ತುಮಕೂರು: ಹೇಮಾವತಿ ನದಿ ನೀರಿನಿಂದ ಕೆರೆಗಳನ್ನು ತುಂಬಿಸುತ್ತೇವೆ ಎಂದೇಳುತ್ತಿದ್ದ ಚುನಾವಣಾ ಭರವಸೆಯ ವರಸೆ ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಸ್ವಲ್ಪ ಬದಲಾಗಿತ್ತು. ಹೇಮಾವತಿ ಜತೆಗೆ ಭದ್ರಾ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ ಯೋಜನೆಗಳೂ ಸೇರಿಕೊಂಡಿದ್ದವು.
’ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸುವ ಪರಿಪಾಠ’ವನ್ನು ಜಿಲ್ಲೆಯ ಜನಪ್ರತಿನಿಧಿಗಳು ಚೆನ್ನಾಗಿಯೇ ಕಲಿತಿದ್ದಾರೆ. ಇಷ್ಟು ದಿನ ಹೇಮಾವತಿ ಬಗ್ಗೆ ಮಾತನಾಡುತ್ತಿದ್ದವರು ಈಗ ಉಳಿದ ನದಿಗಳಿಂದ ನೀರು ತಂದು ಕೆರೆಗಳನ್ನು ತುಂಬಿಸುವ ಬಗ್ಗೆಯೂ ಮಾತನಾಡುತ್ತಿದ್ದಾರೆ. ಆದರೆ ಅಪ್ಪಿ–ತಪ್ಪಿಯೂ, ನಮ್ಮ ಜಿಲ್ಲೆಯ ನದಿಗಳಾದ ಸುವರ್ಣಮುಖಿ, ಕುಮುದ್ವತಿ, ಜಯಮಂಗಲಿ, ಉತ್ತರ ಪಿನಾಕಿನಿ ಬಗೆಗೆ ಹೇಳುವುದಿಲ್ಲ. ಇವುಗಳ ಬಗ್ಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಪ್ರಣಾಳಿಕೆಯಲ್ಲಿ ಪ್ರಸ್ತಾಪವೂ ಇಲ್ಲವಾಗಿತ್ತು.
ಜಿಲ್ಲೆಯ ಹತ್ತು ಹೊಸ ಮುಖಗಳಿಗೆ ಮತದಾರರು ಈ ಸಲದ ಚುನಾವಣೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಶಾಸಕರಾದರೂ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸುವತ್ತ ವೈಜ್ಞಾನಿಕ ಚಿಂತನೆ, ನೋಟ ಹರಿಸುತ್ತಾರೆಯೇ ಎಂದು ಜಿಲ್ಲೆಯ ಜನರು ಎದುರು ನೋಡುತ್ತಿದ್ದಾರೆ.
ತೆಂಗು, ಅಡಿಕೆ, ಮಾವು ಜಿಲ್ಲೆಯ ಪ್ರಧಾನ ವಾಣಿಜ್ಯ ಬೆಳೆಗಳು. ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ತಾಲ್ಲೂಕುಗಳ ಜನರ ಬದುಕು ತೆಂಗು, ಅಡಿಕೆ ಮೇಲೆಯೇ ನಿಂತಿದೆ. ದಶಕದಿಂದ ಕಾಡುತ್ತಿರುವ ಬರ, ಅಂತರ್ಜಲ ಕುಸಿತ, ಹೆಚ್ಚಿದ ಕೊಳವೆಬಾವಿಗಳ ಸಂಖ್ಯೆ, ಒಣಗುತ್ತಿರುವ ತೋಟಗಳು, ರೈತರ ಆತ್ಮಹತ್ಯೆಗಳು... ಇಂಥ ಚಿತ್ರಣಗಳೇ ಈಗ ಜಿಲ್ಲೆಯಲ್ಲಿ ಕಾಣುತ್ತಿವೆ.
'ಜಿಲ್ಲೆಯ ಭೌಗೋಳಿಕ ಪ್ರದೇಶ ಕಾವೇರಿ, ಕೃಷ್ಣಾ ಕೊಳ್ಳದ ಕಣಿವೆಯಲ್ಲಿ ಹಂಚಿದೆ. ಈ ಎರಡೂ ಕೊಳ್ಳವಲ್ಲದೆ ಪೆನ್ನಾರ್ ಬಯಲಿನಲ್ಲಿಯೂ ಕೆಲವು ಪ್ರದೇಶಗಳು ಹಾದು ಹೋಗಿವೆ. ಇದಲ್ಲದೇ ಪ್ರತಿ ವರ್ಷ ಸಾಧಾರಣವಾಗಿ 500 ಮಿಲಿ ಮೀಟರ್‌ಗೂ ಹೆಚ್ಚು ಮಳೆಯಾಗುತ್ತಿದೆ. ಆದರೂ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹೊಸ ಶಾಸಕರಾದರೂ ನೀರಾವರಿ ತಜ್ಞರನ್ನು ಕರೆಯಿಸಿ ಉತ್ತರ ಕಂಡುಕೊಳ್ಳುವ ಕೆಲಸ ಮಾಡಬೇಕು' ಎನ್ನುತ್ತಾರೆ ನೀರಾವರಿ ಹೋರಾಟಗಾರ ಕುಂದರನಹಳ್ಳಿ ರಮೇಶ್.
ಹೇಮಾವತಿ ನದಿ ನೀರು ಜಿಲ್ಲೆಗೆ ಬಂದು ಎರಡು ದಶಕವಾದವು. ಯೋಜನೆ ಜಾರಿಯೊಂದಿಗೆ ಶುರುವಾದ ’ನೀರಿನ ರಾಜಕಾರಣ’, ’ನೀರು ತಂದ ಭಗೀರಥ’ ಎಂದು ಫ್ಲೆಕ್ಸ್ ಹಾಕಿಕೊಳ್ಳುವ ರಾಜಕಾರಣಿಗಳ ನಾಟಕಗಳು ದಿನೇದಿನೇ ಜೋರು ಪಡೆಯುತ್ತಲೇ ಇವೆಯೇ ಹೊರತು ಸಮಸ್ಯೆ ಮಾತ್ರ ಬಗೆಹರಿಸುತ್ತಿಲ್ಲ. ಜಿಲ್ಲೆಗೆ ಈಗ ಸಿಕ್ಕರುವ ನೀರಿನಲ್ಲೇ ಹನ್ನೊಂದು ಕ್ಷೇತ್ರಗಳ ಎಲ್ಲ ಕೆರೆಗಳನ್ನು ತುಂಬಿಸುವಂತಹ ಹೊಸ ಯೋಜನೆ ರೂಪಿಸುವ ಕಡೆ ಏನಾದರೂ ಮಾಡಬಹುದೇ ಎಂಬುದನ್ನು ಹೊಸ ಶಾಸಕರು ಚಿಂತಿಸಬೇಕಾಗಿದೆ.
ತಿಪಟೂರು ವಿಧಾನಸಭಾ ಕ್ಷೇತ್ರದ ಅರ್ಧಭಾಗ ಕಾವೇರಿಕೊಳ್ಳ, ಇನ್ನರ್ಧ ಕೃಷ್ಣಾಕೊಳ್ಳದಲ್ಲಿ ಸೇರಿದೆ. ಗುಬ್ಬಿ, ತುರುವೇಕೆರೆ, ಕುಣಿಗಲ್, ತುಮಕೂರು, ತುಮಕೂರು ಗ್ರಾಮಾಂತರ ಕ್ಷೇತ್ರಗಳು ಕಾವೇರಿಕೊಳ್ಳದಲ್ಲಿ ಸೇರಿವೆ. ಇಲ್ಲಿಗೆ ಹೇಮಾವತಿ ನದಿ ನೀರಿನ ಆಸರೆ ಅಲ್ಪಸ್ವಲ್ಪ ಸಿಕ್ಕಿದೆ.
ಶಿರಾ, ಚಿಕ್ಕನಾಯಕನಹಳ್ಳಿ, ಪಾವಗಡ, ಮಧುಗಿರಿ, ಕೊರಟಗೆರೆ ವಿಧಾನಸಭಾ ಕ್ಷೇತ್ರಗಳು ಕೃಷ್ಣಾಕೊಳ್ಳದಲ್ಲಿವೆ. ಕೃಷ್ಣಾಕೊಳ್ಳದಿಂದ ತುಂಗಾ ಭದ್ರಾ ಮೇಲ್ದಂಡೆ, ತುಂಗಾ ನದಿಯಿಂದ ನೀರು ಪಡೆಯುವ ಯೋಜನೆ ಚಾಲನೆಯಲ್ಲಿವೆ. ಇನ್ನೂ ಎತ್ತಿನಹೊಳೆಯಿಂದಲೂ ಜಿಲ್ಲೆಯ ಹನ್ನೊಂದು ಕ್ಷೇತ್ರಗಳಿಗೂ ಚೂರು–ಪಾರು ನೀರು ಹಂಚಿಕೆಯಾಗಿದೆ.
ನೀರಾವರಿ ತಜ್ಞ ಪರಮಶಿವಯ್ಯ ವರದಿ ಪ್ರಕಾರ ಜಿಲ್ಲೆಯಲ್ಲಿ 1457 ಕೆರೆಗಳಿವೆ (ಸಣ್ಣಪುಟ್ಟ ಕಟ್ಟೆಗಳನ್ನು ಹೊರತುಪಡಿಸಿ). ಇವುಗಳನ್ನು ತುಂಬಿಸಲು 23.5 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಸದ್ಯ, ಹೇಮಾವತಿಯಿಂದ ನಮಗೆ 18.5 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. (ತುಮಕೂರು–ನಾಗಮಂಗಲ ಸೇರಿ ಒಟ್ಟು ಹಂಚಿಕೆಯಾಗಿರುವ 24.5 ಟಿಎಂಸಿ ಅಡಿ ನೀರಿನಲ್ಲಿ 6 ಟಿಎಂಸಿ ಅಡಿಯಷ್ಟು ನಾಗಮಂಗಲ ಕಾಲುವೆ ಮೂಲಕ ಮಂಡ್ಯ ಜಿಲ್ಲೆಗೆ ಹೋಗುತ್ತದೆ).
ಎತ್ತಿನಹೊಳೆ ಯೋಜನೆಯಲ್ಲಿ ಜಿಲ್ಲೆಗೆ 4.41ಟಿಎಂಸಿ ಅಡಿ (ಕೆರೆ ತುಂಬಿಸಲು ಮತ್ತು ಕುಡಿಯಲು), ಭದ್ರಾ ಮೇಲ್ದಂಡೆ ಯೋಜನೆಯಡಿ 4.200 ಟಿಎಂಸಿ ಅಡಿ , ಭದ್ರಾ ಯೋಜನೆಯಡಿ ಪಾವಗಡಕ್ಕೆ 0.5 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ.
ಒಟ್ಟು ನಾಲ್ಕು ನೀರಾವರಿ ಯೋಜನೆಗಳಿಂದ ಜಿಲ್ಲೆಗೆ 27 ಟಿಎಂಸಿ ಅಡಿ ನೀರು ಸಿಗಲಿದೆ. ಅಂದರೆ ಇಷ್ಟು ನೀರಿನಲ್ಲಿ ಜಿಲ್ಲೆಯ ಎಲ್ಲ ಕೆರೆಗಳನ್ನೂ ತುಂಬಿಸಬಹುದಾಗಿದೆ. ಜಿಲ್ಲೆಗೆ ಈಗ ಬರುತ್ತಿರುವ ಹೇಮಾವತಿ ನೀರಿನಿಂದಲೂ ಜಿಲ್ಲೆಯ 1000 ಕೆರೆಗಳನ್ನು ತುಂಬಿಸಲು ಸಾಧ್ಯವಿದೆ. ಹೇಮಾವತಿಯ ಅಚ್ಚುಕಟ್ಟು ಪ್ರದೇಶವನ್ನು ಹೊರಗಿಟ್ಟು ಕೇವಲ ಕೆರೆಗಳನ್ನಷ್ಟೇ ತುಂಬಿಸುವ ಕಡೆಗೆ ಹೊಸ ಶಾಸಕರು ಚಿಂತನೆ ನಡೆಸಬಹುದಾಗಿದೆ.
ಹತ್ತು ವರ್ಷಗಳಿಂದ ಜಿಲ್ಲೆಗೆ ಬಂದಿರುವ ಹೇಮಾವತಿ ನೀರಿನ ಲೆಕ್ಕ ಹಾಕಿದರೆ, ಕಾವೇರಿ ಕೊಳ್ಳದ ಎಲ್ಲ ತಾಲ್ಲೂಕುಗಳ ಕೆರೆಗಳನ್ನು ತುಂಬಿಸಲು ಅವಕಾಶವಿತ್ತು. ಆದರೂ ಕೇವಲ 200 ಕೆರೆಗಳಿಗೆ ಮಾತ್ರ ಅಲ್ಪಸ್ವಲ್ಪ ನೀರು ಬಿಡಲಾಗುತ್ತಿದೆ. ಹಾಗಾದರೆ ಉಳಿದ ನೀರು ಎಲ್ಲಿಗೆ ಹೋಗುತ್ತಿದೆ ಎಂಬುದರ ಬಗ್ಗೆ ಉತ್ತರ ಸಿಕ್ಕಿಲ್ಲ. ಅಕ್ಕಪಕ್ಕದ ಕ್ಷೇತ್ರಗಳ ಜನರನ್ನು ನೀರಿನ ವಿಷಯದಲ್ಲಿ ಎತ್ತಿಕಟ್ಟುವ, ಅನುಮಾನದಿಂದ ನೋಡುವ ಕೆಲಸಕ್ಕೆ ಹೊಸ ಶಾಸಕರಾದರೂ ಇತಿಶ್ರೀ ಹಾಡಬೇಕು ಎನ್ನುತ್ತಾರೆ ಬಹಳಷ್ಟು ನೀರಾವರಿ ತಜ್ಞರು.
’ಕಳೆದ ವರ್ಷ 540 ಮಿಲಿ ಮೀಟರ್ ವಾಡಿಕೆ ಮಳೆ ಬದಲಿಗೆ 940 ಮಿಲಿ ಮೀಟರ್ ಮಳೆಯಾಗಿತ್ತು. ಹಾಗಾದರೆ ಈ ಮಳೆ ನೀರು ಎಲ್ಲಿಗೆ ಹೋಯಿತು. ಇಷ್ಟೊಂದು ಮಳೆಯಾದರೂ ಕೆರೆಗಳು ತುಂಬದಿರಲು ಕಾರಣ ಏನು? ಎಂಬುದಕ್ಕೆ ಉತ್ತರ ಕಂಡುಕೊಳ್ಳುವ ಕೆಲಸ ಹೊಸ ಶಾಸಕರುಗಳಿಂದ ಆಗಬೇಕಾಗಿದೆ’ ಎನ್ನುತ್ತಾರೆ ಜಲತಜ್ಞರು.
’ನೀರನ್ನು ವೈಜ್ಞಾನಿಕವಾಗಿ, ಪೋಲಾಗದಂತೆ ಬಳಸಿಕೊಳ್ಳುವ ಕಡೆಗೆ ಆಯಾ ಪಕ್ಷಗಳು, ಶಾಸಕರ ಚಿಂತನೆಗಳೇನು ಎಂಬುದನ್ನು ಎಲ್ಲರೂ ಮೊದಲು ಸ್ಪಷ್ಟಪಡಿಸಬೇಕು. ನಂತರ ಕೆರೆಗಳನ್ನು ತುಂಬಿಸುವ ಬಗ್ಗೆ ಮಾತನಾಡಬೇಕು’ ಎನ್ನುತ್ತಾರೆ ಕುಂದರನಹಳ್ಳಿ ರಮೇಶ್.
‘ಎಲ್ಲ ರಾಜಕಾರಣಿಗಳು ವಾಸ್ತವವನ್ನು ಮರೆ ಮಾಚುತ್ತಿದ್ದಾರೆ. ನೀರಿನ ಕುರಿತು ಅವರು ಅಧ್ಯಯನವನ್ನೇ ಮಾಡುತ್ತಿಲ್ಲ. ಅವರ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿ ನೀರನ್ನು ಪೋಲು ಮಾಡುತ್ತಿದ್ದಾರೆ. ನೀರಿನಲ್ಲಿ ಸಾಮಾಜಿಕ ನ್ಯಾಯ ಇಲ್ಲವಾಗಿದೆ’ ಎಂದೂ ಅವರು ಹೇಳಿದರು.
’ಜಿಲ್ಲೆಗೆ ಹೇಮಾವತಿ ನೀರು ಬರಲು ಕಾರಣವಾದ, ಸರ್ಕಾರದ ನೆರವನ್ನೂ ಪಡೆಯದೆ ಯೋಜನೆ ರೂಪಿಸಿಕೊಟ್ಟ ನೀರಾವರಿ ತಜ್ಞ ಪರಮಶಿವಯ್ಯ ಅವರ ಹೆಸರನ್ನು 0–72 ಕಿಲೋ ಮೀಟರ್ ನ ಆಧುನೀಕರಣಗೊಂಡ ಹೇಮಾವತಿ ನಾಲೆಗೆ ಇಡಬೇಕು. ನೀರಿನ ಸಾಕ್ಷರತೆ, ಅದರ ಬಳಕೆ ಬಗ್ಗೆ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆಗಳಾಗಬೇಕು. ರಾಜಕಾರಣಕ್ಕಾಗಿ ನೀರನ್ನು ಬಳಸುವ ರಾಜಕೀಯವನ್ನು ಹೊಸ ಶಾಸಕರುಗಳು ಮಾಡಬಾರದು’ ಎನ್ನುತ್ತಾರೆ ಸಿ.ಎಸ್.ಪುರದ ರಾಮಕೃಷ್ಣ.
ಸ್ವಹಿತಾಸಕ್ತಿ, ಜಾತಿಗೆ ಬಲಿಯಾದ ನೀರು...
ಜಿಲ್ಲೆಯ ಹೇಮಾವತಿ ನೀರಿನ ಈವರೆಗಿನ ಹಂಚಿಕೆಯ ಕಡೆ ಸೂಕ್ಷ್ಮವಾಗಿ ಗಮನ ಹರಿಸಿದರೆ ಆಯಾ ಕ್ಷೇತ್ರಗಳ ಶಾಸಕರ (ಎಸ್.ಆರ್.ಶ್ರೀನಿವಾಸ್ ಬಿಟ್ಟು ಉಳಿದವರು ಸೋತಿದ್ದಾರೆ) ಸ್ವ ಹಿತಾಸಕ್ತಿ, ಜಾತಿ, ಮತದ ರಾಜಕಾರಣವೇ ಎದ್ದು ಕಾಣುತ್ತದೆ.
’ತಿಪಟೂರಿನಿಂದ–ತುಮಕೂರುವರೆಗಿನ ಬಿ.ಎಚ್.ರಸ್ತೆಯ ಹೆದ್ದಾರಿಗುಂಟ ಎಡಭಾಗದಲ್ಲಿ ಲಿಂಗಾಯತರು, ಬಲಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯಇದೆ. ಈ ಎರಡೂ ಜಾತಿಗಳು ಹೆಚ್ಚಿರುವ ಊರುಗಳ ಕೆರೆಗಳು ಮಾತ್ರ ಹೇಮಾವತಿಯಿಂದ ತುಂಬಿ ತುಳುಕುತ್ತವೆ. ಇದರ ಜತೆಗೆ ಆಯಾ ಕ್ಷೇತ್ರಗಳ ಶಾಸಕರ ಊರಿನ ಕೆರೆಗಳು, ನೆಂಟರಿರುವ ಕೆರೆಗಳು, ಅವರುಗಳು ಜಮೀನು ಹೊಂದಿರುವ ಹತ್ತಿರದ ಕೆರೆಗಳಿಗೆ ಪ್ರತಿ ಸಲ ಹೇಮಾವತಿ ನೀರು ಬಿಡಲಾಗುತ್ತದೆ. ಇದೇ ಕಾರಣದಿಂದಲೇ ಸಾಕಷ್ಟು ನೀರು ಪೋಲಾಗುತ್ತಿದೆ’ ಎಂದು ಕಾವೇರಿ ನೀರಾವರಿ ನಿಗಮದ ಅಧಿಕಾರಿಯೊಬ್ಬರು ಹೇಳಿದರು.
’ತಮ್ಮ ಪರವಾಗಿರುವ, ತಮ್ಮ ಜಾತಿಯವರು ಹೆಚ್ಚಿರುವ, ಹೆಚ್ಚು ಮತ ತಂದುಕೊಡುವ ಊರುಗಳ ಕೆರೆಗೆ ಮೊದಲು ನೀರು ಬಿಡಬೇಕು ಎಂದು ರಾಜಕಾರಣಿಗಳು ಒತ್ತಾಯಿಸುತ್ತಾರೆ. ಹೀಗಾಗಿ ನೀರಿನ ನಿರ್ವಹಣೆ ಸರಿಯಾಗಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಚಿನ್ನಾಭರಣ ಮಾರಿದ್ದಾರೆ...
‘ತೋಟ ಉಳಿಸಿಕೊಳ್ಳಲು ಹೆಂಡತಿ–ಮಕ್ಕಳ ಚಿನ್ನಾಭರಣ ಮಾರಿದವರು ಜಿಲ್ಲೆಯಲ್ಲಿ ಸಾವಿರಾರು ಜನರಿದ್ದಾರೆ. ಕೊಳವೆ ಬಾವಿಗಳು ಒಣಗಿ ತೋಟ–ತುಡಿಕೆ ಕಳೆದುಕೊಂಡು ಊರು ಬಿಟ್ಟು ಹೋಗಿರುವ ಸಾವಿರಾರು ಕುಟುಂಬಗಳಿವೆ. ನೂರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎನ್ನುತ್ತಾರೆ ಕುಂದರನಹಳ್ಳಿ ರಮೇಶ್.
’ಜಿಲ್ಲೆಯ ಜನರ ವಲಸೆ, ರೈತರ ಆತ್ಮಹತ್ಯೆಗಳನ್ನು ತಪ್ಪಿಸಬೇಕಾದರೆ ಎಲ್ಲ ಕೆರೆಗಳನ್ನು ತುಂಬಿಸುವುದೊಂದೆ ಪರಿಹಾರವಾಗಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಈಗಿರುವ ನೀರಿನ ಲಭ್ಯತೆ ಅನುಸರಿಸಿ ಪ್ರತ್ಯೇಕವಾಗಿ ಯೋಜನೆ ರೂಪಿಸಬೇಕು’ ಎಂದು ಅವರು ಹೇಳಿದರು. ಸಾಮಾಜಿಕ ನ್ಯಾಯದಡಿ ಎಲ್ಲ ಊರಿನ ಕೆರೆಗಳನ್ನು ತುಂಬಿಸಲು ಅವಕಾಶವಿದೆ. ನಮಗೆ ಈಗ ಸಿಕ್ಕಿರುವ ನೀರಿನಲ್ಲೆ ಎಲ್ಲ ಕೆರೆಗಳನ್ನು ಪೂರ್ಣವಾಗಿ ತುಂಬಿಸಲು ಸಾಧ್ಯವಾಗದಿದ್ದರೂ ಅರ್ಧದಷ್ಟಾದರೂ ತುಂಬಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಅಧಿಕೃತಗೊಳಿಸಿ...
‘ಸಾಕಷ್ಟು ಕೆರೆಗಳಿಗೆ ಆಯಾ ಗ್ರಾಮದವರೇ ಹಣ ಹಾಕಿಕೊಂಡು ಕಾಲುವೆ, ಪೈಪ್‌ಲೈನ್ ಮೂಲಕ ಹೇಮಾವತಿ ನೀರು ಹರಿಸಿಕೊಂಡಿದ್ದಾರೆ. ಇಂಥ ಕೆರೆಗಳಿಗೆ ನೀರು ಹಂಚಿಕೆಯನ್ನು ಕಾನೂನು ಬದ್ಧಗೊಳಿಸಬೇಕು’ ಎನ್ನುತ್ತಾರೆ ಬೆಲೆ ಕಾವಲು ಸಮಿತಿ ಕಾರ್ಯದರ್ಶಿ ಶ್ರೀಕಾಂತ ಕೆಳಗಿನಹಟ್ಟಿ.
‘ಈಗ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆ ಮಾಡಿರುವ ನೀರನ್ನು ವಾಪಸ್ ಪಡೆದು ಅದನ್ನು ಅಂತರ್ಜಲ ವೃದ್ಧಿಗೆ ಮರು ಹಂಚಿಕೆ ಮಾಡಬೇಕು. ಕೆರೆಗಳು ತುಂಬಿದರೆ ಅಂತರ್ಜಲ ತಾನಾಗಿಯೇ ವೃದ್ಧಿಗೊಳ್ಳಲಿದೆ. ಕೊಳವೆಬಾವಿಗಳ ಮೂಲ
ಕವೇ ರೈತರು ಬದುಕು ಸುಧಾರಿಸಿಕೊಳ್ಳುತ್ತಾರೆ’ ಎಂದು ಅಭಿಪ್ರಾಯಪಟ್ಟರು.
ಖೋತಾ ನೀರು ಮತ್ತೆ ಪಡೆಯಲಿ
ಹೇಮಾವತಿ ನೀರಾವರಿ ಯೋಜನೆ ವೇಳೆ ಜಿಲ್ಲೆಗೆ 30 ಟಿಎಂಸಿ ಅಡಿ ನೀರು ಹಂಚಿಕೆಯಾಗಿತ್ತು. ಆದರೆ ಕಾವೇರಿ ನ್ಯಾಯಾಧೀಕರಣ ಮಧ್ಯಂತರ ತೀರ್ಪಿನ ನಂತರ 5.5 ಟಿಎಂಸಿ ಅಡಿ ನೀರನ್ನು ಖೋತಾ ಮಾಡಲಾಗಿತ್ತು. ನ್ಯಾಯಾಧೀಕರಣ ಅಂತಿಮ ತೀರ್ಪಿನ ಬಳಿಕ ರಾಜ್ಯಕ್ಕೆ 10 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಸಿಕ್ಕಿದೆ. ಈ ಹಿಂದೆ ಜಿಲ್ಲೆಗೆ ಖೋತಾ ಮಾಡಿದ್ದ ನೀರನ್ನು ಮರು ಹಂಚಿಕೆ ಮಾಡಿಸಿಕೊಳ್ಳಬೇಕಾಗಿದೆ. ಆದರೆ ಈ ಬಗ್ಗೆಯೂ ಶಾಸಕರು ಗಮನ ಗರಿಸಬೇಕಾಗಿದೆ.
ಈ ನೀರಿನ ಬಗ್ಗೆ ಮೌನವೇಕೆ?
ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರಿನಲ್ಲೇ ರಾಮನಗರ ಜಿಲ್ಲೆಗೆ 1 ಟಿಎಂಸಿ ಅಡಿ, ದಾಬಸಪೇಟೆ ಕೈಗಾರಿಕಾ ಪ್ರದೇಶಕ್ಕೆ 0.5 ಟಿಎಂಸಿ ಅಡಿ ಹಾಗೂ ನಾಗಮಂಗಲಕ್ಕೆ ಕುಡಿಯುವ ನೀರನ್ನು ಹಂಚಿಕೆ ಮಾಡಲಾಗಿದೆ.
’ಈ ಯೋಜನೆಗಳ ಬಗ್ಗೆ ಹೊಸ ಶಾಸಕರು ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಬೇರೆ ಜಿಲ್ಲೆಗಳಿಗೆ, ಕೈಗಾರಿಕೆಗೆ ಕೊಟ್ಟರೆ ಕೃಷಿಕರಿಗೆ ನೀರನ್ನು ಎಲ್ಲಿಂದ ತರಲು ಸಾಧ್ಯ. ನಿಟ್ಟೂರು ಬಳಿಯ ಉದ್ದೇಶಿತ ಎಚ್‌ಎಎಲ್‌ಗೆ ಹಂಚಿಕೆಯಾಗಿರುವ ನೀರನ್ನು ವಾಪಸ್ ಪಡೆಯಬೇಕು. ಕೊಳಚೆ ನೀರನ್ನು ಮಾತ್ರ ಕೈಗಾರಿಕೆಗಳಿಗೆ ನೀಡುವ ಗಟ್ಟಿ ನಿರ್ಧಾರವನ್ನು ತಾಳಬೇಕಾಗಿದೆ’ ಎನ್ನುತ್ತಾರೆ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬಿ.ಎಸ್.ದೇವರಾಜ್.
’ನಾಗಮಂಗಲಕ್ಕೆ ಜಿಲ್ಲೆಯ ನೀರು ಕೊಡಬಾರದು ಎಂದು ಕುಣಿಗಲ್‌ನ ರೈತ ಸಂಘದ ಮುಖಂಡ ಆನಂದ್ ಪಟೇಲ್ ಹೋರಾಟ ಮಾಡಿದ್ದಾರೆ. ಈ ಬಗ್ಗೆ ಅಲ್ಲಿನ ಶಾಸಕರು ಸಹಿತ ಜಿಲ್ಲೆಯ ಶಾಸಕರು ನಿಲುವು ವ್ಯಕ್ತಪಡಿಸಬೇಕು’ ಎಂದರು.
ಇನ್ನೆರಡು ಹೊಸ ಯೋಜನೆಗಳು...!
ಇನ್ನೂ ಎರಡು ಯೋಜನೆಗಳಿಂದ ಜಿಲ್ಲೆಗೆ ನೀರು ತರುವ ಬಗ್ಗೆ ಸಮೀಕ್ಷೆ ನಡೆಯುತ್ತಿದೆ. ಲಿಂಗನಮಕ್ಕಿ, ಕುಮಾರಧಾರ ನದಿಗಳಿಂದ ತಲಾ 10 ಟಿಎಂಸಿ ಅಡಿಯಷ್ಟು ನೀರು ತರುವ ಸಾಧ್ಯತೆ ಇದೆ. ಈ ಎರಡೂ ಯೋಜನೆಗಳ ನೀರನ್ನು ಈಗ ಮಾಡುತ್ತಿರುವ ಎತ್ತಿನಹೊಳೆ ಕಾಲುವೆಯಲ್ಲಿ ಗುರುತ್ವಾಕರ್ಷಣೆ ಮೂಲಕ ತರಬಹುದು. ಈ ಯೋಜನೆಗಳ ಜಾರಿಗೆ ಹೊಸ ಶಾಸಕರು ಸರ್ಕಾರದ ಮೇಲೆ ಒತ್ತಡ ಹಾಕಬೇಕಾಗಿದೆ.
ಇನ್ನಾದರೂ ಪರಿಹಾರ ನೀಡಿ
’ಇಲ್ಲಿಯತನಕ ನೀರಿನ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡಿಲ್ಲ. ಕೆರೆಗಳನ್ನು ತುಂಬಿಸುವ ಮಾರ್ಗ
ಗಳನ್ನು ಇನ್ನಾದರೂ ಕಣ್ತೆರೆದು ನೋಡಬೇಕಾಗಿದೆ’ ಎಂದು ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಮುಖಂಡ ಕಾಡಶೆಟ್ಟಿಹಳ್ಳಿ ಸತೀಶ್.
ಹೇಮಾವತಿ ಯೋಜನೆಯ ಮೂಲ ಉದ್ದೇಶವೇ ಈಡೇರಿಲ್ಲ. ಜನರನ್ನು ನೀರಿನ ವಿಷಯದಲ್ಲಿ ವಂಚಿಸ ಲಾಗುತ್ತಿದೆ. ವರ್ಷ ವರ್ಷವೂ ಹೊಸ ಹೊಸ ಕಾಲುವೆಗಳನ್ನು ಮಾಡುತ್ತಾ ಹಣ ಪೋಲು ಮಾಡಲಾಗುತ್ತಿದೆ. ಎಲ್ಲ ಪಕ್ಷಗಳ ಶಾಸಕರು ಒಂದೇ ವೇದಿಕೆಯಡಿ ಬಂದು ನೀರಿನ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕು. ಈ ಬಗ್ಗೆ ಸಾರ್ವಜನಿಕರ ಚರ್ಚೆಗೆ ವೇದಿಕೆ ರೂಪಿಸಿಕೊಡಬೇಕು’ ಎಂದು ಹೇಳಿದರು.
ಹೊಲಗಾಲುವೆ: ತನಿಖೆಯಾಗಲಿ
ಅಚ್ಚುಕಟ್ಟು ಪ್ರದೇಶಕ್ಕೆ ನೀರು ಕೊಡುವುದಾಗಿ ದಶಕದಿಂದ ಕಾವೇರಿ ಕೊಳ್ಳದ ಹಳ್ಳಿ–ಹಳ್ಳಿಗಳಲ್ಲಿ ಕಾವೇರಿ ನೀರಾವರಿ ನಿಗಮ ಹೊಲಗಾಲುವೆಗಳನ್ನು ನಿರ್ಮಿಸುತ್ತಿದೆ. ನೀರು ನೀಡದಿದ್ದರೂ ಇಂಥ ಕಾಲುವೆಗಳಿಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಈ ಬಗ್ಗೆ ತನಿಖೆಯಾಗಬೇಕಾಗಿದೆ ಎಂದು ಹಳ್ಳಿಗಳ ಜನರು ಹೇಳುತ್ತಾರೆ.
ಈ ಕಾಲುವೆಗಳನ್ನು ನಿರ್ವಹಣೆ ಮಾಡುವವರೇ ಇಲ್ಲವಾಗಿದ್ದಾರೆ. ಬಹುತೇಕ ಕಡೆಗಳಲ್ಲಿ ಮುಚ್ಚಿ ಹೋಗಿವೆ. ಕಬ್ಬಿಣದ ಗೇಟ್‌ಗಳನ್ನು ಕಿತ್ತುಕೊಂಡು ಮಾರಾಟ ಮಾಡಲಾಗಿದೆ. ಜಿಲ್ಲೆಯ ಶಾಸಕರು ಈ ಬಗ್ಗೆ ಮಾತನಾಡಬೇಕು ಎಂದು ಒತ್ತಾಯಿಸುತ್ತಾರೆ.
ಅಧ್ಯಯನಕ್ಕೆ ‘ನದಿಗುಂಟ ನಡಿಗೆ’
’ಪರಿಸರ ಚಿಂತಕರಾದ ಸಿ.ಯತಿರಾಜು, ಡಾ.ಜಿ.ವಿ.ಆನಂದಮೂರ್ತಿ ಅವರ ತಂಡ ಜಿಲ್ಲೆಯಲ್ಲಿರುವ ನದಿಗಳ ಅಧ್ಯಯನಕ್ಕೆ ’ನದಿಗುಂಟ ನಡಿಗೆ’ ಆರಂಭಿಸಿದೆ. ಬತ್ತಿ ಹೋಗುತ್ತಿರುವ ಈ ನದಿಗಳನ್ನು ಉಳಿಸಿಕೊಳ್ಳುವ ಯತ್ನವಾಗಿ ಈ ನಡಿಗೆ ಮಾಡಲಾಗುತ್ತಿದೆ. ಆದರೆ ಈ ಕೆಲಸವನ್ನು ಯಾವೊಂದು ರಾಜಕೀಯ ಪಕ್ಷವೂ ಬೆಂಬಲಿಸುವ ಮಾತನಾಡಿಲ್ಲ. ನದಿ ಉಳಿಸಿಕೊಳ್ಳುವ, ಕೆರೆ ಪಾತ್ರಗಳನ್ನು, ನದಿ ಪಾತ್ರಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟಿ, ಅವುಗಳನ್ನು ಉಳಿಸಿಕೊಳ್ಳುವ ಬಗ್ಗೆ ಶಾಸಕರು ತಮ್ಮ ನಿಲುವು ಸ್ಪಷ್ಟಪಡಿಸಬೇಕು’ ಎನ್ನುತ್ತಾರೆ ಡಿವೈಎಫ್‌ಐ ಜಿಲ್ಲಾ ಘಟಕದ ಕಾರ್ಯದರ್ಶಿ ಎಸ್.ರಾಘವೇಂದ್ರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.