ತೀರ್ಥಹಳ್ಳಿ: ಹವಾಮಾನ ವೈಪರೀತ್ಯದ ಕಾರಣ ಭತ್ತದ ಬೆಳೆ ಕೀಟಬಾಧೆಗೆ ತುತ್ತಾಗಿದ್ದು, ತಾಲ್ಲೂಕಿನ ರೈತರು ಇಳುವರಿ ಕುಂಠಿತವಾಗುವ ಆತಂಕದಲ್ಲಿದ್ದಾರೆ.
ಕಳೆದ ಸವರ್ಷ ಬರ, ಕಾಡುಪ್ರಾಣಿಗಳ ಉಪಟಳದ ಕಾರಣ ಬೆಳೆನಷ್ಟ ಅನುಭವಿಸಿದ್ದ ರೈತರು ಈ ಬಾರಿ ಉತ್ತಮ ಮಳೆಯಾಗಿದ್ದರಿಂದ ಸೂಕ್ತ ಆದಾಯದ ನಿರೀಕ್ಷೆಯಲ್ಲಿದ್ದರು. ಇದೀಗ ಕೀಟಬಾಧೆಯಿಂದಾಗಿ ಚಿಂತಿತರಾಗಿದ್ದಾರೆ.
ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 18ರಷ್ಟು ಅಧಿಕ ಮಳೆಯಾಗಿದೆ. ಮಳೆ-ಬಿಸಿಲು ವಾತಾವರಣದಲ್ಲಿ ಏರುಪೇರು ಮುಂತಾದ ಕಾರಣದಿಂದ ಭತ್ತದ ಬೆಳೆಗೆ ಎಲೆಸುರಳಿ ಹುಳು, ಕೊಳವೆ ಹುಳು, ಕಂದು ಜಿಗಿ ಹುಳು, ಎಲೆ ಕವಚ ರೋಗ ಹಾಗೂ ಬೆಂಕಿ ರೋಗ ಭಾಧೆ ಕಂಡುಬರುತ್ತಿದೆ.
ಹಸಿರು ಬಣ್ಣದ ಮರಿಹುಳುಗಳು ಭತ್ತದ ಗರಿ ತಿನ್ನುತ್ತಿವೆ. ಇವು ಗರಿ ಮೇಲೆ ಬಿಳಿ ಮಚ್ಚೆ ಸೃಷ್ಟಿಸುತ್ತಿವೆ. ಗರಿಯ ತುದಿಯನ್ನು ಕತ್ತರಿಸಿ ಕೊಳವೆ ಮಾಡಿಕೊಂಡು ಜೀವಿಸುವ ಹುಳು ಸಸ್ಯದ ಬುಡದ ಭಾಗದಲ್ಲಿ ರಸ ಹೀರುವುದರಿಂದ ಗರಿಗಳ ಅಂಚು ಹಳದಿ ಬಣ್ಣಕ್ಕೆ ತಿರುಗಿ ಗೊನೆಗಳು ಕ್ರಮೇಣ ಒಣಗುತ್ತಿವೆ. ನಂತರ ಮರಿಗಳು ಬೆಳೆದು ರೆಕ್ಕೆ ಬೆಳೆದಂತೆ ಸುತ್ತಲಿನ ತಾಕು ನಾಶಪಡಿಸುತ್ತಿವೆ. ಭತ್ತದ ಗರಿಗಳ ಮೇಲೆ ವಜ್ರಾಕಾರದ ಕಂದು ಬಣ್ಣದ ಚುಕ್ಕೆಗಳು ನಿರ್ಮಾಣವಾಗಿ ಗರಿಗಳು ಒಣಗುತ್ತಿವೆ.
‘ಭತ್ತದ ಸಸಿಗಳು ಒಣಗುತ್ತಿದ್ದು, ನಿಯಂತ್ರಣಕ್ಕೆ ಔಷಧ ಸಿಂಪಡಿಸುತ್ತಿದ್ದೇನೆ’ ಎಂದು ರೈತ ರಾಘವೇಂದ್ರ ಮಾನಿ ತಿಳಿಸಿದರು.
‘5 ಎಕರೆಯಲ್ಲಿ ಭತ್ತ ಬೆಳೆದಿದ್ದೇನೆ. ಮಳೆ ಜಾಸ್ತಿಯಾಗಿದ್ದರಿಂದ ಎಲೆಸುರಳಿ ರೋಗ ಹೆಚ್ಚಿದ್ದು, ಕೃಷಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ರೋಗ ನಿಯಂತ್ರಣಕ್ಕೆ ಕ್ರಮ ವಹಿಸುತ್ತೇನೆ’ ಎಂದು ಹರಳೀಮಠದ ರೈತ ಕೃಷ್ಣಕುಮಾರ್ ಹೇಳಿದರು.
ಕಳೆ ನಾಶಪಡಿಸುವುದು, ಕ್ಲೋರ್‌ಫೈರಿಫಾಸ್, ಮೋನೊಕ್ರೋಟೊಫಾಸ್, ಕ್ವಿನಾಲ್ಫಾಸ್, ಲ್ಯಾಂಬ್ಡಸೈಹಲೋಥ್ರಿನ್, ಇಮಿಡಾಕ್ಲೂಪ್ರಿಡ್, ಬುಪ್ರೋಫೆಜಿನ್, ಕಾರ್ಬನ್ ಡೈಜಿಂ, ಹೆಕ್ಸಾಕೋನಾಜೋಲ್, ಟೈಸೈಕ್ಲೋಜೋಲ್ ಮುಂತಾದ ರಾಸಾಯನಿಕ ಬಳಸಿ ರೋಗ ನಿಯಂತ್ರಿಸಿಕೊಳ್ಳಬಹುದು ಎಂದು ಕೃಷಿ ಇಲಾಖೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ತಾಲ್ಲೂಖಿನಲ್ಲಿ 7450 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ. ಹವಾಮಾನ ವೈಪರೀತ್ಯದ ಕಾರಣ ಕೀಟಬಾಧೆ ತಗುಲಿದ್ದು ರೈತರು ಸಾಮೂಹಿಕವಾಗಿ ರೋಗ ನಿಯಂತ್ರಣ ಕ್ರಮ ಅನುಸರಿಸಬೇಕು.–ಪ್ರವೀಣ್, ಸಹಾಯಕ ಕೃಷಿ ನಿರ್ದೇಶಕರು ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.