ಸಾಗರ: ತಮ್ಮ ಬರಹಗಳ ಮೂಲಕ ನಿರಂತರವಾಗಿ ಮಲೆನಾಡಿನ ನಾಡಿ ಮಿಡಿತ ಹಿಡಿಯುವ ಕೆಲಸ ಮಾಡುತ್ತಲೆ ಇರುವ ನಾಡಿನ ಹಿರಿಯ ಬರಹಗಾರ ನಾ.ಡಿಸೋಜ ಅವರಿಗೆ ಪ್ರತಿಷ್ಠಿತ ಪಂಪ ಪ್ರಶಸ್ತಿಯ ಗೌರವ ದಕ್ಕಿದೆ.
86ರ ಹರೆಯದ ನಾ.ಡಿಸೋಜ ಅವರಿಗೆ ಈವರೆಗೆ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳು ಲಭ್ಯವಾಗಿರುವ ಜೊತೆಗೆ ನಾಡಿನ ಜನರ ಪ್ರೀತಿ ಗೌರವ ಕೂಡ ದೊರಕಿರುವುದು ವಿಶೇಷ ಸಂಗತಿಯಾಗಿದೆ.
ಪ್ರಕೃತಿಯೇ ಒಂದು ಪಾತ್ರವಾಗಿ ಬಂದಿರುವುದು ಡಿಸೋಜ ಅವರ ಕೆಲವು ಕೃತಿಗಳ ವಿಶೇಷತೆ ಎಂದು ಒಮ್ಮೆ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿರುವ ಮಾತು ನಾಡಿ ಅವರ ಬರಹಗಳಲ್ಲಿ ಪರಿಸರಕ್ಕೆ ನೀಡಿರುವ ಪ್ರಾಧಾನ್ಯತೆಯ ಸಂಕೇತ.
ಲೋಕೋಪಯೋಗಿ ಇಲಾಖೆಯ ನೌಕರ ಆಗಿ ಜೋಗ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಕೆಲಸ ಮಾಡಿರುವ ನಾಡಿ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ಆಗುತ್ತಿರುವ ಆಕ್ರಮಣ ಹತ್ತಿರದಿಂದ ನೋಡಿದವರು. ಮಲೆನಾಡಿನ ಜನರು ಮುಳುಗಡೆಯಿಂದ ಅನುಭವಿಸಿದ ಸಂಕಷ್ಟಗಳ ಬಲ್ಲವರು. ಹೀಗಾಗಿ ಇವೆಲ್ಲವೂ ಅವರ ಬರಹಗಳನ್ನು ದಟ್ಟವಾಗಿ ಪ್ರಭಾವಿಸಿವೆ.
ಭೂ ಮಾಲೀಕರು ಗೇಣಿದಾರರಿಂದ ಭತ್ತವನ್ನು ಕೊಳಗದ ಮೂಲಕ ಗೇಣಿ ರೂಪದಲ್ಲಿ ವಸೂಲಿ ಮಾಡುವ ಪದ್ಧತಿ ಮಲೆನಾಡಿನಲ್ಲಿ ಜಾರಿಯಲ್ಲಿತ್ತು. ಕೊಳಗದ ಅಳತೆಯ ವಿಷಯಕ್ಕೆ ಆರಂಭವಾದ ವಿವಾದ ಮುಂದೆ ಕಾಗೋಡು ಸತ್ಯಾಗ್ರಹಕ್ಕೆ ದಾರಿ ಮಾಡಿಕೊಟ್ಟಿತ್ತು. ಇದೇ ವಿಷಯ ‘ಕೊಳಗ’ ಹೆಸರಿನ ಕಾದಂಬರಿಯ ರೂಪದಲ್ಲಿ ಸಮಕಾಲಿನ ತಲ್ಲಣಗಳಿಗೆ ಸ್ಪಂದಿಸಿತ್ತು.
80ರ ದಶಕದ ಕೊನೆಯಲ್ಲಿ ಇಕ್ಕೇರಿಯ ಸುತ್ತ ಗಣಿಗಾರಿಕೆ ಆರಂಭವಾಗುತ್ತದೆ ಎಂಬ ಸುದ್ಧಿ ಹರಡಿತ್ತು. ಇಕ್ಕೇರಿಯ ದೇವಸ್ಥಾನದ ಮೇಲೆ ಹೆಲಿಕಾಪ್ಟರ್ ಹಾರಾಟ ನಡೆಸಿದಾಗ ಗಣಿಗಾರಿಕೆ ಸಮೀಕ್ಷೆಗೆ ಅದು ಬಂದಿತ್ತು ಎಂಬ ಆತಂಕ ಜನರಲ್ಲಿ ಮನೆ ಮಾಡಿತ್ತು. ಆಗ ಇದೇ ವಿಷಯ ಆಧರಿಸಿದ ಸಣ್ಣ ಕಥೆಯ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ನಾಡಿ ಮಾಡಿದ್ದರು. ಧಾರ್ಮಿಕ ಆವರಣ ಹೇಗೆ ವ್ಯವಸ್ಥಿತವಾಗಿ ಮನುಷ್ಯನ ಸ್ವಾತಂತ್ರ್ಯ ಸಂಕುಚಿತಗೊಳಿಸುತ್ತದೆ ಎಂಬುದನ್ನು ತಣ್ಣನೆಯ ಧ್ವನಿಯಲ್ಲಿ ಅವರು ದಾಖಲಿಸಿದ್ದಾರೆ.
ಮಕ್ಕಳ ಸಾಹಿತ್ಯದ ಬಗ್ಗೆ ನಾಡಿ ಅವರಿಗೆ ವಿಶೇಷ ಒಲವು. ಮನೆಯಲ್ಲಿ ಕಥೆ ಹೇಳುವ ಅಜ್ಜಿಯಂದಿರು ಈ ತಲೆಮಾರಿನವರಿಗೆ ಇಲ್ಲವಾಗುತ್ತಿರುವ ಬಗ್ಗೆ ಅವರು ಸದಾ ಬೇಸರ ವ್ಯಕ್ತಪಡಿಸುತ್ತಾರೆ. ಮಕ್ಕಳಿಗೆ ಕಥೆ ಹೇಳುವ ಉತ್ಸಾಹ ತೋರುವಾಗ ನಾಡಿ ತಮ್ಮ ವಯಸ್ಸು ಮರೆತು ತಾವೂ ಮಕ್ಕಳಾಗುತ್ತಾರೆ.
ಕೇವಲ ಕಥೆ, ಕಾದಂಬರಿ ಬರೆದು ಮನೆಯಲ್ಲಿ ಕೂರುವ ಆರಾಂ ಕುರ್ಚಿ ಲೇಖಕರ ಸಾಲಿಗೆ ನಾಡಿ ಸೇರಿದವರಲ್ಲ. ಸಾಗರಕ್ಕೆ ಬ್ರಿಟಿಷರ ಕಾಲದಲ್ಲೆ ಬರುತ್ತಿದ್ದ ರೈಲು ಸಂಚಾರ ನಿಲುಗಡೆಯಾದಾಗ ಪ್ರಬಲವಾದ ಹೋರಾಟ ಸಂಘಟಿಸಿ ಮತ್ತೆ ಈ ಭಾಗಕ್ಕೆ ರೈಲು ಸಂಚಾರ ಆರಂಭವಾಗುವಂತೆ ಮಾಡಿರುವಲ್ಲಿ ಅವರ ಪಾತ್ರ ಪ್ರಮುಖ.
ಶರಾವತಿಯ ನದಿಯ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವ ಯೋಜನೆಯ ಪ್ರಸ್ತಾಪ ಬಂದಾಗ ಅದನ್ನು ವಿರೋಧಿಸಿ ನಡೆದ ಚಳವಳಿಯಲ್ಲೂ ನಾಡಿ ಸಕ್ರಿಯರಾಗಿದ್ದರು. ಹೀಗೆ ಜನ ಸಮುದಾಯದ ಜೊತೆಗೆ ಸದಾ ತಮ್ಮನ್ನು ಗುರುತಿಸಿಕೊಂಡಿರುವ ಅಪರೂಪದ ಲೇಖಕ.
ಜನಪರ ಕಾಳಜಿ ಮಾನವಿಯ ಧೋರಣೆ ಜಾತ್ಯಾತೀತ ನಿಲುವು ಡಿಸೋಜ ಅವರ ಬರಹಗಳ ಕೇಂದ್ರವಾಗಿದೆ. ಎಂತಹ ಕಿರಿಯರು ಅವರೊಂದಿಗೆ ಸಹಜವಾಗಿ ಒಡನಾಡಬಹುದು. ಪಂಪ ಪ್ರಶಸ್ತಿ ಗೌರವ ಯೋಗ್ಯವಾದ ವ್ಯಕ್ತಿಗೆ ದೊರಕಿದಂತಾಗಿದೆ-ಸರ್ಫ್ರಾಜ್ ಚಂದ್ರಗುತ್ತಿ ಲೇಖಕ ಸಾಗರ
ಮಲೆನಾಡಿನ ಸಂಕಟಗಳಿಗೆ ತಮ್ಮ ಬರಹಗಳ ಮೂಲಕ ಸ್ಪಂದಿಸುವ ಕೆಲಸವನ್ನು ನಾಡಿ ಸದಾ ಮಾಡುತ್ತಲೆ ಬಂದಿದ್ದಾರೆ. ಅವರಿಗೆ ಪಂಪ ಪ್ರಶಸ್ತಿ ಈ ಮೊದಲೆ ಬರಬೇಕಿತ್ತು. ಈಗಲಾದರು ಬಂದಿರುವುದು ಸಂತಸದ ವಿಷಯ-ಅ.ರಾ.ಶ್ರೀನಿವಾಸ್ ಲೇಖಕ ಸಾಗರ
ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತೊಡಗಿರುವ ನಾಡಿ ಅವರಿಗೆ ಪಂಪ ಪ್ರಶಸ್ತಿ ಅವರ ಸಾಧನೆ ಹಾಗೂ ಯೋಗ್ಯತೆಗೆ ದೊರಕಿರುವ ತಕ್ಕ ಮನ್ನಣೆಯಾಗಿದೆ- ಜಿ.ಎಸ್.ಭಟ್ ಲೇಖಕ ಸಾಗರ
ಪ್ರಶಸ್ತಿ ಬಂದಿರುವ ವಿಷಯ ಕೇಳಿ ಸಂತಸವಾಗಿದೆ. ಕನ್ನಡ ಭಾಷೆಯನ್ನು ಎಲ್ಲಾ ಕ್ಷೇತ್ರಗಳಲ್ಲೂ ಇಂಗ್ಲೀಷ್ ವ್ಯಾಪಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಕನ್ನಡ ಭಾಷೆ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಎಚ್ಚರವನ್ನು ಕನ್ನಡದ ಲೇಖಕರು ಮೂಡಿಸಬೇಕಿದೆ-ನಾ.ಡಿಸೋಜ ಸಾಹಿತಿ ಸಾಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.