಳು ಕೆಲ ಭಾಗದಲ್ಲಿ ಕಾರ್ಯವನ್ನು ಸ್ಥಗಿತಗೊಳಿಸಿವೆ. ವಿದ್ಯುತ್ ಇಲ್ಲದ ವೇಳೆಯಲ್ಲಿ ಜನರೇಟರ್ ಮೂಲಕ ಟವರ್‌ಗಳನ್ನು ಚಾಲನೆಯಲ್ಲಿ ಇಡಬೇಕಿದ್ದ ಟವರ್ ನಿರ್ವಾಹಕರು ಜನರೇಟರ್‌ಗೆ ಬಳಸುವ ಡೀಸೆಲ್ ಉಳಿತಾಯಕ್ಕೆ ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.

‘ಕೆಲವು ತುರ್ತು ಸಂದರ್ಭದಲ್ಲಿ ಮೊಬೈಲ್ ಸಂಪರ್ಕ ಸಾಧ್ಯವಾಗದ ಕಾರಣ ಅವಘಡಗಳ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ. ಅಪಾಯಗಳು ಕಂಡುಬಂದಾಗ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆಯನ್ನು ಸಂಪರ್ಕಿಸಲು ಸಾರ್ವಜನಿಕರಿಗೆ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ’ ಎನ್ನುತ್ತಾರೆ ತೋಟದಕೊಪ್ಪ ತಿಮ್ಮಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.