ಶಿವಮೊಗ್ಗ: ಕೋವಿಡ್ ವೇಳೆ ಕಳೆಗುಂದಿದ್ದ ರಾಜ್ಯದ ಮೃಗಾಲಯಗಳಿಗೆ ಈ ವರ್ಷ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತಿದೆ. 2022–23ನೇ ಸಾಲಿನಲ್ಲಿ ರಾಜ್ಯದ 9 ಮೃಗಾಲಯಗಳಿಗೆ 65.77 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಆದಾಯದ ಪ್ರಮಾಣ ₹ 100 ಕೋಟಿ ದಾಟಿದೆ.
‘ಮಾಸ್ಟರ್ ಪ್ಲಾನ್ ರೂಪಿಸಿ ಅದರಡಿ ರಾಜ್ಯದ ಎಲ್ಲಾ ಮೃಗಾಲಯಗಳಲ್ಲಿ ಮೂಲ ಸೌಕರ್ಯ ಅಭಿವೃದ್ದಿ ಮಾಡಿದ್ದು, ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣ’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ತಿಳಿಸಿದ್ದಾರೆ.
‘ಮೈಸೂರು, ಬೆಂಗಳೂರು ನಂತರ ಇತರೆ ಮೃಗಾಲಯಗಳಲ್ಲೂ ಹುಲಿ, ಸಿಂಹ, ಚಿರತೆಗಳನ್ನು ತಂದು ಇರಿಸಲಾಗಿದೆ. ಮೃಗಾಲಯಗಳ ಆಧುನೀಕರಣ, ವಿಸ್ತರಣೆ, ರಸ್ತೆ, ಶೌಚಾಲಯ ಸೇರಿದಂತೆ ಉತ್ತಮ ಸೌಲಭ್ಯ ನೀಡಲಾಗುತ್ತಿದೆ. ಅಂತೆಯೇ ಪ್ರವಾಸಿಗರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
‘ಕೋವಿಡ್ ನಂತರ ಜನರ ಮನಸ್ಥಿತಿಯಲ್ಲೂ ಬದಲಾವಣೆ ಆಗಿದೆ. ಜನರು ದೈಹಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತುನೀಡುತ್ತಿದ್ದಾರೆ. ರಜೆಯ ದಿನಗಳಲ್ಲಿ ಮಕ್ಕಳನ್ನು ಮೊಬೈಲ್ ಫೋನ್, ಟಿ.ವಿ.ಗಳಿಂದ ದೂರವಿಡಲು ಮನೆ ಮಂದಿಯೆಲ್ಲಾ ಪ್ರವಾಸ ಹೋಗುತ್ತಿರುವುದು ಕಾಣುತ್ತಿದೆ. ಮೃಗಾಲಯಗಳ ಆದಾಯ ಹೆಚ್ಚಳಕ್ಕೆ ಇದೂ ಕಾರಣ. ಮೈಸೂರು, ಬೆಂಗಳೂರು ಹೊರತಾಗಿ ರಾಜ್ಯದ ಉಳಿದ ಮೃಗಾಲಯಗಳಿಗೆ ಅಪರೂಪದ ಪ್ರಾಣಿಗಳನ್ನು ಕರೆತರಲಾಗಿದೆ. ಮಾಧ್ಯಮಗಳಿಂದಲೂ ಸಮರ್ಪಕ ಪ್ರಚಾರ ದೊರೆತಿದ್ದು ಪೂರಕವಾಗಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.
ಬದಲಾದ ವಾತಾವರಣ: ಮೊದಲೆಲ್ಲಾ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ಸರಳುಗಳ ಹಿಂದೆ ಕೂಡಿ ಹಾಕಲಾಗುತ್ತಿತ್ತು. ಪ್ರವಾಸಿಗರಿಗೂ ಅವುಗಳನ್ನು ಬಂಧನದಲ್ಲಿಟ್ಟಿರುವ ಭಾವನೆ ಮೂಡುತ್ತಿತ್ತು. ಆದರೆ ಆಧುನೀಕರಣದ ನಂತರ ಪಾರದರ್ಶಕ ಗಾಜಿನ ಗೋಡೆಗಳ (ಗ್ಲಾಸ್ ಎನ್‌ಕ್ಲೋಸರ್) ನಡುವೆ ಪ್ರಾಣಿಗಳು ಕಾಣಸಿಗುತ್ತಿವೆ.
ಮಧ್ಯೆ ಗಾಜಿನ ತಡೆಗೋಡೆ ಇದೆ ಎಂಬ ಭಾವನೆ ಬಿಟ್ಟರೆ, ‘ಪ್ರಾಣಿಗಳನ್ನು ನೈಜ ಪರಿಸರದಲ್ಲಿ ಕಾಣುತ್ತಿದ್ದೇವೆ’ ಎಂಬ ಭಾವನೆ ಪ್ರವಾಸಿಗರಲ್ಲಿ ಮೂಡುತ್ತಿದೆ. ಶಿವಮೊಗ್ಗ ಮೃಗಾಲಯಕ್ಕೆ ನೀರಾನೆಗಳು ಬಂದಿವೆ. ಕಾಡೆಮ್ಮೆಗಳ ಸಫಾರಿಯನ್ನೂ ಆರಂಭಿಸಲಾಗಿದೆ. ಬದಲಾದ ವಾತಾವರಣ, ಹೊಸ ಅಪರೂಪದ ಪ್ರಾಣಿಗಳು ಪ್ರವಾಸಿಗರನ್ನು ಸೆಳೆಯುತ್ತಿವೆ ಎಂದು ಮೃಗಾಲಯದ ಅಧಿಕಾರಿಗಳು ಹೇಳುತ್ತಾರೆ.
ಆದಾಯ ಪಟ್ಟಿಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯ ಮೊದಲ ಸ್ಥಾನದಲ್ಲಿದೆ. ದಾವಣಗೆರೆಯ ಆನಗೋಡು ಪಾರ್ಕ್‌ನ ಮೃಗಾಲಯ ಕೊನೆ ಸ್ಥಾನದಲ್ಲಿದೆ.
‘ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯ ಈ ವರ್ಷ ಗಳಿಸಿರುವ ಆದಾಯ ಅಲ್ಲಿನ ಪ್ರಾಣಿಗಳಿಗೆ ಆಹಾರ ಮತ್ತು ಮೇವು ಖರೀದಿಯ ಸ್ವಾವಲಂಬನೆಗೆ ನೆರವಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಕೊಡುವ ಅನುದಾನವನ್ನು ಬಳಸಲಾಗುತ್ತಿದೆ’ ಎಂದು ಬಿ.ಪಿ.ರವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.