ADVERTISEMENT

ಕೆರೆಗೋಡಿ ದೇಗುಲದಲ್ಲಿ ಚಿತ್ರಕಲಾ ಸಿರಿ

ಹಳ್ಳಿ ಸುರೇಶ
Published 29 ನವೆಂಬರ್ 2015, 11:26 IST
Last Updated 29 ನವೆಂಬರ್ 2015, 11:26 IST

ಪ್ರಾಚೀನ ದೇಗುಲಗಳು ಭಕ್ತಿ ಕೇಂದ್ರಗಳಷ್ಟೇ ಆಗದೆ ಚಿತ್ರಕಲೆ, ಶಿಲ್ಪಕಲೆಯನ್ನು ಪೋಷಿಸಿದ್ದವು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಚಿತ್ರಕಲೆಯನ್ನು ಭಕ್ತರೇ ಪೋಷಿಸಿ, ಮಜೂರಿ ನೀಡಿ ಕಲಾವಿದನಿಂದ ಚಿತ್ರ ಬರೆಸಿರುವುದು ತಾಲ್ಲೂಕಿನ ಕೆರೆಗೋಡಿ ಶಂಕರೇಶ್ವರ ದೇಗುಲದ ವಿಶೇಷ. ವಿಶಿಷ್ಟ ಪೌರಾಣಿಕ ಚಿತ್ರಗಳು ದೇಗುಲದಲ್ಲಿ ಇಂದಿಗೂ ಅಚ್ಚಳಿಯದೆ ಅಚ್ಚರಿ ಮೂಡಿಸುತ್ತಿವೆ.

ತಿಪಟೂರು ತಾಲ್ಲೂಕಿನ ಕೆರೆಗೋಡಿ ರಂಗಾಪುರ ಕ್ಷೇತ್ರ  ಮುಖ್ಯ ಭಕ್ತಿಕೇಂದ್ರಗಳಲ್ಲಿ ಒಂದು. ಕ್ಷೇತ್ರದ ಭಾಗವಾದ ಕೆರೆಗೋಡಿ ಶಂಕರೇಶ್ವರ ದೇಗುಲ ವಿಶಿಷ್ಟ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಿಂದ ಆಕರ್ಷಕವಾಗಿದೆ. ಜತೆಗೆ ದೇಗುಲದ ಜಗುಲಿ, ಒಳ ಛಾವಣಿ, ದೂಲಗಳಲ್ಲಿ ರಚಿಸಿದ ವರ್ಣಚಿತ್ರಗಳು ಆ ಕಾಲದ ಕಲಾಸಿರಿಯನ್ನು ಸಾರುತ್ತವೆ.

3 ವಿಶಾಲವಾದ ಅಂಕಣಗಳನ್ನು ರೂಪಿಸಿ, ಅವುಗಳಲ್ಲಿ ತ್ರಿಪುರ ಸಂಹಾರ, ರಾಮಾಯಣ ಮತ್ತು ಶಿವನ ಇಪ್ಪತ್ತೈದು ಲೀಲೆಗಳನ್ನು ಚಿತ್ರಿಸಲಾಗಿದೆ. ಈ ದೇಗುಲದಲ್ಲಿ ಶೈವ, ವೈಷ್ಣವ ಪ್ರಕಾರದ ಚಿತ್ರಗಳಿರುವುದು ಸಾಮರಸ್ಯದ ದ್ಯೋತಕವಾಗಿದೆ.

ತೀರಾ ಹಳೆಯದಾದ ಶಂಕರೇಶ್ವರ ದೇವಾಲಯದಲ್ಲಿ ಕ್ರಿ.ಶ.1608ರಲ್ಲಿ ದೀಪಾಲೆ ಕಂಬ ಸ್ಥಾಪಿಸಿದ ದಾಖಲೆ ಇದೆ. ಸುಮಾರು 1834ರಲ್ಲಿ ದೇಗುಲದಲ್ಲಿ ಚಿತ್ರಗಳನ್ನು ಚಿತ್ರಿಸಿರಬಹುದು ಎಂದು ಅಂದಾಜಿಸಲಾಗಿದೆ. ದೇಗುಲದಲ್ಲಿ ವೈವಿಧ್ಯ ಚಿತ್ರ ಸರಾವಳಿಗಳಿದ್ದು, ಕಲಾವಿದನ ಕೈ ಚಳಕಕ್ಕೆ ಸಾಕ್ಷಿಯಾಗಿವೆ.

ಪಕ್ಕದ ರಂಗಾಪುರದ ರಂಗನಾಥ ದೇಗುಲದಲ್ಲೂ ವರ್ಣಚಿತ್ರಗಳಿವೆ. ಶಿವ, ವಿಷ್ಣುವಿನ ಕಲ್ಯಾಣ ಹಾಗೂ ದಶಾವತಾರದ ಚಿತ್ರವೂ ಇದೆ. ಈ ಚಿತ್ರಗಳು ಕೆರೆಗೋಡಿ ಶಂಕರೇಶ್ವರ ದೇಗುಲದಲ್ಲಿರುವ ಚಿತ್ರಗಳ ಶೈಲಿಯನ್ನೇ ಹೋಲುತ್ತವೆ. ಮುಮ್ಮಡಿ ಕೃಷ್ಣರಾಜ ಒಡೆಯರ್ ಕುಳಿತಿರುವ ಅರಮನೆ ಚಿತ್ರಣದ ಚಿತ್ರ ಇಲ್ಲಿರುವುದರಿಂದ ಆ ಕಾಲಕ್ಕೆ ತಾಳೆ ಹಾಕಲಾಗುತ್ತದೆ. ಈ ಎರಡು ದೇಗುಲಗಳಲ್ಲೂ ಒಂದೇ ಕಾಲಕ್ಕೆ ಚಿತ್ರಗಳು ರಚನೆಗೊಂಡಿರಬಹುದು ಎಂಬ ಅಂದಾಜಿದೆ.

ಶಂಕರೇಶ್ವರ ದೇಗುಲದ ಚಿತ್ರಗಳ ಕೆಳಗೆ ಕಲಾವಿದ ಒಂದೆಡೆ ಹೆಸರಿನ ಜತೆಗೆ ತನ್ನದೇ ಚಿತ್ರ ಬಿಡಿಸಿರುವುದು ಅಪರೂಪದ ನಿದರ್ಶನವಾಗಿ ಕಾಣುತ್ತದೆ. ಕಲಾವಿದನ ಬಗ್ಗೆ ಗೊಂದಲವನ್ನೂ ನಿವಾರಿಸಿದೆ. ಪ್ರತ್ಯೇಕ ಚಿತ್ರ ವಿಭಾಗಗಳಿಗೆ ಮಜೂರಿ ಕೊಟ್ಟ ಭಕ್ತರ ಹೆಸರು ಬರೆದಿರುವುದು ವಿಶೇಷ. ನೊಣವಿನಕೆರೆ ಚಿತ್ರಗಾರ್ ಸುಬ್ಬಣ್ಣ ಈ ಎಲ್ಲ ಚಿತ್ರಗಳ ಕಲಾವಿದ. ಇವರ ವಂಶಸ್ಥರು ವಿಜಯನಗರ ಸಾಮ್ರಾಜ್ಯದಲ್ಲಿ ಚಿತ್ರಕಲಾವಿದರಾಗಿದ್ದರು. ವಿಜಯನಗರ ಸಾಮ್ರಾಜ್ಯ ಪತನದ ನಂತರ ಅವರೆಲ್ಲ ಮೈಸೂರಿಗೆ ತೆರಳುವಾಗ ನೊಣವಿನಕೆರೆಯಲ್ಲಿ ನೆಲೆ ನಿಂತ ಒಂದು ಕುಟುಂಬದ ಕಲಾವಿದ ಸುಬ್ಬಣ್ಣ. ಚಿತ್ರಗಳ ವಸ್ತ್ರಾಭರಣಗಳಲ್ಲಿ ಮೈಸೂರು ಸಂಪ್ರದಾಯದ ಶೈಲಿ ಕಂಡು ಬರುವುದರಿಂದ ಸುಬ್ಬಣ್ಣ ಮೈಸೂರು ಆಸ್ಥಾನದ ಕಲಾವಿದನೂ ಆಗಿದ್ದ ಎಂದು ಅಂದಾಜಿಸಲಾಗಿದೆ.

ಶಂಕರೇಶ್ವರ ದೇಗುಲದ ಪ್ರಸಂಗ ಚಿತ್ರಗಳು ಕಥೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳಲು ಸಮರ್ಥವಾಗಿವೆ. ತ್ರಿಪುರ ಸಂಹಾರ ಚಿತ್ರಣದಲ್ಲಿ ಶಿವ ಮಹಾಪುರಾಣ, ಶಿವತತ್ವ ಚಿಂತಾಮಣಿ, ತ್ರಿಪುರ ದಹನ ಸಾಂಗತ್ಯ ಮತ್ತಿತರ ವಿವರಗಳು ದಟ್ಟವಾಗಿವೆ. ಕೆರೆ, ಕೊಳ, ಸಿಂಹಾಸನ, ಮನೆ, ರೆಕ್ಕೆಯುಳ್ಳ ಅರಮನೆ, ಗಿಡ, ಮರ, ನಾಗರಕಲ್ಲು, ಕುದುರೆ, ಎತ್ತು ಮತ್ತಿತರ ಚಿತ್ರಣಗಳು ನೈಜವಾಗಿವೆ. ದೇವತೆಗಳು, ರಾಕ್ಷಸರು, ರಾಜರು, ಋಷಿಗಳ ವಸ್ತ್ರಾಭರಣ ವರ್ಣವೈವಿಧ್ಯದಲ್ಲಿ ಎದ್ದು ಕಾಣುತ್ತದೆ.

ರಾಮಾಯಣ ಅಂಕಣದಲ್ಲೂ ವಿವಿಧ ಪ್ರಸಂಗಗಳ ಚಿತ್ರಗಳು ದೃಶ್ಯಕಾವ್ಯದಂತಿವೆ. ಮಧ್ಯದ ಅಂಕಣ ಶಿವ ಪಂಚವಿಂಶತ ಲೀಲೆಗಳಿಗೆ ಮೀಸಲಿರಿಸಿದೆ. ಪ್ರತಿ ಲೀಲೆಯ ಕಥೆಗೂ ದೃಶ್ಯಾತ್ಮಕ ಸೊಬಗು ತುಂಬಲಾಗಿದೆ. ಉಳಿದಂತೆ ದೂಲದ ಮಧ್ಯೆ ಹಾಗೂ ಅಂಕಣಗಳ ಮಧ್ಯೆ ಹೂ, ಬಳ್ಳಿಗಳ ವಿನ್ಯಾಸಗಳಿವೆ. ತ್ರಿಪುರ ಸಂಹಾರ ಅಂಕಣದಲ್ಲಿ ಹಳದಿ, ನೀಲಿ, ಕೆಂಪು, ಹಸಿರು ಹಾಗೂ ಕಪ್ಪು ಬಣ್ಣಗಳನ್ನು ಬಳಸಿ ಆಕರ್ಷಕವಾಗಿ ಚಿತ್ರಿಸಲಾಗಿದೆ.

ಎಲ್ಲ ಚಿತ್ರಗಳೂ ರೇಖಾ ಪ್ರಧಾನವಾಗಿವೆ. ತಾಳ್ಮೆಯಿಂದ ದೇಗುಲದ ಚಿತ್ರಗಳನ್ನು ವೀಕ್ಷಿಸಿದರೆ ಪುರಾಣವೇ ಕಣ್ಮುಂದೆ ಹಾದು ಹೋಗುತ್ತದೆ. ಈ ಚಿತ್ರಗಳ ಕುರಿತ ಚಾರಿತ್ರಿಕ ಮತ್ತು ಕಲಾತ್ಮಕ ವಿವರಗಳನ್ನು ಆ.ಲ.ನರಸಿಂಹನ್ ದಾಖಲಿಸಿದ್ದಾರೆ. ದೇಗುಲದಲ್ಲಿ ಚಿತ್ರಗಳ ಸಂರಕ್ಷಣೆಗೆ ವಿಶೇಷ ಎಚ್ಚರ ಕೂಡ ವಹಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.