ADVERTISEMENT

ಯಡಿಯೂರಪ್ಪ ಕುತಂತ್ರ ರಾಜಕಾರಣದಿಂದ ತಪ್ಪಿದ ಟಿಕೆಟ್

ಶಿಕಾರಿಪುರ: ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಸ್.ಪಿ. ನಾಗರಾಜಗೌಡ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 7:43 IST
Last Updated 17 ಏಪ್ರಿಲ್ 2023, 7:43 IST
ಶಿಕಾರಿಪುರದಲ್ಲಿ ಅಭಿಮಾನಿಗಳ ಬಳಗ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ನಾಗರಾಜ್ ಗೌಡ ಮಾತನಾಡಿದರು.
ಶಿಕಾರಿಪುರದಲ್ಲಿ ಅಭಿಮಾನಿಗಳ ಬಳಗ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ನಾಗರಾಜ್ ಗೌಡ ಮಾತನಾಡಿದರು.   

ಶಿಕಾರಿಪುರ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಅವರ ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ’ ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಎಸ್.ಪಿ. ನಾಗರಾಜ್ ಗೌಡ ಹೇಳಿದರು.

ಪಟ್ಟಣದ ತಮ್ಮ ನಿವಾಸದ ಆವರಣದಲ್ಲಿ ಭಾನುವಾರ ಎಸ್.ಪಿ. ನಾಗರಾಜಗೌಡ ಸ್ವಾಭಿಮಾನಿ ಅಭಿಮಾನಿಗಳ ಬಳಗ ಆಯೋಜಿಸಿದ್ದ ಅಭಿಮಾನಿಗಳ ಸಭೆಯಲ್ಲಿ ಮಾತನಾಡಿದರು.

‘ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ಅವರನ್ನು ಉತ್ತರಾಧಿಕಾರಿ ಮಾಡಲು ಕುತಂತ್ರ ಮಾರ್ಗ ಅನುಸರಿಸಿದ್ದಾರೆ. ಯಡಿಯೂರಪ್ಪ 8 ಬಾರಿ ಕುತಂತ್ರ ರಾಜಕಾರಣ ಮಾಡಿ ಕ್ಷೇತ್ರದಲ್ಲಿ ಗೆಲವು ಸಾಧಿಸಿದ್ದಾರೆ. ಈ ಬಾರಿಯೂ ತಮ್ಮ ರಾಜಕಾರಣ ಮುಂದುವರಿಸಿದ್ದಾರೆ. ಅನುಭವಿ ರಾಜಕಾರಣಿಯಾದ ಯಡಿಯೂರಪ್ಪ ಒಬ್ಬ ಪುರಸಭೆ ಸದಸ್ಯನಾದ ನನಗೆ ಟಿಕೆಟ್ ದೊರೆಯದಂತೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದಾರೆ’ ಎಂದು ದೂರಿದರು.

ADVERTISEMENT

‘ನನಗೆ ಟಿಕೆಟ್‌ ತಪ್ಪಿಸಿರಬಹುದು. ಅದರೆ ಪ್ರಜಾಪ್ರಭುತ್ವದ ಪ್ರಕಾರ ನಡೆಯುವ ಚುನಾವಣೆಯಲ್ಲಿ ನನ್ನ ಸ್ಪರ್ಧೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಚುನಾವಣೆಯಲ್ಲಿ ಜನಾಭಿಪ್ರಾಯ ಪಡೆದು ಉತ್ತರ ಕೊಡುತ್ತೇನೆ. ಅಭಿಮಾನಿಗಳು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಲಹೆ ನೀಡಿದ್ದು, ನಿಮ್ಮ ಸಲಹೆಯಂತೆ ಸ್ಪರ್ಧಿಸುತ್ತೇನೆ. ಏ.17ರಂದು ನಾಮಪತ್ರ ಸಲ್ಲಿಸುತ್ತೇನೆ’ ಎಂದರು.

ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಒತ್ತಾಯ: ನಾಗರಾಜಗೌಡ ಅಭಿಮಾನಿ ಬಳಗದ ಹೆಸರಿನಲ್ಲಿ ನಡೆದ ಸಭೆಯಲ್ಲಿ ಬಹುತೇಕ ತಾಲ್ಲೂಕಿನ ವಿವಿಧ ಗ್ರಾಮಗಳ ಹಾಗೂ ಪಟ್ಟಣದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

‘ನಾಗರಾಜಗೌಡ ಅವರು 5 ವರ್ಷಗಳಿಂದ ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಸಂಘಟನೆ ಮಾಡಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದಕ್ಕೆ ಧೃತಿಗೆಡಬಾರದು. ಅವರ ಹಿಂದೆ ಸಾವಿರಾರು ಮುಖಂಡರು ಹಾಗೂ ಕಾರ್ಯಕರ್ತರು ಇದ್ದಾರೆ. ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕು. ಯಾರಿಗೂ ಹೆದರಬೇಡಿ, ನಾವೇ ಹಣ ಖರ್ಚು ಮಾಡಿ ಚುನಾವಣೆ ನಡೆಸುತ್ತೇವೆ’ ಎಂದು ಅಭಿಮಾನಿಗಳು ಧೈರ್ಯ ಹೇಳಿದರು.

ಮುಖಂಡರಾದ ಚುರ್ಚಿಗುಂಡಿ ರುದ್ರೇಗೌಡ್ರು, ಜಂಬೂರು ಶಿವಶಂಕರಪ್ಪ, ಸದಾಶಿವಪ್ಪ, ನವುಲೇಶಪ್ಪ, ಕೃಷಿ ಭೂಮಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಡಿ.ಎಸ್. ಈಶ್ವರಪ್ಪ, ಮಡಿವಾಳ ಚಂದ್ರಪ್ಪ, ಎಚ್.ಎಸ್. ರವೀಂದ್ರ, ಉಮೇಶ್ ಮಾರವಳ್ಳಿ, ಶೇಖರನಾಯ್ಕ, ನೂರ್ ಅಹಮದ್, ದಾನಪ್ಪ, ಅಂಬಾರಗೊಪ್ಪ ರಾಜಣ್ಣ, ಧಾರಾವಾಡ ಸುರೇಶ್, ವೀರನಗೌಡ, ಸುಬ್ರಮಣ್ಯ ರೇವಣಕರ್, ವಿಠಲನಗರ ಸಂತೋಷ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.