ADVERTISEMENT

ಉಪಚುನಾವಣೆ ಕ್ಷೇತ್ರಗಳಿಗೆ ಬಜೆಟ್ ವಿಶೇಷ ಅನುದಾನವಿಲ್ಲ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2021, 13:32 IST
Last Updated 28 ಫೆಬ್ರುವರಿ 2021, 13:32 IST
₹105 ಕೋಟಿ ವೆಚ್ಚದ ಮೂಗೂರು ಏತ ನೀರಾವರಿ ಯೋಜನೆಯನ್ನು ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.
₹105 ಕೋಟಿ ವೆಚ್ಚದ ಮೂಗೂರು ಏತ ನೀರಾವರಿ ಯೋಜನೆಯನ್ನು ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು.   

ಶಿವಮೊಗ್ಗ: ಈ ಬಾರಿಯ ಬಜೆಟ್‌ನಲ್ಲಿ ಮಹಿಳೆಯರ ಅಭ್ಯುದಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ರಾಜ್ಯದಲ್ಲಿ ಪ್ರಗತಿಯಲ್ಲಿರುವ ಎಲ್ಲ ಏತ ನೀರಾವರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಅಗತ್ಯ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಸೊರಬ ತಾಲ್ಲೂಕು ಆನವಟ್ಟಿ, ಶಿವಮೊಗ್ಗ ನಗರದಲ್ಲಿ ಭಾನುವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ಬಜೆಟ್‌ ಕುರಿತ ಎಲ್ಲ ಚರ್ಚೆಗಳು ಪೂರ್ಣಗೊಂಡಿವೆ. ಎರಡು ದಿನಗಳಲ್ಲಿ ಅಂತಿಮ ರೂಪ ನೀಡಲಾಗುವುದು. ಸವಾಲುಗಳನ್ನು ಅವಕಾಶವಾಗಿ ಪರಿವರ್ತಿಸಿ, ರಾಜ್ಯವನ್ನು ಅಭಿವೃದ್ಧಿ ಪಥದತ್ತ ತೆಗೆದುಕೊಂಡು ಹೋಗಲು ದೃಢ ಹೆಜ್ಜೆ ಇಡುತ್ತೇನೆ. ಉಪ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಯಾವುದೇ ವಿಶೇಷ ಅನುದಾನ ಘೋಷಣೆ ಮಾಡುವುದಿಲ್ಲ. ಈಗಾಗಲೇ ಆ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ನಾಲ್ಕೂ ಕ್ಷೇತ್ರಗಳಲ್ಲೂ ಗೆಲುವು ನಮ್ಮದೆ’ ಎಂದರು.

ADVERTISEMENT

ಶಾಸಕ ಕುಮಾರ್ ಬಂಗಾರಪ್ಪ ಮುನಿಸು:

ಸೊರಬ ತಾಲೂಕು ಆನವಟ್ಟಿಯಲ್ಲಿ 31 ಕೆರೆಗಳಿಗೆ ವರದಾ ನದಿಯಿಂದ ನೀರು ತುಂಬಿಸುವ ₹105 ಕೋಟಿ ವೆಚ್ಚದ ಮೂಗೂರು ಏತ ನೀರಾವರಿ ಯೋಜನೆಯನ್ನು ಯಡಿಯೂರಪ್ಪ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದ ವಿಷಯದಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಎಂದು ಕುಮಾರ್ ಬಂಗಾರಪ್ಪ ಮುನಿಸಿಕೊಂಡು ಸೊರಬಕ್ಕೆ ಹೋಗಿದ್ದರು. ಸಂಸದ ಬಿ.ವೈ.ರಾಘವೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮೇಘರಾಜ್ ಒಂದು ತಾಸು ಅವರ ಮನವೊಲಿಸಿ ಸಮಾರಂಭಕ್ಕೆ ಕರೆತಂದರು.

ಘೇರಾವ್ ಸುಳಿವು; ಕಾಂಗ್ರೆಸ್ ಮುಖಂಡರ ಬಂಧನ

ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟದಲ್ಲಿರುವಾಗ ಇಲ್ಲಿನ ಹಳೇ ಜೈಲು ಆವರಣದಲ್ಲಿ 50 ಸಾವಿರ ಜನರನ್ನು ಸೇರಿಸಿ ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿಗೆ ಘೇರಾವ್ ಹಾಕಲು ಸಿದ್ಧತೆ ನಡೆಸಿದ್ದ ನೂರಾರು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದರು.

ಜಿಲ್ಲಾ ಕಾಂಗ್ರೆಸ್ ಭವನನ್ನು ಮಧ್ಯಾಹ್ನವೇ ಸುತ್ತುವರಿದ ಪೊಲೀಸರು ಜಿಲ್ಲಾ ಘಟಕದ ಅಧ್ಯಕ್ಷ ಎಚ್‌. ಎಸ್. ಸುಂದರೇಶ್ ಸೇರಿದಂತೆ ಅಲ್ಲಿದ್ದ ಎಲ್ಲ ಮುಖಂಡರನ್ನೂ ಬಂಧಿಸಿ, ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಕರೆದುಕೊಂಡು ಹೋದರು.

ಯಡಿಯೂರಪ್ಪ ಅಭಿಮಾನಿಗಳ ಬಳಗ ಸಂಜೆ ಅಭಿನಂದನಾ ಕಾರ್ಯಕ್ರಮ ’ನಮ್ಮೊಲುಗೆ’ ಹಮ್ಮಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.