ತುಮರಿ: ಸಾಗರ ತಾಲ್ಲೂಕಿನ ಕಳಸವಳ್ಳಿ ಗ್ರಾಮದ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಮೂವರು ಯುವಕರು ಬುಧವಾರ ನಾಪತ್ತೆಯಾಗಿದ್ದ ಪ್ರಕರಣ ಸಂಬಂಧ ಗುರುವಾರ ಬೆಳಿಗ್ಗೆ ಸತತ ಎರಡು ಗಂಟೆಗಳ ಕಾರ್ಯಾಚರಣೆ ನಂತರ ಮೃತದೇಹಗಳನ್ನು ಹೊರತೆಗೆಯಲಾಯಿತು.
ಕಳಸವಳ್ಳಿ ಗ್ರಾಮದ ಚೇತನ್ ಜೈನ್ (28), ಹುಲಿದೇವರ ಬನ ಗ್ರಾಮದ ಸಂದೀಪ್ ಭಟ್ (31), ಗಿಣಿವಾರ ಗ್ರಾಮದ ರಾಜು (27) ಮೃತಪಟ್ಟವರು. ಮುಳುಗು ತಜ್ಞ ಈಶ್ವರ ಮಲ್ಪೆ ನೇತೃತ್ವದ ತಂಡ ಹಿನ್ನೀರಿನ 40 ಅಡಿ ಆಳದಿಂದ ಶವಗಳನ್ನು ಪತ್ತೆ ಹಚ್ಚಿತು.
ಬುಧವಾರ ಸಂಜೆ ಐವರು ಯುವಕರು ತೆಪ್ಪದ ಮೂಲಕ ನಡುಗಡ್ಡೆಯಲ್ಲಿ ಹೊಳೆ ಊಟ ಊಟಕ್ಕೆ ತೆರಳಿದ್ದಾಗ ದುರ್ಘಟನೆ ಸಂಭವಿಸಿತ್ತು. ವಿನಯ್ ಹಾಗೂ ಯಶವಂತ ಈಜಿ ದಡ ಸೇರಿದ್ದರು.
ಉಳಿದ ಮೂವರ ಪತ್ತೆಗಾಗಿ ಅಗ್ನಿಶಾಮಕ ದಳ ಹಾಗೂ ಪೋಲಿಸ್ ಇಲಾಖೆ ಬುಧವಾರ ತಡರಾತ್ರಿವರೆಗೂ ಕಾರ್ಯಾಚರಣೆ ನಡೆಸಿತ್ತು. ತ್ರೀವ್ರ ಕತ್ತಲು ಆವರಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಗುರುವಾರ ಬೆಳಿಗ್ಗೆ 6ರಿಂದ ಎರಡು ಗಂಟೆಗಳ ಕಾರ್ಯಾಚರಣೆ ನಡೆಯಿತು.
ಆವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪೃಥ್ವಿರಾಜ್ ತಂಡದ ನೇತೃತ್ವದಲ್ಲಿ ಕಳಸವಳ್ಳಿ ತಟದಲ್ಲಿಯೇ ಮೂರು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಿತು. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಸ್ಥಳಕ್ಕೆ ಕಾರ್ಗಲ್ ಪೋಲಿಸ್ ಠಾಣೆ ಪಿಎಸ್ಐ ಹೊಳಿಬಸಪ್ಪ ಹೋಳಿ ಹಾಗೂ ಸಿಬ್ಬಂದಿ, ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ, ತುಮರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ರಾಮಚಂದ್ರ, ಕೋಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಗೌಡ ಭೇಟಿ ನೀಡಿದ್ದರು.
ಯುವಕರ ಗ್ರಾಮವಾದ ಕಳಸವಳ್ಳಿ ಹಾಗೂ ಹುಲಿದೇವರ ಬನ ಗ್ರಾಮದ ಬಳಿ ಸಂಬಂಧಿಕರು, ಗ್ರಾಮಸ್ಥರು ದೌಡಾಯಿಸಿದ್ದು, ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಮೃತರನ್ನು ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.
ಆಯಾ ಗ್ರಾಮಗಳಲ್ಲಿ ಮೂವರ ಅಂತ್ಯಕ್ರಿಯೆ ನಡೆಸಲಾಯಿತು. ಪುತ್ರರನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಶರಾವತಿ ಹಿನ್ನೀರಿನ ಹಲವು ಭಾಗಗಳಲ್ಲಿ ಯುವಕರು ನಡುಗಡ್ಡೆ ಊಟಕ್ಕೆ ತೆರಳುವುದು ಸಾಮಾನ್ಯವಾಗಿದೆ. ಇದು ಗ್ರಾಮಸ್ಥರಲ್ಲಿ ಆತಂಕ ತಂದಿದೆ. ತೆಪ್ಪದ ಮೂಲಕ ಜನ ಸಂಚಾರವಿಲ್ಲದ ದ್ವೀಪ ಪ್ರದೇಶಕ್ಕೆ ಮೋಜು, ಮಸ್ತಿಗೆ ತೆರಳುವುದರಿಂದ ನಿರ್ಜನ ಪ್ರದೇಶದಲ್ಲಿ ಯಾವುದೇ ಅವಘಡ ಸಂಭವಿಸಿದರೂ ತಿಳಿಯುವುದಿಲ್ಲ. ಯುವಕರು ಹುಚ್ಚು ಸಾಹಸದಿಂದ ಅಪಾಯವನ್ನು ಲೆಕ್ಕಿಸದೇ ತೆಪ್ಪದಲ್ಲಿ ಹೋಗಿರುವುದು ಘಟನೆಗೆ ಕಾರಣ ಎಂದು ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದುದು ಕಂಡುಬಂತು.
ಹೊಳೆಊಟಕ್ಕೆ ತೆರಳಿ ಮೂವರ ದುರ್ಮರಣ ಪುತ್ರರ ಆಗಲಿಕೆಯ ನೋವಿನಲ್ಲಿ 3 ಕುಟುಂಬಗಳು ನದಿ ತೀರದಲ್ಲಿ ಬೇಕಿದೆ ಅಪಾಯ ಎಚ್ಚರಿಕೆಯ ಫಲಕಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.