ಖಣಿಗುಡುವ ಒಣ ಕಾರೆ ಕೋಲಿನ ಏಟು ತಿಂದಿದ್ದು ಬೆರಳುಗಳಲ್ಲಿ ಇನ್ನೂ ಗೆಣ್ಣಿನಂತೆ ಉಳಿದಿವೆ.. ಎಂದು ಕೋಲಾಟ ಕಲಿತ ತನ್ನ ಛಲವನ್ನು ವಿವರಿಸಲು ಆರಂಭಿಸುತ್ತಾರೆ ತಿಪಟೂರು ತಾಲ್ಲೂಕು ಕನ್ನುಘಟ್ಟ ಗೊಲ್ಲರಹಟ್ಟಿಯ ಕಾಂತರಾಜು.
ಕೋಲು ಹಾಕಿಕೊಂಡು, ಹಾಡು ಹುಟ್ಟಿಸಿಕೊಂಡೇ ಬೆಳೆದ ಕಾಂತರಾಜು ಇವುಗಳ ನಡುವೆಯೇ ಹರ್ಷದ ಬದುಕು ಕಟ್ಟಿಕೊಂಡಿದ್ದಾರೆ.
ಗುಬ್ಬಿ ತಾಲ್ಲೂಕಿನ ಅಜ್ಜಿ ಮನೆಯಲ್ಲಿದ್ದು ಕುರಿ ಕಾಯುವಾಗ ಅಲ್ಲಿನ ಹಿರಿಯರೊಬ್ಬರು ಹಾಕಿಸಿದ ಹೆಜ್ಜೆ, ಕುಣಿಸಿದ ಕೋಲುಗಳನ್ನು ಇತರರಿಗೆ ದಾಟಿಸಲು ಪ್ರಯತ್ನಿಸಿದ್ದಾರೆ. ತಮ್ಮ ಆಸುಪಾಸಿನಲ್ಲಿ ‘ಕೋಲಾಟದ ಮೇಷ್ಟ್ರಾಗಿದ್ದಾರೆ’.
ಇವರು ಕೋಲು ಹಿಡಿದರೆ ಸಾಕು ಜನಪದದ ಹಲವಾರು ಹಾಡುಗಳು ಹರಿದಾಡುತ್ತವೆ. ಸಾಂಪ್ರದಾಯಿಕ ಕೋಲಾಟದ ಹಾಡುಗಳನ್ನು ಹೊಸ ಪೀಳಿಗೆಗೆ ದಾಟಿಸಲು ಕೊಂಡಿಯಂತೆ ಕಾಣುತ್ತಾರೆ.
ನಿಲ್ಲು ನಿಲ್ಲಯ್ಯಾ ಜಾಣ
ನಿಜಗುಣವೇನು ಬಲ್ಲೆ..
ಮಲ್ಲಿಗೆ ಹಾರಗಳೆಲ್ಲೋ.
ಒಳ್ಳೆ ಮಾತು ಕಲೀಬೇಕು
ಮಾತು ಬಂದರೂ
ಊಟಕ್ಕೇನಯ್ಯಾ...
ಎಂಬಂಥ ಒಳಾರ್ಥದ ಹಾಡುಗಳೂ ಇವರಲ್ಲಿ ಅಡಗಿವೆ.
ಏಳನೇ ತರಗತಿವರೆಗೆ ಓದಿರುವ ಕಾಂತರಾಜು ಕೋಲಾಟದೊಳಗಿನ ಜನಪದ ಸಾಹಿತ್ಯ ಸಮೃದ್ಧಿಯನ್ನು ವಿಸ್ತರಿಸುವಷ್ಟು ಜ್ಞಾನಿಯಾಗಿದ್ದಾರೆ. ‘ಕೋಲಿಡಿದು ಏಟಾಕಿದರೆ
ಏಟೊಂದು ಹಾಡು ಹುಟ್ಟುತ್ತಾವೆ’ ಎನ್ನುವ ಅವರ ಹಾಡುಗಳು ಮಳೆ, ಬೆಳೆ, ಜನಪದರ ಕಷ್ಟಸುಖ, ತಮಾಷೆ ಎಲ್ಲವನ್ನೂ ಒಳಗೊಂಡಿವೆ.
ಕೋಲು ಕೊಲಣ್ಣಾ ಕೋಲೇ..
ಸಿರಿಗಂಧದಿ ಕೋಲು ಕೋಲಣ್ಣಾ ಕೋಲೇ
ದೂರು ಬಂದಾವೋ ನಿನ ಮೇಲೆ
ದೂರು ಬಂದರೂ ಬರಲಿ ನನಗಿರಲಿ
ರಾಣಿ ನಿನ ಮುಖವೂ ಕಳವಿರಲಿ.. ಎಂಬಂಥ ಪ್ರೀತಿಪ್ರೇಮದ ಹಾಡುಗಳು ಇವರಲ್ಲಿ ದಟ್ಟವಾಗಿವೆ.
ಬರ ಬಂದಾಗ ಸಹಿಸಿಕೊಳ್ಳುವ, ಕಷ್ಟ ಬಂದಾಗ ತೂಗಿಸಿಕೊಳ್ಳುವ ಶಕ್ತಿ ತುಂಬಲು ಇವರಲ್ಲಿ ಹಾಡುಗಳ ಕಣಜವೇ ಇದೆ. ಹೊಸ ಕಾಲದ ಕೋಲಾಟದಲ್ಲಿ ಮರೆಯಾಗುತ್ತಿರುವ ಹಲವಾರು ಕ್ಲಿಷ್ಟಕರ ಹೆಜ್ಜೆಗಳು, ಕೈತಾಟುಗಳು ಇವರಲ್ಲಿ ಇನ್ನೂ ಜೀವಂತವಾಗಿವೆ.
ಸಾಂಘಿಕ ಕಲಾಪ್ರಕಾರವಾದ ಕೋಲಾಟದ ಮೂಲಕ ಇವರು ಮನಸ್ಸುಗಳನ್ನು ಬೆಸೆಯುವ ಕೆಲಸವನ್ನೂ ಮಾಡಿದ್ದಾರೆ.
ಯುವಕರಿಗೆ ಹಳೆ ಕೋಲಾಟದ ವೈವಿಧ್ಯ ಹೆಜ್ಜೆಗಳನ್ನು ಹೇಳಿಕೊಡುತ್ತಾ ಜನಪದ ಸಾಹಿತ್ಯವನ್ನು ಹಸಿರಾಗಿಟ್ಟವರಲ್ಲಿ ಒಬ್ಬರಾಗಿದ್ದಾರೆ. ಕೋಲಾಟದ ಮೂಲಕವೇ ಜನಪದ ಕತೆಗಳನ್ನು ಕಟ್ಟುವ ಇವರ ನೆನಪಿನ ಶಕ್ತಿ ಹೌಹಾರಿಸುತ್ತದೆ. ಇಷ್ಟೇ ಅಲ್ಲದೆ ಆ ವ್ಯಾಪ್ತಿಯ ಪ್ರಮುಖ ಭಜನೆ ಕಲಾವಿದರಾಗಿ ಗುರುತಿಸಿಕೊಂಡಿರುವ ಇವರು ತತ್ವಪದಗಳ ಮೂಲಕ ಆಧ್ಯಾತ್ಮಿಕ ವಿಚಾರಗಳ ಸೋಪಜ್ಞತೆಯನ್ನು ಕಟ್ಟಿಕೊಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.